ಭೂಸ್ವಾಧೀನ ಕಾಯ್ದೆಯಲ್ಲಿ ಬದಲಾವಣೆ: ಕೃಷಿಭೂಮಿ ಸ್ವಾಧೀನಕ್ಕೆ ನಿರ್ಬಂಧ

7

ಭೂಸ್ವಾಧೀನ ಕಾಯ್ದೆಯಲ್ಲಿ ಬದಲಾವಣೆ: ಕೃಷಿಭೂಮಿ ಸ್ವಾಧೀನಕ್ಕೆ ನಿರ್ಬಂಧ

Published:
Updated:

ನವದೆಹಲಿ: ಕೃಷಿಕ ಸಮುದಾಯ ಹಾಗೂ ನಾಗರಿಕ ಸಂಘಟನೆಗಳ ಒತ್ತಡಕ್ಕೆ ತಲೆಬಾಗಿರುವ ಸಂಸತ್ತಿನ ಗ್ರಾಮೀಣಾಭಿವೃದ್ಧಿ ಸ್ಥಾಯಿ ಸಮಿತಿ, ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಿಕೊಳ್ಳದಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಭೂಸ್ವಾಧೀನ ಹಾಗೂ ಪುನರ್ವಸತಿ ತಿದ್ದುಪಡಿ ಮಸೂದೆಯನ್ನು ಸಮಗ್ರವಾಗಿ ಪರಿಶೀಲಿಸಿರುವ ಸುಮಿತ್ರಾ ಮಹಾಜನ್ ನೇತೃತ್ವದ ಸ್ಥಾಯಿ ಸಮಿತಿ ಈಗಿರುವ ಭೂಸ್ವಾಧೀನ ಕಾಯ್ದೆಯಲ್ಲಿ ಹಲವು ಬದಲಾವಣೆ ತರುವಂತೆ ಸೂಚಿಸಿದೆ.

`ಅಪರೂಪದ ಪ್ರಕರಣಗಳಲ್ಲಿ ಕೃಷಿಭೂಮಿಯ ಸ್ವಾಧೀನ ಅನಿವಾರ್ಯವಾದಲ್ಲಿ ಅದು ರಾಜ್ಯವೊಂದರ ಕೃಷಿ ಭೂಮಿಯ ಶೇ 5ರಷ್ಟನ್ನು ಮೀರಬಾರದು. ನಗರ ಪ್ರದೇಶದಲ್ಲಿ ಭೂಸ್ವಾಧೀನ ಮಾಡಿಕೊಂಡಾಗ ಮಾರುಕಟ್ಟೆ ದರದ ದುಪ್ಪಟ್ಟು ಹಾಗೂ ಗ್ರಾಮೀಣ ಭಾಗದಲ್ಲಿ ಮಾರುಕಟ್ಟೆ ದರದ ನಾಲ್ಕು ಪಟ್ಟು ಪರಿಹಾರ ನೀಡಬೇಕು.~

`ಯಾವ ಉದ್ದೇಶಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆಯೋ ಆ ಕಾರಣಕ್ಕೆ 5 ವರ್ಷಗಳಲ್ಲಿ ಭೂಮಿಯನ್ನು ಬಳಸಿಕೊಳ್ಳದಿದ್ದಲ್ಲಿ ಮೂಲ ಮಾಲೀಕರಿಗೆ ಜಮೀನು ಹಿಂದಿರುಗಿಸಬೇಕು.~

`ಜಿಲ್ಲಾ ಭೂಸ್ವಾಧೀನ ಸಮಿತಿಗಳಲ್ಲಿ ಕೇವಲ ಅಧಿಕಾರಿಗಳು ಇರಬಾರದು. ಜಿಲ್ಲಾಧಿಕಾರಿಗಳ ಜತೆ ಪಂಚಾಯಿತಿ ಅಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರಿಗೂ ಪ್ರಾತಿನಿಧ್ಯ ಇರಬೇಕು~ ಎಂದು ಸಮಿತಿ ಶಿಫಾರಸು ಮಾಡಿದೆ.

ಈ ಕರಡು ಮಸೂದೆ ಬಹುಬೆಳೆ ಪ್ರದೇಶಕ್ಕೆ ಸೀಮಿತವಾಗಿತ್ತು. ಆದರೆ, ಸ್ಥಾಯಿ ಸಮಿತಿ ಒಂದೇ ಬೆಳೆ ಬೆಳೆಯುವ ಕೃಷಿ ಭೂಮಿಯನ್ನು ಸಹ ಸ್ವಾಧೀನಪಡಿಸಿಕೊಳ್ಳುವಂತಿಲ್ಲ ಎಂದು ಹೇಳಿದೆ.

ಸ್ಥಾಯಿ ಸಮಿತಿ ಮಂಗಳವಾರಷ್ಟೇ ತನ್ನ ವರದಿ ಅಂತಿಮಗೊಳಿಸಿದ್ದು, ಕೆಲವೇ ದಿನಗಳಲ್ಲಿ ಈ ವರದಿ ಸಂಸತ್ತಿನಲ್ಲಿ ಮಂಡನೆಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry