ಮಂಗಳವಾರ, ನವೆಂಬರ್ 19, 2019
29 °C

ಭೂಸ್ವಾಧೀನ ಮಸೂದೆ: ಹಾದಿ ಸುಗಮ

Published:
Updated:

ನವದೆಹಲಿ (ಪಿಟಿಐ): ವಿವಾದಾತ್ಮಕ ಭೂಸ್ವಾಧೀನ ಮಸೂದೆ ಕರಡಿಗೆ ಬಹುತೇಕ ಪಕ್ಷಗಳ ಒಪ್ಪಿಗೆ ಪಡೆಯುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಇದರಿಂದ ತಿಂಗಳ ವಿಶ್ರಾಂತಿ ನಂತರ ಸೋಮವಾರ ಮತ್ತೆ ಆರಂಭವಾಗಲಿರುವ  ಸಂಸತ್ತಿನ ಬಜೆಟ್ ಅಧಿವೇಶನದ ವೇಳೆ ಈ ಮಸೂದೆ ಮಂಡನೆಗೆ ಹಾದಿ ಸುಗಮವಾಗಿದೆ.ಮಸೂದೆ ಬಗ್ಗೆ ಬಹುತೇಕ ಪಕ್ಷಗಳು ಒಮ್ಮತ ಸೂಚಿಸಿವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಮಲ್‌ನಾಥ್ ಮತ್ತು ಲೋಕಸಭೆಯ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರು ಗುರುವಾರ ಸುದ್ದಿಗಾರರ ಬಳಿ ಹೇಳಿದರು. ಈ ಮಸೂದೆ ಕುರಿತು 90 ನಿಮಿಷ ಕಾಲ ನಡೆದ ಸರ್ವಪಕ್ಷ ಸಭೆ ನಂತರ ಅವರು ಹೀಗೆ ಹೇಳಿದರು.ಭೂಮಿ ಸ್ವಾಧೀನ ಮಾಡಿಕೊಳ್ಳುವ ಬದಲು, ಅದೇ ಭೂಮಿಯನ್ನು ಕಟ್ಟಡ ನಿರ್ಮಾಣಗಾರರಿಗೆ ಗುತ್ತಿಗೆ ಆಧಾರದ ಮೇಲೆ ನೀಡಬೇಕು. ಹೀಗೆ ಮಾಡಿದರೆ, ಭೂಮಿ ಮಾಲೀಕತ್ವ ರೈತರ ಬಳಿಯೇ ಉಳಿದು, ಅವರಿಗೂ ವಾರ್ಷಿಕವಾಗಿ ನಿಯಮಿತ ಆದಾಯ ಬರುತ್ತದೆ ಎಂಬ ಪ್ರಮುಖ ಸಲಹೆಯನ್ನು ಬಿಜೆಪಿ ನೀಡಿತ್ತು. ಇದನ್ನು ಸರ್ಕಾರ ಒಪ್ಪಿಕೊಂಡಿದೆ.ಭೂಸ್ವಾಧೀನ, ಪುನಶ್ಚೇತನ ಮತ್ತು ಪುನರ್‌ವಸತಿ ಮಸೂದೆ 2011ಕ್ಕೆ ತಿದ್ದುಪಡಿ ತಂದು, ಈ ಸಂಬಂಧ ರಾಜ್ಯಗಳಿಗೆ ಕಾನೂನು ರಚಿಸಲು ಅನುವು ಮಾಡಿಕೊಡುವುದಕ್ಕೂ ಸರ್ಕಾರ ಒಪ್ಪಿಕೊಂಡಿದೆ ಎನ್ನಲಾಗಿದೆ. ಭೂಮಿ ಗುತ್ತಿಗೆ ನೀಡುವ ಅಧಿಕಾರ ರಾಜ್ಯ ಸರ್ಕಾರದ ವ್ಯಾಪ್ತಿಗೆ ಒಳಪಟ್ಟ ವಿಷಯವಾದ್ದರಿಂದ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.ಆದರೂ, ಎಡಪಕ್ಷಗಳು ಮತ್ತು ಡಿಎಂಕೆ ಈ ಕರಡು ಮಸೂದೆ ಬಗ್ಗೆ ಆಕ್ಷೇಪಗಳನ್ನು ಹೊಂದಿವೆ. `ಮೂಲ ಮಸೂದೆಯನ್ನು ಸಾಕಷ್ಟು ದುರ್ಬಲಗೊಳಿಸಲಾಗಿದೆ. ಮಸೂದೆ  ಈಗಿನ ಸ್ವರೂಪವು ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ. ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದಾಗ ನಾವು ತಿದ್ದುಪಡಿಗೆ ಒತ್ತಾಯಿಸುತ್ತೇವೆ' ಎಂದು ಸಿಪಿಎಂ ನಾಯಕ ವಸುದೇವ ಆಚಾರ್ಯ ಸುದ್ದಿಗಾರರಿಗೆ ತಿಳಿಸಿದರು. ಈ ಮಸೂದೆಯು ಸಂವಿಧಾನದ ಒಕ್ಕೂಟ ಸಂರಚನೆ ಆಶಯಕ್ಕೆ ವಿರುದ್ಧವಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಡಿಎಂಕೆ ನಾಯಕ ಟಿ.ಆರ್.ಬಾಲು ಹೇಳಿದ್ದಾರೆ. ಈ ಮಸೂದೆ ಕುರಿತು ಏ.9ರಂದು ಮೊತ್ತ ಮೊದಲ ಸರ್ವಪಕ್ಷ ಸಭೆ ನಡೆದಿತ್ತು. ಆದರೆ ಪಕ್ಷಗಳ ನಡುವೆ ತೀವ್ರ ಭಿನ್ನಾಭಿಪ್ರಾಯ ಕಾರಣ ಸಭೆ ವಿಫಲವಾಗಿತ್ತು.ಸುಷ್ಮಾ ಸ್ವರಾಜ್, ವಸುದೇವ ಆಚಾರ್ಯ, ಬಾಲು ಅವರೊಂದಿಗೆ ಅರುಣ್ ಜೇಟ್ಲಿ, ರಾಮಗೋಪಾಲ್ ಯಾದವ್ (ಎಸ್‌ಪಿ), ಡಿ.ರಾಜಾ (ಸಿಪಿಐ), ಬಿ.ಮಹ್‌ತಾಬ್ (ಬಿಜೆಡಿ), ಶರದ್ ಯಾದವ್ (ಜೆಡಿಯು), ಎಂ.ತಂಬಿದೊರೈ ಮತ್ತು ವಿ.ಮೈತ್ರೇಯನ್ (ಇಬ್ಬರೂ ಎಐಎಡಿಎಂಕೆ) ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು. ತೃಣಮೂಲ ಕಾಂಗ್ರೆಸ್, ಅಕಾಲಿ ದಳ ಮತ್ತು ಬಿಎಸ್‌ಪಿ ಪ್ರತಿನಿಧಿಗಳು ಕೂಡ ಇದ್ದರು.ಈ ಮಸೂದೆ ಕುರಿತ ಭಿನ್ನಾಭಿಪ್ರಾಯ ಹೋಗಲಾಡಿಸಲು ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಅವರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಒಂದು ವಾರದ ಅವಧಿಯಲ್ಲಿ ಸುಷ್ಮಾ ಸ್ವರಾಜ್, ಜೇಟ್ಲಿ, ಸಿಪಿಎಂನ ಸೀತಾರಾಂ ಯಚೂರಿ ಅವರನ್ನು ಭೇಟಿಯಾಗಿ, ಮಸೂದೆ ಬೆಂಬಲಿಸುವಂತೆ ಕೋರಿದ್ದರು.

ಪ್ರತಿಕ್ರಿಯಿಸಿ (+)