ಭೂರಹಿತರಿಗೆ ಸರ್ಕಾರಿ ಭೂಮಿ ಅಸಾಧ್ಯ

7

ಭೂರಹಿತರಿಗೆ ಸರ್ಕಾರಿ ಭೂಮಿ ಅಸಾಧ್ಯ

Published:
Updated:

ತುಮಕೂರು: ಭೂಮಿ ಇಲ್ಲದ ಎಲ್ಲರಿಗೂ ಸರ್ಕಾರ ಭೂಮಿ ನೀಡಲು ಸಾಧ್ಯವಿಲ್ಲ. ಭೂಮಿಯಿಂದಲೇ ಬದುಕು ಸಾಧ್ಯ ಎನ್ನುವ ಮನೋಭಾವ ತೊರೆದು ಶಿಕ್ಷಣ ಮತ್ತು ಜ್ಞಾನ ಸಂಪಾದನೆಯ ಕಡೆ ಗಮನಹರಿಸಬೇಕು ಎಂದು ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ಹೇಳಿದರು.ನಗರದಲ್ಲಿ ಭೂಶಕ್ತಿ ಕೇಂದ್ರ ಬುಧವಾರ ಏರ್ಪಡಿಸಿದ್ದ ದಲಿತರ ಮತ್ತು ಬಡವರ ಭೂಮಿ ಸಂರಕ್ಷಣಾ ಸಮಾರಂಭದಲ್ಲಿ `ಭೂಮಿ ನಮ್ಮ ಹಕ್ಕು' ಕೃತಿ ಬಿಡುಗಡೆ ಮಾಡಿ ಮಾತನಾಡಿ, ಸರ್ಕಾರ ದಲಿತರಿಗೆ ಹಿಂದೆ ಬೇಕಾದಷ್ಟು ಭೂಮಿ ಕೊಟ್ಟರೂ ಉಳಿಸಿಕೊಳ್ಳಲಿಲ್ಲ. ಹೆಂಡಕ್ಕಾಗಿ ಭೂಮಿ ಮಾರಾಟ ಮಾಡಿಕೊಂಡರು ಎಂದು ವಿಷಾದಿಸಿದರು.ಇಂದು ಭೂಮಿ ನೀಡುವುದು ಸುಲಭವಲ್ಲ. ಜನರಿಗೆ ಆಶ್ರಯ ನಿವೇಶನ ಸಹ ನೀಡಲು ಸಾಧ್ಯವಾಗುತ್ತಿಲ್ಲ. ಬಗರ್‌ಹುಕುಂ ಭೂಮಿ ನೀಡಲು ಸಹ ಅರಣ್ಯ ಕಾಯ್ದೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಇರುವ ಭೂಮಿಯನ್ನು ಉಳಿಸಿಕೊಳ್ಳುವುದು ಅಗತ್ಯ. ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ 11.5 ಲಕ್ಷ ಎಕರೆ ಭೂಮಿ ಒತ್ತುವರಿಯಾಗಿದ್ದು, ತೆರವುಗೊಳಿಸಿದರೆ ಭೂರಹಿತರಿಗೆ ಭೂಮಿ ನೀಡಬಹುದು. ಆದರೆ ಅದರಲ್ಲಿಯೂ ಸಾಗುವಳಿ ಮಾಡುತ್ತಿದ್ದರೆ ತೆರವು ಕಷ್ಟ. ಬೆಂಗಳೂರಿನಲ್ಲಿಯೂ 1 ಲಕ್ಷ ಎಕರೆ ಭೂಮಿ ಒತ್ತುವರಿಯಾಗಿದೆ. ಇದರಲ್ಲಿ 33 ಸಾವಿರ ಎಕರೆ ತೆರವುಗೊಳಿಸಲಾಗಿದೆ ಎಂದರು.ಪರಿಶಿಷ್ಟರಿಗೆ ಸರ್ಕಾರ ಸಾಕಷ್ಟು ಸಾಲ ನೀಡಿದೆ. ಈಗ ಸಾಲ ಮನ್ನಾ ಮಾಡಲಾಗಿದೆ. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ. ದಲಿತರು ಕೌಶಲ ಆಧಾರಿತ ತರಬೇತಿ ಪಡೆದು ಆರ್ಥಿಕವಾಗಿ ಸಬಲರಾಗಬೇಕು. ದಲಿತರು ಬದುಕುವ ರೀತಿ ಸಮಗ್ರವಾಗಿ ಬದಲಾಗಬೇಕು ಎಂದು ಸಲಹೆ ಮಾಡಿದರು.ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮಾತನಾಡಿ, ಅಧಿಕಾರ, ಸಂಪತ್ತು, ಭೂಮಿ ಕೆಲವರ ಪಾಲಾಗಿದ್ದು, ಬಹುಜನರು ಎಲ್ಲವುಗಳಿಂದ ವಂಚಿತರಾಗಿದ್ದಾರೆ. ಇಲ್ಲಿನ ಎಲ್ಲ ಸಂಪತ್ತು ಕೆಳ ವರ್ಗದ ಜನರ ಪರಿಶ್ರಮದಿಂದ ಬಂದಿದೆ. ಆದರೆ ಕಡು ಬಡವರಿಗೆ ಸರ್ಕಾರ ಅಕ್ಕಿ ನೀಡಿದರೆ, ಉಳ್ಳವರು ಕೆಂಗಣ್ಣು ಬೀರುತ್ತಾರೆ. ಜಾತಿ ಮತ್ತು ವರ್ಗ ಹೋರಾಟ ಒಟ್ಟಾಗಿ ನಡೆದರೆ ಮಾತ್ರ ಸಮಾನತೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ರಾಜ್ಯದಲ್ಲಿ ಭೂಮಿಗಾಗಿ ಸಹಸ್ರಾರು ಅರ್ಜಿಗಳು ಬಂದಿವೆ. ಆಶ್ರಯ ನಿವೇಶನಗಳಿಗಾಗಿ ಬಂದಿರುವ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕಾಗಿದೆ. ಇದಕ್ಕಾಗಿ ವಿಶೇಷ ಕಾನೂನು ರೂಪಿಸಬೇಕಾದ ಅಗತ್ಯವಿದೆ ಎಂದರು.ಶಾಸಕ ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ, ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ, ಭೂಶಕ್ತಿ ಕೇಂದ್ರದ ಸಂಸ್ಥಾಪಕರಾದ ಎಂ.ಸಿ.ರಾಜ್, ಜ್ಯೋತಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry