ಸೋಮವಾರ, ಜನವರಿ 20, 2020
27 °C

ಭೂಮಿ ಹಕ್ಕು ಕೇಳಿದರೆ ದಲಿತರು ಶತ್ರುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ದಲಿತರಿಗೆ ಭೂಮಿ ಇಲ್ಲದ ಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್.ದ್ವಾರಕಾನಾಥ್ ವಿಷಾದ ವ್ಯಕ್ತಪಡಿಸಿದರು.ನಗರ ಹೊರವಲಯದ ಚೊಕ್ಕ ಕನ್ವೆನ್ಷನ್ ಹಾಲ್‌ನಲ್ಲಿ ಶುಕ್ರವಾರ ಆದಿಮ ಶಕ್ತಿ ದಲಿತ ಮಹಿಳಾ ಒಕ್ಕೂಟ ಏರ್ಪಡಿಸಿದ್ದ ಭೂ ಹಕ್ಕಿನ ಉಲ್ಲಂಘನೆ ಕುರಿತ ಸಾರ್ವಜನಿಕ ಅಹವಾಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭೂ ಹಕ್ಕಿನ ಉಲ್ಲಂಘನೆ ಬಗ್ಗೆ ಸಾರ್ವಜನಿಕ ಅಹವಾಲು ಹಮ್ಮಿಕೊಳ್ಳುವ ಸನ್ನಿವೇಶ ನಿರ್ಮಾಣವಾಗಿರುವುದು ವಿಷಾದನೀಯ. ಅಂಥ ದಯನೀಯ ಸ್ಥಿತಿಯಲ್ಲಿ ದಲಿತರಿದ್ದಾರೆ. ಅವರು ಏನು ಕೇಳಿದರೂ ಯಾರೂ ವಿರೋಧಿಸುವುದಿಲ್ಲ. ಆದರೆ ಭೂಮಿ ಹಕ್ಕು ಕೇಳಿದ ಕೂಡಲೇ ಅವರು ಶತ್ರುಗಳಾಗಿಬಿಡುತ್ತಾರೆ ಎಂದರು.ಭೂಮಿಯ ಸಮಸ್ಯೆ ಎದುರಿಸುವ ಸಲುವಾಗಿಯೇ 35 ವರ್ಷದ ಹಿಂದೆ ದಲಿತ ಚಳವಳಿ ಆರಂಭವಾಯಿತು. ನಕ್ಸಲರ ಹೋರಾಟವೂ ಭೂಮಿಯ ಹಕ್ಕಿಗೆ ಸಂಬಂಧಿಸಿದ್ದೇ ಆಗಿದೆ. ಆದರೆ ಅದಕ್ಕೆ ಅವರು ಅನುಸರಿಸಿರುವ ಹಿಂಸೆ ದಾರಿ ಸರಿಯಲ್ಲ. ಇದೇ ವೇಳೆ ಭೂಮಿ ಹೋರಾಟದಿಂದ ದಲಿತ ಸಂಘರ್ಷ ಸಮಿತಿಯೂ ವಿಮುಖವಾಗಿದೆ.ಕಳೆದ 10-15 ವರ್ಷದಲ್ಲಿ ಭೂಮಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ದಸಂಸ ಕೈಗೆತ್ತಿಕೊಂಡಿಲ್ಲ ಎಂದರು.ದಲಿತರ ಮೇಲಿನ ಸಾಮಾನ್ಯ ಹಲ್ಲೆಯಿಂದ, ಸಾಮೂಹಿಕವಾಗಿ ಸುಡುವವರೆಗೆ ನಡೆದಿರುವ ಎಲ್ಲ ದೌರ್ಜನ್ಯ ಪ್ರಕರಣಗಳೂ ಭೂಮಿಗೆ ಸಂಬಂಧಿಸಿದವೇ ಆಗಿವೆ. ಮೇಲ್ವರ್ಗದ, ಮೇಲ್ಜಾತಿಯವರು ದಲಿತರ ಭೂಮಿ ಹಕ್ಕನ್ನೇ ಕೊಂದಿದ್ದಾರೆ. ಭೂಮಿಯ ಹಕ್ಕಿನ ಪ್ರಶ್ನೆಗಳಿಂದಲೇ ಸಮಾಜದಲ್ಲಿ ಜಾತಿ ಸಂಬಂಧ ಏರ್ಪಟ್ಟಿವೆ. ಈಗಲೂ ಮುಂದುವರಿಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಅಲೆಮಾರಿಗಳು ಯಾಕೆ ಒಂದೆಡೆ ನಿಲ್ಲದವರಾಗಿದ್ದಾರೆ ಎಂದರೆ ಭೂಮಿಯ ಜೊತೆಗಿನ ಬಾಂಧವ್ಯ ಭಾವನೆಯನ್ನು ಅವರಿಂದ ಕಿತ್ತುಕೊಳ್ಳಲಾಗಿದೆ. ಭೂಮಿ ಜೊತೆಗಿನ ಭಾವನಾತ್ಮಕ ಬಾಂಧವ್ಯವನ್ನು ಈ ದೇಶದ ಜಾತಿ ಪದ್ಧತಿ ನಾಶ ಮಾಡಿದೆ.ಭೂಮಿಯ ಮೇಲಿನ ಹಕ್ಕನ್ನು ದಲಿತರಿಗೆ ನಿರಾಕರಿಸುವ ಪರಿಪಾಠ ಈಗಲೂ ನಿರಾತಂಕವಾಗಿ ನಡೆಯುತ್ತಲೇ ಇದೆ ಎಂದು ಅಭಿಪ್ರಾಯಪಟ್ಟರು.ಸರ್ಕಾರವೇ ಭೂಮಾಲೀಕ: ಹಿಂದೆ ಜಮೀನುದಾರರು, ಶ್ರೀಮಂತರು ಭೂ ಮಾಲೀಕರಾಗಿರುತ್ತಿದ್ದರು. ಈಗ ಆ ವ್ಯವಸ್ಥೆಯೂ ನಶಿಸಿದೆ. ಈಗ ಸರ್ಕಾರವೇ ದೊಡ್ಡ ಭೂ ಮಾಲೀಕನ ಪಾತ್ರ ನಿರ್ವಹಣೆ ಮಾಡುತ್ತಿದೆ. ಹೀಗಾಗಿ ಭೂಮಿಯ ಹಕ್ಕಿನ ಬಗೆಗಿನ ಹೋರಾಟವೂ ಅಪ್ರಸ್ತುತವಾಗಿ ಕಾಣುತ್ತಿದೆ ಎಂದರು.ಕೃಷಿ ಜಮೀನನ್ನು ಯಾವುದೇ ಕಾರಣಕ್ಕೂ ಕೈಗಾರಿಕೆಗಳಿಗೆ ಬಳಸಬಾರದು, ನೀಡಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಸೂಚನೆ ನೀಡಿದೆ. ಆದರೆ ಯಾವ ಸರ್ಕಾರವೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ.ಹೊರಗಿನಿಂದ ಉದ್ಯಮಿಗಳನ್ನು ಕರೆತಂದು ಕೃಷಿ ಭೂಮಿ ಮಾರುತ್ತಿದೆ. ಭೂಮಿ ಕೊಟ್ಟವರೂ ನಂತರ ಕೈಗಾರಿಕೆಗಳಲ್ಲಿ ಉತ್ತಮ ಕೆಲಸ ಮಾಡಲೂ ಅವಕಾಶವಿರುವುದಿಲ್ಲ. ಅದೆಲ್ಲ ಮೇಲ್ವರ್ಗದವರಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಜಿ.ಪಂ. ಸದಸ್ಯ ಎಸ್. ಬಿ.ಮುನಿವೆಂಕಟಪ್ಪ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ವಿ. ಗೀತಾ, ಸಿಕ್ರಿಂ ಮಾನವ ಹಕ್ಕುಗಳ ಸಂಸ್ಥೆಯ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಮನೋಹರ್, ವಕೀಲ ಹಾಗೂ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟಿನ ಕಮಿಷನರ್ ಅವರ ರಾಜ್ಯ ಸಲಹೆಗಾರ ಕ್ಲಿಫ್ಟ್‌ನ ರೊಜಾರಿಯೋ, ಗ್ರಾಮೀಣ ಮಹಿಳಾ ಒಕ್ಕೂಟದ ಎಂ.ಜಿ.ಪಾಪಮ್ಮ, ಆಂಧ್ರ ಪ್ರದೇಶದ ಮಾನವ ಹಕ್ಕು ಕಾರ್ಯಕರ್ತ ನರೇಂದ್ರಬಾಬು ರೆಡ್ಡಿ ಮತ್ತು ತಮಿಳುನಾಡಿನ ವೆಂಕಟಾಚಲ, ಕೆಜಿಎಫ್‌ನ ಲಾರೆನ್ಸ್ ವೇದಿಕೆಯಲ್ಲಿದ್ದರು. ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಎಂ.ನಾರಾಯಣಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಮರಿಸ್ವಾಮಿ ನಿರೂಪಿಸಿದರು.ಆದಿಮ ಶಕ್ತಿ ವಿದ್ಯಾರ್ಥಿ ಮತ್ತು ಯುವಜನ ವೇದಿಕೆ, ಸಾಮಾಜಿಕ ಪರಿವರ್ತನಾ ಜನಾಂದೋಲನ, ದಲಿತ ಸಂಘರ್ಷ ಸಮಿತಿ ಕರ್ನಾಟಕ, ದಸಂಸ ಅಂಬೇಡ್ಕರ್ ವಾದ, ಸಮತಾ ಸೈನಿಕ ದಳ, ಕರ್ನಾಟಕ ದಲಿತ ಕ್ರೈಸ್ತ ಒಕ್ಕೂಟ, ಜನವಾದಿ ಮಹಿಳಾ ಸಂಘಟನೆ, ಗ್ರಾಮೀಣ ಮಹಿಳಾ ಒಕ್ಕೂಟ ಮತ್ತು ಆಹಾರದ ಹಕ್ಕಿಗಾಗಿ ಜನಾಂದೋಲನದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು. ಜಿಲ್ಲೆಯ 33 ಮಂದಿ ಅಹವಾಲು ಸಲ್ಲಿಸಿದರು.

ಪ್ರತಿಕ್ರಿಯಿಸಿ (+)