ಗುರುವಾರ , ಆಗಸ್ಟ್ 6, 2020
27 °C

ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ: ಪರಾಮರ್ಶೆಗೆ ಒಪ್ಪಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ: ಪರಾಮರ್ಶೆಗೆ ಒಪ್ಪಿಸಲು ಸಲಹೆ

ಬೆಂಗಳೂರು: ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮುನ್ನ, ಈ ಕುರಿತು ಜಂಟಿ ಸದನ ಸಮಿತಿಯ ಅಭಿಪ್ರಾಯ ಪಡೆಯಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ. ಚಂದ್ರಶೇಖರ್ ಆಗ್ರಹಿಸಿದರು.

ತಿದ್ದುಪಡಿ ಮಸೂದೆಯನ್ನು ಇದೇ 19ರಿಂದ ಆರಂಭವಾಗುವ ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡಿಸುವುದು ಬೇಡ. ಮಸೂದೆಯನ್ನು ಜಂಟಿ ಸದನ ಸಮಿತಿಯ ಪರಾಮರ್ಶೆಗೆ ವಹಿಸಬೇಕು. ಅದು ನೀಡುವ ಶಿಫಾರಸುಗಳನ್ನು ತಿದ್ದುಪಡಿಯಲ್ಲಿ ಅಳವಡಿಸಿದ ನಂತರವೇ ಮಸೂದೆಯನ್ನು ಸರ್ಕಾರ ಸದನದಲ್ಲಿ ಮಂಡಿಸಲಿ ಎಂದು ಅವರು ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

`ಭೂಮಿ~ ಬ್ಯಾಂಕ್‌ನಲ್ಲಿ ಎಷ್ಟು ಎಕರೆ ಭೂಮಿ ಲಭ್ಯವಿದೆ. ಕೈಗಾರಿಕೆಗಳ ಸ್ಥಾಪನೆಗೆ ಎಷ್ಟು ಎಕರೆ ಭೂಮಿಗೆ ಬೇಡಿಕೆ ಬಂದಿದೆ. ಈವರೆಗೆ ಎಷ್ಟು ಎಕರೆ ಭೂಮಿಯನ್ನು ನೀಡಲಾಗಿದೆ ಎಂಬ ಪ್ರಶ್ನೆಗಳಿಗೆ ಸರ್ಕಾರ ಖಚಿತ ಉತ್ತರ ನೀಡಬೇಕು. ರಾಜ್ಯದಲ್ಲಿರುವ ಒಣ ಭೂಮಿ ಹಾಗೂ ಕೃಷಿ ಯೋಗ್ಯ ಭೂಮಿಯ ಪ್ರಮಾಣ ಎಷ್ಟು ಎಂಬ ಕುರಿತೂ ವ್ಯಾಪಕ ಸಮೀಕ್ಷೆ ನಡೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಸ್ಥಾಪನೆಯಾಗುವ ಯಾವ ಕೈಗಾರಿಕೆಗೆ ಎಷ್ಟು ಪ್ರಮಾಣದ ನೀರಿನ ಅವಶ್ಯಕತೆ ಇದೆ. ರಾಜ್ಯದಲ್ಲಿ ಕೈಗಾರಿಕೆಗಳ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣ ಎಷ್ಟು ಎನ್ನುವ ಬಗ್ಗೆ ಅಧ್ಯಯನ ನಡೆಸಿ, ಸರ್ಕಾರ ಜನತೆಗೆ ಮಾಹಿತಿ ಒದಗಿಸಲಿ ಎಂದರು.

ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ಕೆಲವು ತಾಣಗಳಿಗೆ `ವಿಶ್ವ ಪಾರಂಪರಿಕ ತಾಣ~ ಎಂಬ ಮಾನ್ಯತೆ ಒದಗಿಸುವ ಸಂಬಂಧ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದ ಅವಧಿಯಲ್ಲಿ ಪ್ರಯತ್ನ ನಡೆಯಿತು. ಈಗ ಯುನೆಸ್ಕೊ ಪಶ್ಚಿಮ ಘಟ್ಟಗಳಿಗೆ ಆ ಮಾನ್ಯತೆ ನೀಡಿದೆ. ಇದನ್ನು ವಿರೋಧಿಸುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ವಾಜಪೇಯಿ ಅವರ ಆಶಯವನ್ನೂ ವಿರೋಧಿಸುತ್ತಿದೆ ಎಂದು ಚಂದ್ರಶೇಖರ್ ಅವರು ಈ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.