ಭೂಸ್ವಾಧೀನ: ಪರಿಹಾರಕ್ಕಾಗಿ ಪ್ರತಿಭಟನೆ

7

ಭೂಸ್ವಾಧೀನ: ಪರಿಹಾರಕ್ಕಾಗಿ ಪ್ರತಿಭಟನೆ

Published:
Updated:

ಕುಣಿಗಲ್: ರಾಷ್ಟ್ರೀಯ ಹೆದ್ದಾರಿ- 48ರ ಚತುಷ್ಪತ ರಸ್ತೆ ನಿರ್ಮಾಣಕ್ಕೆ ಭೂಮಿ ವಶಪಡಿಸಿಕೊಂಡು ವರ್ಷ ಕಳೆದಿದ್ದರೂ ಪರಿಹಾರ ಧನದ ಚೆಕ್ ನೀಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ಪಟ್ಟಣದ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕಚೇರಿಗೆ ಮಾಗಡಿ ತಾಲ್ಲೂಕಿನ ತಿಪ್ಪಸಂದ್ರ ಹೋಬಳಿ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆದಿದೆ.ತಿಪ್ಪಸಂದ್ರ ಹೋಬಳಿ ತಾಳೇಕೆರೆ, ಮಾಚೋನಹಳ್ಳಿ ಗ್ರಾಮಗಳ ಮೂಲಕ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ರಸ್ತೆ ನಿರ್ಮಾಣ ಮಾಡಲು 150 ಮಂದಿ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, 4.19 ಕೋಟಿ ರೂಪಾಯಿ ಪರಿಹಾರ ಧನ ಬಿಡುಗಡೆ ಮಾಡಲಾಗಿತ್ತು.ರೂ. 3.12 ಕೋಟಿ ಪರಿಹಾರ ವಿತರಿಸಲಾಗಿದ್ದು, ಉಳಿದ 30ಮಂದಿಗೆ ರೂ. 1.6 ಕೋಟಿ ಪರಿಹಾರ ಧನ ವಿತರಿಸಿರಲಿಲ್ಲ.ಭೂಸ್ವಾಧೀನಾಧಿಕಾರಿ ಮಲ್ಲೇಶಯ್ಯ, ವ್ಯವಸ್ಥಾಪಕ ಹನುಮಯ್ಯ ಅವರು ಮೇ 2ರಂದು ಚೆಕ್ ವಿತರಿಸುವುದಾಗಿ ತಿಳಿಸಿದ್ದರು. ಬುಧವಾರ ಬೆಳಿಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯ ಧನಂಜಯ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ರೈತರು ಕಚೇರಿಗೆ ಆಗಮಿಸಿದಾಗ, ಭೂಸ್ವಾಧೀನಾಧಿಕಾರಿ ಹಾಗೂ ವ್ಯವಸ್ಥಾಪಕರು ಗೈರು ಹಾಜರಾಗಿದ್ದರು.ತಹಶೀಲ್ದಾರ್ ತಿರುಮಲಯ್ಯ ಅವರು ರಾಮನಗರ ಜಿಲ್ಲಾಧಿಕಾರಿ ಆದೇಶದಂತೆ ಪರಿಹಾರ ಧನದ ಚೆಕ್‌ನ್ನು ವಾಪಸ್ ಕಳುಹಿಸಲಾಗಿದ್ದು, ಅಲ್ಲಿಗೆ ಹೋಗಿ ಪಡೆದುಕೊಳ್ಳುವಂತೆ ಸೂಚಿಸಿ ದರು. ಇದರಿಂದ ಆಕ್ರೋಶಗೊಂಡ ರೈತರು ಪ್ರತಿಭಟನೆ ನಡೆಸಿದರು.ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಧನದ ಚೆಕ್ ವಿತರಿಸುವ ಮುನ್ನ ಅಧಿಕಾರಿಗಳು ಶೇ. 40ರಷ್ಟು ಹಣಕ್ಕೆ ಬೇಡಿಕೆ ಇಟ್ಟುದ್ದು, ಹಣ ಪಾವತಿಸಿರುವವರಿಗೆ ಚೆಕ್ ವಿತರಿಸಿದ್ದಾರೆ. ಉಳಿದವರಿಗೆ ಚೆಕ್ ವಿತರಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಧನಂಜಯ ಆರೋಪಿಸಿದರು.ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಆರ್.ಚಿಕ್ಕಣ್ಣ, ಯುವ ಜನತಾದಳದ ಅಧ್ಯಕ್ಷ ನಾಗರಾಜ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿ ದ್ದರು. ತಹಶೀಲ್ದಾರ್ ತಿರುಮಲಯ್ಯ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ನಿಲ್ಲಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry