ಬುಧವಾರ, ನವೆಂಬರ್ 20, 2019
20 °C

ಭೂಸ್ವಾಧೀನ ಕೈಬಿಟ್ಟ ಸರ್ಕಾರ!

Published:
Updated:

ಬಾಗಲಕೋಟೆ: ಹೋರಾಟದ ಕಿಡಿ ಹೊತ್ತಿಕೊಳ್ಳುವ ಮುಂಚೆಯೇ ಎಚ್ಚೆತ್ತುಕೊಂಡಿರುವ ಸರ್ಕಾರ, ಮುಧೋಳದ ಬಳಿ ಕೈಗಾರಿಕೆ ವಿಸ್ತರಣೆ ಉದ್ದೇಶದಿಂದ 170.23 ಎಕರೆ ಭೂಸ್ವಾಧೀನಕ್ಕಾಗಿ ಹೊರಡಿಸಿದ್ದ  ಅಧಿಸೂಚನೆಯನ್ನು ಕೈಬಿಟ್ಟಿದೆ.ಭೂಸ್ವಾಧೀನ ಕೈಬಿಡಬೇಕು ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ ಎನ್ನಲಾದ ನಿರಾಣಿ ಸಕ್ಕರೆ ಕಾರ್ಖಾನೆಯನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಮುಧೋಳ ತಹಸೀಲ್ದಾರ ಕಚೇರಿ ಬಳಿ ಕೆಲ ದಿನಗಳಿಂದ ಧರಣಿ ಸತ್ಯಾಗ್ರಹ ನಡೆಯುತ್ತಿತ್ತು.ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ  ಧರಣಿಯನ್ನು ಬೆಂಬಲಿಸಲು ಸ್ವತಃ ಮುಧೋಳಕ್ಕೆ ಆಗಮಿಸುವ ಹಿಂದಿನ ದಿನವೇ ಸರ್ಕಾರ ಅಧಿಸೂಚನೆಯನ್ನು ಕೈಬಿಟ್ಟಿದೆ.170.23 ಎಕರೆ ಭೂಸ್ವಾಧೀನ ಅಧಿಸೂಚನೆ ಕೈಬಿಟ್ಟಿರುವ ಬಗ್ಗೆ ಸರ್ಕಾರದ ರಾಜ್ಯಪತ್ರದಲ್ಲಿ ಜೂನ್ 8ರಂದು ಪ್ರಕಟಿಸಿದೆ. ಸರ್ಕಾರದ ಈ ಕ್ರಮದಿಂದ ತೃಪ್ತರಾಗದ ಪ್ರತಿಭಟನಾಕಾರರು, ಇನ್ನುಳಿದ 43 ಎಕರೆ ಭೂಸ್ವಾಧೀನಕ್ಕೆ ಹೊರಡಿಸಲಾಗಿರುವ ಅಧಿಸೂಚನೆಯನ್ನು ಕೈಬಿಡುವವರೆಗೆ ಹಾಗೂ ಮಾಲಿನ್ಯಕ್ಕೆ ಕಾರಣವಾಗಿರುವ ನಿರಾಣಿ ಸಕ್ಕರೆ ಕಾರ್ಖಾನೆ ವಿರುದ್ಧ ಕ್ರಮಕೈಗೊಳ್ಳುವರೆಗೆ ಹೋರಾಟ ನಡೆಯಲಿದೆ ಎಂದು ಘೋಷಿಸಿದ್ದಾರೆ.ಕೈಗಾರಿಕೆ ವಿಸ್ತರಣೆ ಉದ್ದೇಶದಿಂದ ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯು 170.23 ಹಾಗೂ 43 ಎಕರೆ ಭೂಸ್ವಾಧೀನಕ್ಕಾಗಿ ನವೆಂಬರ್-2009ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಕೈಗಾರಿಕೆ ವಿಸ್ತರಣೆ ನೆಪದಲ್ಲಿ ಫಲವತ್ತಾದ ಕೃಷಿಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ಕ್ರಮಕ್ಕೆ ಸ್ಥಳೀಯ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.ನಿರಾಣಿ ಸಕ್ಕರೆ ಕಾರ್ಖಾನೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಪಕ್ಷದ ಮುಖಂಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾರಜೋಳರ ಆಪ್ತರಾಗಿರುವ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ ಹೋರಾಟ ಆರಂಭಿಸಿದ್ದಾರೆ.ಹೋರಾಟದ ಪರ-ವಿರೋಧ

ರಾಮಣ್ಣ ತಳೇವಾಡ ನೇತೃತ್ವದಲ್ಲಿ ಮುಧೋಳ ತಹಸೀಲ್ದಾರ ಕಚೇರಿ ಎದುರು ಕೆಲ ದಿನಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಪ್ರತಿಯಾಗಿ ನಿರಾಣಿ ಸಕ್ಕರೆ ಕಾರ್ಖಾನೆ ಪರ ಹೋರಾಟವು ಆರಂಭಗೊಂಡಿದ್ದರಿಂದ ಇದು ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ವಿಧಾನಪರಿಷತ್ತಿನ ಪ್ರತಿಪಕ್ಷದ ಉಪ ನಾಯಕ ಕಾಂಗ್ರೆಸ್‌ನ ಎಸ್.ಆರ್‌ಪಾಟೀಲ ಕೂಡ ಧರಣಿಯನ್ನು ಬೆಂಬಲಿಸಿದ್ದಾರೆ.ಸಚಿವ ಮುರುಗೇಶ ನಿರಾಣಿ ಅವರ ಕುಟುಂಬಕ್ಕೆ ಸೇರಿದ ನಿರಾಣಿ ಕಾರ್ಖಾನೆ ವಿರುದ್ಧ ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ಹೋರಾಟ ದೇವೇಗೌಡರ ಮಧ್ಯಪ್ರವೇಶದಿಂದ ರಾಜ್ಯಮಟ್ಟದ ಹೋರಾಟದ ಸ್ವರೂಪ ಪಡೆದುಕೊಂಡಿದೆ. ಈ ಹೋರಾಟವು ವಿರೋಧ ಪಕ್ಷಗಳಿಗೆ ಮುಂಬರುವ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಬಹುದು ಎಂದು ಅಂದಾಜಿಸಿಯೇ ಸರ್ಕಾರ ಭೂಸ್ವಾಧೀನ ಅಧಿಸೂಚನೆ ಕೈಬಿಟ್ಟಿದೆ.ಸರ್ಕಾರ 17.23 ಎಕರೆ ಭೂಸ್ವಾಧೀನ ಅಧಿಸೂಚನೆ ಕೈಬಿಟ್ಟಿದ್ದರೂ ಉಳಿದ ಭೂಮಿಗೆ ಸಂಬಂಧಿಸಿದಂತೆ ಹೋರಾಟ ಮಾತ್ರ ಮುಂದುವರಿಯುವುದು ಖಚಿತವಾಗಿದ್ದು, ಇದರ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಬಹುದು ಎಂಬುದು ಪರ-ವಿರೋಧ ಹೋರಾಟಗಾರರಲ್ಲಿ ಕುತೂಹಲ ಮೂಡಿಸಿದೆ.

 

ಪ್ರತಿಕ್ರಿಯಿಸಿ (+)