ಶನಿವಾರ, ಮೇ 8, 2021
22 °C

ಭೂರಿ ಭೋಜನದಲ್ಲಿ ಆಯುರ್ವೇದ ಗುಳಿಗೆ

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

`ನಮ್ಮ ಸಿನಿಮಾ ಅತೃಪ್ತ ಮನಸ್ಸುಗಳನ್ನು ರೂಪಿಸುವುದಿಲ್ಲ~.`ಟೋನಿ~ ಎನ್ನುವ ಹೊಸ ಕನಸನ್ನು ಕನಸುಮನಸಿನ ತುಂಬಾ ಹರಡಿಕೊಂಡಿರುವ ನಿರ್ದೇಶಕ ಜಯತೀರ್ಥ ಅವರ ಅಡಿಗೆರೆ ಕೊರೆದ ರೀತಿಯ ಮಾತುಗಳಿವು.`ಟೋನಿ~ಯ ಬಗ್ಗೆ ಹೇಳುವುದಕ್ಕೆ ಮೊದಲು ಜಯತೀರ್ಥರ ಚೊಚ್ಚಿಲ ನಿರ್ದೇಶನದ `ಒಲವೇ ಮಂದಾರ~ದ ಬಗ್ಗೆ ಹೇಳಬೇಕು. ಕನ್ನಡ ಸಂಸ್ಕೃತಿಯನ್ನು ಭಾರತೀಯ ಸಂಸ್ಕೃತಿಯೊಂದಿಗೆ ಅನುಸಂಧಾನಗೊಳಿಸಲು ಪ್ರಯತ್ನಿಸಿದ ಅಪರೂಪದ ಚಿತ್ರ `ಒಲವೇ ಮಂದಾರ~.

 

ಹೊಸ ಪ್ರತಿಭೆಗಳ ಈ ಚಿತ್ರ ಹೆಸರಿಗೆ ತಕ್ಕಂತೆಯೇ ಮಂದಾರದ ಘಮ ಸೂಸಿದ ಸಿನಿಮಾ. ಆ ಕಾರಣದಿಂದಲೇ ಜಯತೀರ್ಥರ ಹೊಸ ಚಿತ್ರದ ಬಗ್ಗೆ ನಿರೀಕ್ಷೆಗಳು.

