ಬುಧವಾರ, ನವೆಂಬರ್ 13, 2019
17 °C

ಭೂಸ್ವಾಧೀನ ನಿಲ್ಲಿಸಲು ರೈತರ ಒತ್ತಾಯ

Published:
Updated:

ಹಾವೇರಿ: ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆ ತಕ್ಷಣವೇ ನಿಲ್ಲಿಸಬೇಕೆಂದು ಎಂದು ಒತ್ತಾಯಿಸಿ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ತಾಲ್ಲೂಕಿನ ಕನಕಾಪುರ, ಕಳ್ಳಿಹಾಳ, ತೋಟದ ಯಲ್ಲಾಪುರ, ಭೂ-ಕೋಡಿಹಳ್ಳಿ, ನೆಲೂಗಲ್ ಗ್ರಾಮಗಳ ರೈತರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ,ತಮ್ಮ ಫಲತ್ತಾದ ಜಮೀನನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಕಳೆದುಕೊಂಡಿದ್ದೇವೆ. ಉಳಿದ ಜಮೀನಿನಲ್ಲಿ ಉಪಜೀವನ ನಡೆಸುತ್ತಿರುವುದೇ ಕಷ್ಟವಾಗಿದೆ ಎಂದು ಹೇಳಿದ್ದಾರೆ.ಈಗಾಗಲೇ ಸಂಕಷ್ಟದಲ್ಲಿರುವ ತಮಗೆ ತುಂಗಾಮೇಲ್ದಂಡೆ ಯೋಜನೆಯ ಕಾಲುವೆ ನಿರ್ಮಾಣಕ್ಕಾಗಿ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ ಕ್ರಮ, ಐದು ಗ್ರಾಮಗಳ ರೈತರಿಗೆ ಬರ ಸಿಡಿಲು ಬಡಿದಂತಾಗಿದೆ ಎಂದು ಹೇಳಿದರು.ಇದ್ದ ಜಮೀನಿನಲ್ಲಿಯೇ ಬೋರವೆಲ್ ಕೊರೆಸಿ ನೀರಾವರಿ ಮಾಡಿಕೊಂಡಿದ್ದೇವೆ. ಈಗ ತುಂಗಾ ಮೇಲ್ದಂಡೆ ಯೋಜನೆಯ ನೀರಾವರಿ ನಿಗಮವು ಜಮೀನು ವಶಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದ್ದು, ಇದರಿಂದ ಇದ್ದ ಸ್ವಲ್ಪ ಜಮೀನು ಕಳೆದುಕೊಂಡು ಬೀದಿ ಪಾಲಾಗುವ ಸ್ಥಿತಿ ಎದುರಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಅದು ಅಲ್ಲದೇ ಪ್ರಸ್ತಾವಿತ ಯೋಜನೆಯು ಜಲ ಸಂಗ್ರಹಣೆಯ ಸ್ಥಳದಿಂದ 250 ಕಿ.ಮೀ ದೂರದಲ್ಲಿ ಇರುವ  ಕಾಲುವೆ ಮೂಲಕ ಹರಿದು ಬರುವುದು ಅಷ್ಟು ಸುಲಭದ ಮಾತಲ್ಲ. ಹೀಗಿದ್ದಾಗ ಭೂಮಿಯನ್ನು ವಶಪಡಿಸಿಕೊಂಡರೂ ಈ ಭಾಗಕ್ಕೆ ಹೆಚ್ಚಿನ ಪ್ರಯೋಜನವಾಗುವುದಿಲ್ಲ ಎಂದು ರೈತರು ಹೇಳಿದ್ದಾರೆ.ಈ ಹಿಂದೆ ಹೆದ್ದಾರಿಗೆ ಭೂಮಿ ನೀಡಿದ ಸಂದರ್ಭದಲ್ಲಿ ರೈತರಿಗೆ ಸೂಕ್ತ ಪರಿಹಾರ ನೀಡಲಾಗಿಲ್ಲ. ಅನೇಕ ರೈತರು ನ್ಯಾಯ ಬಯಸಿ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಈಗಲೂ ಸಹ ತುಂಗಾ ಮೇಲ್ದಂಡೆ ಯೋಜನೆಗೆ ಭೂಮಿ ವಶಪಡಿಸಿಕೊಂಡರೂ ಸೂಕ್ತ ಪರಿಹಾರ ಸಿಗುವ ಭರವಸೆ ಇಲ್ಲ. ಅದಕ್ಕಾಗಿ ಕೂಡಲೇ ಉದ್ದೇಶಿತ ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟು ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರರ ಮೂಲಕ ರಾಜ್ಯ ಸರ್ಕಾರಕ್ಕೆ ರೈತರು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಹನಮಂತಪ್ಪ ಮದನಗಟ್ಟಿ, ರಾಘವೇಂದ್ರ ಸಾನು, ಶಿವಣ್ಣ ಮಾಸೂರ, ಮಾಲತೇಶ ತಳವಾರ, ಬಸವಣ್ಣೆಪ್ಪ ತಳವಾರ, ದೊಡ್ಡಫಕ್ಕೀರಗೌಡ ಗಾಜಿಗೌಡ್ರ, ಶಿವಶಂಕ್ರಯ್ಯ ವರ್ದಿಮಠ, ನಾಗೇಂದ್ರ ಮಾಳಿ ಸೇರಿದಂತೆ ಐವತ್ತಕ್ಕೂ ಹೆಚ್ಚು ರೈತರು ಹಾಜರಿದ್ದರು.

ಪ್ರತಿಕ್ರಿಯಿಸಿ (+)