ಶನಿವಾರ, ಮಾರ್ಚ್ 6, 2021
21 °C
ರಾಜ್ಯಪಾಲರ ಮಧ್ಯ ಪ್ರವೇಶಕ್ಕೆ ಜನ ಜಾಗೃತಿ ವೇದಿಕೆ ಒತ್ತಾಯ

ಭೂಸ್ವಾಧೀನ ಪರಿಹಾರ ನಿಗದಿಯಲ್ಲಿ ತಾರತಮ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೂಸ್ವಾಧೀನ ಪರಿಹಾರ ನಿಗದಿಯಲ್ಲಿ ತಾರತಮ್ಯ

ಬೆಂಗಳೂರು: ಭೂಸ್ವಾಧೀನ ಪ್ರಕರಣಗಳ ಪರಿಹಾರ ನಿಗದಿಯಲ್ಲಿ ರಾಜ್ಯ ಸರ್ಕಾರ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಇಳಕಲ್‌ನ ಜನ ಜಾಗೃತಿ ವೇದಿಕೆ ಆರೋಪಿಸಿದೆ.ಹೊಸ ‘ಭೂಸ್ವಾಧೀನದಲ್ಲಿ ಪಾರದರ್ಶಕತೆ, ಯೋಗ್ಯ ಪರಿಹಾರದ ಹಕ್ಕು: ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾಯ್ದೆ–2013’  ಜಾರಿಯಾದ ನಂತರವೂ ರಾಜ್ಯದ ರೈತರಿಗೆ ವಂಚನೆಯಾಗುತ್ತಿದೆ.   ವಿವಿಧ ಉದ್ದೇಶಗಳಿಗೆ ಭೂಸ್ವಾಧೀನ ನಡೆಸುವಾಗ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಭಿನ್ನ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ.ಕೇಂದ್ರ ಪ್ರಾಯೋಜಿತ ಯೋಜನೆ ಹಾಗೂ ರಾಜ್ಯದ ಯೋಜನೆಗಳಿಗೆ ನಿಗದಿ ಪಡಿಸುವ ಪರಿಹಾರದಲ್ಲೂ ವ್ಯತ್ಯಾಸ ಇದೆ. ಸ್ವಾಧೀನ ಪಡಿಸಿಕೊಳ್ಳುವ ಜಮೀನಿಗೆ ಬೆಲೆ ನಿಗದಿಪಡಿಸುವಾಗ ಏಕರೂಪದ ಮಾನದಂಡಗಳನ್ನು ಅನುಸರಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ವೇದಿಕೆಯ ಪ್ರಧಾನ ಕಾರ್ಯದರ್ಶಿ ನಾಗರಾಜ ಹೊಂಗಲ್ ಅವರು ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.2015ರ ಅಕ್ಟೋಬರ್‌ ನಂತರದ ಹೊಸ ಕಾಯ್ದೆಯ ಪ್ರಕಾರವೇ ಪರಿಹಾರ ವಿತರಿಸಲಾಗುತ್ತಿದೆ. ಇದರ ಪ್ರಕಾರ, ಆಯಾ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲಾದ ಜಮೀನು ವಿಕ್ರಯ ದರದ ನಾಲ್ಕು ವರ್ಷದ ಸರಾಸರಿಯನ್ನು ಆಧರಿಸಿ ಮಾರುಕಟ್ಟೆ ಬೆಲೆ ನಿರ್ಧರಿಸಲಾಗುತ್ತದೆ.  