ಶುಕ್ರವಾರ, ಏಪ್ರಿಲ್ 23, 2021
22 °C

ಭೂಮಿ ಸವೆತ: ಸಂಪನ್ಮೂಲ ಕೊರೆತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೂ ಸವೆತ ಕೃಷಿಯನ್ನು ಕಾಡುವ ಅತಿದೊಡ್ಡ ಸಮಸ್ಯೆ. ಇದರಿಂದ ಮಣ್ಣಿನ ಫಲವತ್ತತೆ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಇಳುವರಿ ಕುಂಠಿತಗೊಂಡು ರೈತರು ಹಾನಿ ಅನುಭವಿಸುವಂತಾಗುತ್ತದೆ.ಸವೆತವು ಸ್ವಾಭಾವಿಕ ಪರಿಸರದಲ್ಲಿ ಸಾಮಾನ್ಯವಾಗಿ ಹರಿವ ನೀರು, ಬೀಸುವ ಗಾಳಿಯಿಂದ ನಿರಂತರವಾಗಿ ಸಂಭವಿಸುವ ಪ್ರಕ್ರಿಯೆ. ನೈಸರ್ಗಿಕ ಸಸ್ಯ ವರ್ಗದ ಭೂಮಿಗಿಂತ ಕೈಗಾರಿಕೆ ಮತ್ತು ಕೃಷಿಗೆ ಬಳಸಲಾಗುವ ಭೂಮಿ ಹೆಚ್ಚಿನ ಪ್ರಮಾಣದ ಸವೆತಕ್ಕೆ ಗುರಿಯಾಗುತ್ತದೆ. ವಿಶೇಷವಾಗಿ ಭೂಮಿಯನ್ನು ಉಳುಮೆಗೆ ಬಳಸುವ ವಿಚಾರದಲ್ಲಿ ಇದು ನಿಜ.ಭೂ ಸವೆತ ನೆಲದ ಮೇಲ್ಭಾಗದಲ್ಲಿ ಸಸ್ಯಗಳ ಹೊದಿಕೆಯನ್ನು ಕಡಿಮೆ ಮಾಡುತ್ತದೆ ಹಾಗೂ ಮಣ್ಣಿನ ರಚನೆ ಮತ್ತು ಸಸ್ಯದ ಬೇರುಗಳೆರಡಕ್ಕೂ ಹಾನಿ ಉಂಟುಮಾಡುತ್ತದೆ. ಆದಾಗ್ಯೂ, ಸುಧಾರಿತ ಭೂಬಳಕೆ ಪದ್ಧತಿಗಳಿಂದ ಸವೆತವನ್ನು ಸಾಕಷ್ಟು ಮಟ್ಟಿಗೆ ತಪ್ಪಿಸಬಹುದು. ಸವೆತದ ಪ್ರಮಾಣವು ಅನೇಕ ಅಂಶಗಳ ಮೇಲೆ ಅವಲಂಬಿತವಾಗಿದೆ.ಹವಾಮಾನದ ಅಂಶಗಳಲ್ಲಿ ಮಳೆ ಪ್ರಮಾಣ ಮತ್ತು ತೀವ್ರತೆ, ಉಷ್ಣತೆ, ಋತುಗಳು, ಗಾಳಿಯ ವೇಗ ಮತ್ತು ಬಿರುಗಾಳಿಯ ಆವರ್ತನ ಸೇರಿವೆ. ಬೌಗೋಳಿಕ ಅಂಶಗಳಲ್ಲಿ ಸೆಡಿಮೆಂಟ್ (ನೀರಿನಡಿ ಶೇಖರವಾಗುವ ಘನವಸ್ತು ಕಣ) ಅಥವಾ ಕಲ್ಲಿನ ವಿಧ, ಅದರ ಸಾಂದ್ರತೆ ಮತ್ತು ಒಳವ್ಯಾಪ್ತಿ, ನೆಲದ ಇಳಿಜಾರು, ಕಲ್ಲುಗಳಲ್ಲಿ ಬಾಗಿದ ಮತ್ತು ದೋಷಪೂರಿತ ಪದರಗಳು ಅಥವಾ ಬಿರುಕುಗಳು ಸೇರಿವೆ. ಜೈವಿಕ ಅಂಶಗಳಲ್ಲಿ ಸಸ್ಯವರ್ಗದಿಂದ ಮುಚ್ಚಿದ ಭೂಮಿ ಅಥವಾ ಅದರ ಕೊರತೆ, ಆ ಪ್ರದೇಶದಲ್ಲಿ ವಾಸವಿರುವ ಜೀವಿಗಳ ವಿಧ ಮತ್ತು ಭೂಮಿಯ ಬಳಕೆ ಸೇರಿದೆ.ಪ್ರಾಣಿಗಳ ಅತೀ ಮೇಯುವಿಕೆ ಸಹ ಸಸ್ಯರಾಶಿಯನ್ನು ಕುಂಠಿತಗೊಳಿಸಿ ಸವೆತವನ್ನು ಹೆಚ್ಚಿಸುತ್ತದೆ. ಒಂದು ಪ್ರದೇಶದ ಸಸ್ಯವರ್ಗದಲ್ಲಿ ಆಗುವ ಬದಲಾವಣೆ ಕೂಡ ಸವೆತದ ಪ್ರಮಾಣದ ಮೇಲೆ ಪರಿಣಾಮ ಉಂಟುಮಾಡುತ್ತದೆ.ನೀರಿನಿಂದ ಉಂಟಾಗುವ  ಮಣ್ಣು ಸವೆತದಲ್ಲಿ ಸ್ಪ್ಲಾಷ್ ಎರೋಷನ್, ಶೀಟ್ ಎರೋಷನ್, ರಿಲ್ ಎರೋಷನ್ ಮತ್ತು ಗಲ್ಲಿ ಎರೋಷನ್ ಎಂಬ ನಾಲ್ಕು ವಿಧ. ಇದರಲ್ಲಿ ಯಾವುದೇ ಪ್ರಕಾರ ಇದ್ದರೂ ಭೂಮಿಯ ಮೇಲ್ಮೈ ಸವೆತ ಉಂಟಾಗಿ ಅದರ ಗುಣಧರ್ಮದ ಮೇಲೆ ಪ್ರಭಾವ ಬೀರುತ್ತದೆ.ನೀರು ಭೂಮಿಯ ಮೇಲೆ ವೇಗವಾಗಿ ಹರಿದು ಕೊರಕಲು ಉಂಟು ಮಾಡದಂತೆ ತಡೆಯುವುದೇ ಭೂ ಸವಕಳಿ ನಿಯಂತ್ರಣದ ಪರಿಣಾಮಕಾರಿ ಉಪಾಯ. ಮಾಹಿತಿಗೆ: 89516 85646, 99001 26729.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.