`ಒಲವೇ ಮಂದಾರ~ದಲ್ಲಿ ಪ್ರೇಮದ ಉತ್ಕಟತೆ- ಉದಾತ್ತತೆಯನ್ನು ಚಿತ್ರಿಸಿದ್ದ ಜಯತೀರ್ಥ, `ಟೋನಿ~ ಮೂಲಕ ಯುವ ತಲೆಮಾರಿನ ಗೊತ್ತುಗುರಿಗಳ ಶೋಧಕ್ಕೆ ಹೊರಟಂತಿದೆ.ಅವರ ಮಾತುಗಳಲ್ಲೇ ಹೇಳುವುದಾದರೆ, `ಓಟದ ಲಯಕ್ಕೆ ಮಾರುಹೋಗಿ ಬದುಕಿನ ಗುರಿಯನ್ನೇ ಮರೆತ ತಲೆಮಾರಿನ ಕಥೆ~ ಇದು. ಈ ತಲೆಮಾರಿನ ಪ್ರತಿನಿಧಿಯಾಗಿ ನಾಯಕನ ಪಾತ್ರ ಇರುತ್ತದಂತೆ. ಇದಕ್ಕೆ ಇನ್ನೊಂದು ದಿಕ್ಕಿನಲ್ಲಿ ಹಕ್ಕಿ ಇಂಚರವನ್ನು, ಗೀತೆಯ ಮಾಧುರ್ಯವನ್ನು, ಪುಸ್ತಕದ ಸಾಂಗತ್ಯವನ್ನು ಪ್ರೀತಿಸುವ ಹುಡುಗಿಯೊಬ್ಬಳಿದ್ದಾಳೆ. ಈ ಇಬ್ಬರ ನಡುವಣ ಕಥೆ, ಬದುಕಿನ ಕುರಿತ ಯುವ ಜನರ ಪರಿಕಲ್ಪನೆಗಳನ್ನು ಶೋಧಿಸುತ್ತಾ ಸಾಗುತ್ತದೆ.ಆಧುನಿಕ ಬದುಕಿನ ಜಿಜ್ಞಾಸೆಗಳು ಸಿನಿಮಾದಲ್ಲಿವೆ ಎಂದಮಾತ್ರಕ್ಕೆ `ಟೋನಿ~ಯಲ್ಲಿ ಮನರಂಜನೆಗೆ ಕೊರತೆಯಿದೆ ಎಂದರ್ಥವಲ್ಲ. ರೋಚಕತೆ ಮತ್ತು ಭಾವುಕತೆ ಬೆರೆತ ಸಸ್ಪೆನ್ಸ್ ಥ್ರಿಲ್ಲರ್‌ನ ಕಥನ ಇದುವಂತೆ. `ವೇಗ ಹೊಂದಿರುವ ನಿರೂಪಣೆ, ಹಾಸ್ಯ, ಮನರಂಜನೆ ಎಲ್ಲವೂ ಇರುವ ನಮ್ಮ ಸಿನಿಮಾ ಭೂರಿ ಭೋಜನ ಇದ್ದಂತೆ. ಊಟದ ನಡುವೆ ಆಯುರ್ವೇದದ ಔಷಧಿಯನ್ನೂ ಉಣಬಡಿಸುವ ಪ್ರಯತ್ನ ನಮ್ಮದು~ ಎನ್ನುತ್ತಾರೆ ನಿರ್ದೇಶಕರು.`ಟೋನಿಯಾಗಿ ಶ್ರೀನಗರ ಕಿಟ್ಟಿ ಅಭಿನಯಿಸುತ್ತಿದ್ದಾರೆ. ಜಯತೀರ್ಥ ಹೇಳಿದ ಕಥೆ ಅವರಿಗೆಷ್ಟು ಇಷ್ಟವಾಗಿದೆಯೆಂದರೆ, `ಟೋನಿ~ಯಲ್ಲಿ ಬಂಡವಾಳ ತೊಡಗಿಸಲೂ ಮುಂದಾಗಿದ್ದಾರೆ. ಕಿಟ್ಟಿ ಹಾಗೂ ಇಂದ್ರಕುಮಾರ್ ಚಿತ್ರದ ನಿರ್ಮಾಪಕರು.ನಿರ್ದೇಶಕ ಸೂರಿ ಅವರಿಂದ ಸೌಗಂಧಿಕಾ ಪುಷ್ಪ ಎಂದು ಕರೆಸಿಕೊಂಡ ಮೋಹಕತಾರೆ ಐಂದ್ರಿತಾ ರೇ ಟೋನಿಗೆ ನಾಯಕಿ. ಶರಣ್, ಅಚ್ಯುತ, ಸುಚೇಂದ್ರಪ್ರಸಾದ್ ತಾರಾಗಣದಲ್ಲಿದ್ದಾರೆ. ತಮ್ಮ ಮಾತೃನೆಲೆಯಾದ ರಂಗಭೂಮಿಯ ಪ್ರತಿಭೆಗಳನ್ನೂ ಚಿತ್ರದಲ್ಲಿ ಬಳಸಿಕೊಳ್ಳುವ ಉದ್ದೇಶ ಜಯತೀರ್ಥ ಅವರದು.`ಸಿದ್ಲಿಂಗು~ ಚಿತ್ರದ ಛಾಯಾಗ್ರಾಹಕ ಸುಜ್ಞಾನ್ `ಟೋನಿ~ಯ ಛಾಯಾಗ್ರಹಣದ ಹೊಣೆ ಹೊತ್ತಿದ್ದರೆ, ಸಾಧು ಕೋಕಿಲ ಸಂಗೀತ ನೀಡುತ್ತಿದ್ದಾರೆ.`ಪ್ರೇಕ್ಷಕರಲ್ಲಿ ಜೀವನದ ಬಗ್ಗೆ ಪ್ರೀತಿ ಉಕ್ಕಬೇಕು. ಬದುಕಿನ ಕುರಿತಾದ ಕೀಳರಿಮೆ ನಾಶವಾಗಬೇಕು. ಹಾಗಿರುತ್ತದೆ~ ನಮ್ಮ ಚಿತ್ರ ಎಂದು ಆತ್ಮವಿಶ್ವಾಸದಿಂದ ಹೇಳುವ ಜಯತೀರ್ಥ, ಏಪ್ರಿಲ್ 26ರಿಂದ `ಟೋನಿ~ಯ ಚಿತ್ರೀಕರಣ ನಡೆಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.