ಅದರ ನಾಲ್ಕು ಪಟ್ಟು ಪರಿಹಾರವನ್ನು  ನೀಡಬೇಕಾಗುತ್ತದೆ. ಆದರೂ ಭೂಮಿ ನೀಡುವ  ರೈತರಿಗೆ ನ್ಯಾಯ ಸಮ್ಮತ ಬೆಲೆ ಸಿಗುತ್ತಿಲ್ಲ. ‘ಕೇಂದ್ರ ಪ್ರಾಯೋಜಿತ ಯೋಜನೆ  ಹಾಗೂ ರಾಜ್ಯದ ಯೋಜನೆಗೆ ರೈತರಿಗೆ ಸಿಗುವ ಪರಿಹಾರದ ಮೊತ್ತದಲ್ಲಿ ಅಜಗಜಾಂತರ ಇದೆ. ನೀರಾವರಿ, ವಸತಿ, ಕೈಗಾರಿಕೆ ಮತ್ತು ರಾಜ್ಯ ಹೆದ್ದಾರಿ ಯೋಜನೆಗಳಿಗೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ  ಸರ್ಕಾರ ನಿಗದಿಪಡಿಸುವ ಬೆಲೆಗಳು ಬೇರೆ ಬೇರೆಯಾಗಿವೆ. ವಿಮಾನ ನಿಲ್ದಾಣ, ರೈಲ್ವೆ, ಅಣು ವಿದ್ಯುತ್‌ ಸ್ಥಾವರ ಮೊದಲಾದ ಕೇಂದ್ರ ಪ್ರಾಯೋಜಿತ ಯೋಜನೆಗಳಿಗಾಗಿ ಜಮೀನು ಕಳೆದುಕೊಳ್ಳುವ ರೈತರಿಗೆ ಸಿಗುವ ಬೆಲೆಯೇ ಬೇರೆ. ರಾಜ್ಯದ ಯೋಜನೆಗೆ ಜಮೀನು ಕಳೆದುಕೊಳ್ಳುವ ರೈತರಿಗೆ ಹೊಸ ಕಾಯ್ದೆಯಂತೆ ಎಕರೆಗೆ ₹ 8 ಲಕ್ಷಕ್ಕಿಂತ (ಮಹಾನಗರ ಪಾಲಿಕೆ ವ್ಯಾಪ್ತಿ  ಹೊರತುಪಡಿಸಿ) ಹೆಚ್ಚಿನ ಪರಿಹಾರ ಸಿಗುವುದಿಲ್ಲ’ ಎಂದು ಅವರು ದೂರಿದ್ದಾರೆ.ವಸತಿ ಯೋಜನೆಗೆ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ  ಬೇರೆ ಬೇರೆ  ದರ ನಿಗದಿ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ವಿವೇಚನಾ ಅಧಿಕಾರ ಬಳಸಿ ಈ ಮೊತ್ತಕ್ಕೆ ಶೇಕಡಾ 20ರಷ್ಟು ಹೆಚ್ಚು ಮೊತ್ತವನ್ನು ಸೇರಿಸಬಹುದು.  ರೈತರು ಬಿಟ್ಟುಕೊಡುವ ಪ್ರತಿ ಎಕರೆ ಜಮೀನಿಗೆ 60x40 ಚದರ ಅಡಿಯ ಒಂದು ನಿವೇಶನವನ್ನೂ ನೀಡಲಾಗುತ್ತದೆ.ಕಳೆದ ಮೂರು ಮೂರು– ನಾಲ್ಕು ವರ್ಷಗಳಿಂದೀಚೆಗೆ ಹಾಸನ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕೆಗಾಗಿ   ವಶಪಡಿಸಿಕೊಂಡ ಜಮೀನಿಗೆ ಜಿಲ್ಲಾಧಿಕಾರಿಗಳು ಪ್ರತಿ ಎಕರೆಗೆ  ₹20 ಲಕ್ಷದಿಂದ ₹ 28 ಲಕ್ಷಕ್ಕೂ ಹೆಚ್ಚು ಬೆಲೆ ನಿಗದಿ ಮಾಡಿದ್ದಾರೆ.ಆದರೆ, ಹೊಸ ಕಾಯ್ದೆಯಂತೆ, ನೀರಾವರಿಗಾಗಿ ವಶಪಡಿಸಿಕೊಂಡ ಜಮೀನಿಗೆ ಐತೀರ್ಪಿನ ಪ್ರಕಾರ ಎಕರೆಗೆ ₹5 ಲಕ್ಷದಿಂದ ₹ 8 ಲಕ್ಷ  ಪರಿಹಾರ ಮಾತ್ರ ಸಿಗುತ್ತಿದೆ. ವಸತಿ ಹಾಗೂ ಕೈಗಾರಿಕೆಗೆ ಸ್ವಾಧೀನಪಡಿಸಿಕೊಳ್ಳುವ ಜಮೀನಿನ ಬೆಲೆ ಹಾಗೂ ಸವಲತ್ತುಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆ. ಇದು ಯಾವ ನ್ಯಾಯ?’ ಎಂದು ವೇದಿಕೆ ಪ್ರಶ್ನಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.