ಮಂಗಳವಾರ, ಮೇ 18, 2021
29 °C

ಭೂಮಿ ಹಂಚಿಕೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಹೆಚ್ಚುವರಿ ಭೂಮಿಯಲ್ಲಿನ ಶೇ. 75ರಷ್ಟು ಭೂಮಿಯನ್ನು ದಲಿತರಿಗೆ ಹಂಚುವ ಘೋಷಣೆಯನ್ನು ಜಾರಿಗೊಳಿಸಬೇಕು ಎಂದು ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ಒತ್ತಾಯಿಸಿದೆ.ಸರ್ಕಾರದ ಹೆಚ್ಚುವರಿ ಭೂಮಿಯಲ್ಲಿ ಶೇ. 75ರಷ್ಟನ್ನು ದಲಿತರಿಗೆ, ಆದಿವಾಸಿಗಳಿಗೆ ಮೀಸಲಿಟ್ಟು ಹಂಚಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 1992ರ ಏಪ್ರಿಲ್ 21ರಂದು ಅನ್ವಯವಾಗುತ್ತದೆ ಎಂದು ಎಂದು ಘೋಷಣೆ ಮಾಡಿದ್ದವು. ಆದರೆ, ಇಲ್ಲಿಗೆ 20 ವರ್ಷಗಳು ಕಳೆದರೂ ಹೆಚ್ಚುವರಿ ಭೂಮಿಯನ್ನು ಸಮರ್ಪಕವಾಗಿ ಇಲ್ಲಿಯವರೆಗೂ ಹಂಚಲು ಸಾಧ್ಯವಾಗದೇ ದಲಿತ ಸಮುದಾಯಗಳಿಗೆ ಮಹಾದ್ರೋಹ ಮಾಡಲಾಗಿದೆ ಎಂದು ರಾಜ್ಯ ಸಂಚಾಲಕ ಬಸವರಾಜ್ ಕೌತಾಳ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಭೂಮಿಯನ್ನು ರಾಷ್ಟ್ರೀಕರಣ ಮಾಡುವ ಕ್ರಾಂತಿಕಾರಿ ಆಶಯಗಳನ್ನು ಜಾರಿಗೆ ತರುವ ಎದೆಗಾರಿಕೆ ಜಾತಿವಾದಿ ಭೂಮಾಲೀಕ ಸರ್ಕಾರಗಳಿಗೆ ಇಲ್ಲ ಎನ್ನುವುದು ಸತ್ಯ. ಆದರೆ, ಅಂಬೇಡ್ಕರ್ ಶತಮನೋತ್ಸವದಂದು ಸರ್ಕಾರಗಳೇ ಘೋಷಿಸಿದಂತೆ ಒಟ್ಟು ಹೆಚ್ಚುವರಿ ಭೂಮಿಯಲ್ಲಿ ಶೇ. 75ರಷ್ಟು ಭೂಮಿ ಮೀಸಲಿಟ್ಟು ದಲಿತರಿಗೆ, ಆದಿವಾಸಿಗಳಿಗೆ ಹಂಚಿದರೆ ಆಗ ಅರ್ಥಪೂರ್ಣವಾದ ಅಂಬೇಡ್ಕರ್ ಜಯಂತಿ ಆಚರಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಭೂಮಿಗಾಗಿ ಹಕ್ಕೊತ್ತಾಯಿಸಿ ಎ. 13ರಂದು 21 ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.ರಾಜ್ಯ ಸಂಘಟನಾ ಸಂಚಾಲಕ ಮಾಡನಾಯಕನಹಳ್ಳಿ ರಂಗಪ್ಪ ಮಾತನಾಡಿ, ನಾಯಕನಹಟ್ಟಿ ಹೋಬಳಿಯ ಹಿರೇಕೆರೆ ಕಾವಲು ಪ್ರದೇಶದಲ್ಲಿ ಸಾವಿರಾರು ಎಕರೆ ಸರ್ಕಾರಿ ಜಮೀನಿನಲ್ಲಿ ಬಲಿಷ್ಠರು ಮಾತ್ರ ಸಾಗುವಳಿ ಮಾಡುತಿದ್ದಾರೆ. ಬಡವರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಈ ಅಕ್ರಮವನ್ನು ಸರ್ಕಾರ ತಡೆಗಟ್ಟಲಿ ಎಂದು ಆಗ್ರಹಿಸಿದರು.ಚಳ್ಳಕೆರೆ ತಾಲ್ಲೂಕು ಜಾಜೂರು ಕಾವಲು ರಿ.ಸ.ನಂ.64ರಲ್ಲಿ 72 ಭೂಹೀನ ದಲಿತ ಕುಟುಂಬಗಳಿಗೆ ಕೂಡಲೇ ಹಕ್ಕು ಪತ್ರ ನೀಡಬೇಕು. ಅದೇ ರೀತಿ ಬೊಮ್ಮನಕುಂಟೆ ರಿ.ಸ.ನಂ. 29ರಲ್ಲಿ 39 ಕುಟುಂಬಗಳಿಗೆ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿದ್ದಾರೆ.ಭೀಮನಕೆರೆ ಶಿವಮೂರ್ತಿ, ಎನ್. ಪ್ರಕಾಶ್, ಎನ್. ಹೊನ್ನೂರು ಸ್ವಾಮಿ ಮತ್ತಿತರರು ಹಾಜರಿದ್ದರು.ಕಡಿವಾಣ ಬೇಡಜಯಂತಿಗಳ ಹೆಸರಿನಲ್ಲಿ ಮಾಂಸಾಹಾರ ಸೇವಿಸಲು ಸರ್ಕಾರ ಕಡಿವಾಣ ಹಾಕಬಾರದು ಎಂದು ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ರಾಜ್ಯ ಸಂಚಾಲಕ ಬಸವರಾಜ್ ಕೌತಾಳ್ ಅಭಿಪ್ರಾಯಪಟ್ಟರು.ಮಾಂಸ ಸೇವನೆಗೆ ಯಾವುದೇ ಕಟ್ಟಳೆಗಳನ್ನು ಸರ್ಕಾರ ಹಾಕಬಾರದು. ಜಯಂತಿಗಳಿಗೂ ಆಹಾರ ಸೇವೆನೆಗೂ ಸಂಬಂಧವಿಲ್ಲ. ಇದನ್ನೂ ಕಾನೂನಿನ ಜತೆ ತಾಳೆ ಹಾಕಬಾರದು. ಮಾಂಸಾಹಾರ ಸೇವಿಸುವುದು ವೈಯಕ್ತಿಕ ವಿಚಾರ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.