ಭೂಸ್ವಾಧೀನ: ರಾಜ್ಯಗಳ ವಿವೇಚನೆಗೆ

7

ಭೂಸ್ವಾಧೀನ: ರಾಜ್ಯಗಳ ವಿವೇಚನೆಗೆ

Published:
Updated:

ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್

ನವದೆಹಲಿ (ಪಿಟಿಐ):
ಬಹುನಿರೀಕ್ಷಿತ ಭೂಸ್ವಾಧೀನ ಮಸೂದೆಯ ಕರಡಿಗೆ ಶರದ್ ಪವಾರ್ ನೇತೃತ್ವದ ಕೇಂದ್ರ ಸಚಿವರುಗಳ ಸಮಿತಿ ಅಂತಿಮ ರೂಪ ನೀಡಿದ್ದು, ಖಾಸಗಿಯವರಿಂದ ಖರೀದಿಸಿದ ಜಮೀನಿಗೆ ಸಂಬಂಧಿಸಿದಂತೆ ಪುನರ್ವಸತಿ ಪ್ಯಾಕೇಜ್ ಜಾರಿಗೊಳಿಸುವ ವಿವೇಚನೆಯನ್ನು ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ.ಖಾಸಗಿಯವರಿಂದ ಸರ್ಕಾರ ಜಮೀನು ಖರೀದಿಸಿದ ಸಂದರ್ಭದಲ್ಲಿ ಪುನರ್ವಸತಿ ಪ್ಯಾಕೇಜ್ ಕೈಗೊಳ್ಳುವ ಷರತ್ತು ಹೊಸ ಮಸೂದೆಯಲ್ಲಿ ಇದ್ದರೂ ಖರೀದಿಸಲಾದ ಭೂಮಿಯ ಪ್ರಮಾಣಕ್ಕೆ ಅನುಗುಣವಾಗಿ ಇಂತಹ ಪ್ಯಾಕೇಜ್ ನೀಡುವ ವಿವೇಚನೆಯನ್ನು ಆಯಾ ರಾಜ್ಯಗಳಿಗೆ ಬಿಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ಸುದ್ದಿಗಾರರಿಗೆ ತಿಳಿಸಿದರು.ಮಸೂದೆಯಲ್ಲಿ ಈ ಹಿಂದೆ ಪ್ರಸ್ತಾಪಿಸಿದಂತೆ, ಗ್ರಾಮೀಣ ಭಾಗದಲ್ಲಾದರೆ 100 ಎಕರೆ, ನಗರ ಪ್ರದೇಶದಲ್ಲಾದರೆ 50 ಎಕರೆಗೂ ಮಿಕ್ಕಿದ ಜಮೀನನ್ನು ಖಾಸಗಿಯವರಿಂದ ಸ್ವಾಧೀನಪಡಿಸಿಕೊಂಡಲ್ಲಿ ಪುನರ್ವಸತಿ ಪ್ಯಾಕೇಜ್ ಕಲ್ಪಿಸಬೇಕಾಗುತ್ತಿತ್ತು. ಆದರೆ ಇದೀಗ ಈ ಪ್ರಸ್ತಾಪವನ್ನು ಮಾರ್ಪಾಡು ಮಾಡಿದ್ದು, ಈ ಕುರಿತು ರಾಜ್ಯಗಳೇ ತೀರ್ಮಾನ ಕೈಗೊಳ್ಳಬಹುದಾಗಿದೆ.ಪಶ್ಚಿಮ ಬಂಗಾಳ ರಾಜ್ಯದ ಅಭಿಪ್ರಾಯದಂತೆ ಒಂದು ಎಕರೆಗೂ ಅಧಿಕ ಭೂಮಿ ಸ್ವಾಧೀನಪಡಿಸಿಕೊಂಡಲ್ಲಿ ಪುನರ್ವಸತಿ ಪ್ಯಾಕೇಜ್ ಅಗತ್ಯ. ಆದರೆ ಪಂಜಾಬ್ ರಾಜ್ಯದ ನಿಲುವು ಈ ವಿಷಯದಲ್ಲಿ ಸಾವಿರ ಎಕರೆಗೂ ಅಧಿಕ ಇರಬೇಕಾಗುತ್ತದೆ. ಹೀಗೆ ವಿಭಿನ್ನ ನಿಲುವು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ವಿಷಯದಲ್ಲಿ ಆಯಾ ರಾಜ್ಯಗಳೇ ಅಂತಿಮ ತೀರ್ಮಾನ ಕೈಗೊಳ್ಳುತ್ತವೆ ಎಂದು ರಮೇಶ್ ತಿಳಿಸಿದರು.ಅಂತಿಮಗೊಳಿಸಲಾದ ಕರಡಿನಲ್ಲಿ ತಿಳಿಸಿದಂತೆ, ಯಾವುದೇ ಖಾಸಗಿ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಸಂಬಂಧಿಸಿದ ಗ್ರಾಮ ಸಭೆ ಇಲ್ಲವೆ ಗ್ರಾಮ ಪಂಚಾಯಿತಿಗಳ ಅನುಮತಿ ಪಡೆಯಬೇಕಾಗುತ್ತದೆ.

 

`ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ತೀರ್ಮಾನ ತೆಗೆದುಕೊಳ್ಳಬಹುದು ಇಲ್ಲವೆ ತೆಗೆದುಕೊಳ್ಳದೇ ಇರಬಹುದು. ಈ ಕುರಿತು ನಿರ್ಬಂಧ ಹೇರಿಲ್ಲ. ಆದರೆ ಭೂಸ್ವಾಧೀನಕ್ಕೆ ಮುಂದಾದಲ್ಲಿ ಹೊಸ ಮಸೂದೆಯ ನಿರ್ದೇಶನಗಳ ಅನ್ವಯವೇ ಈ ಪ್ರಕ್ರಿಯೆ ನಡೆಸಬೇಕಾಗುತ್ತದೆ~ ರಮೇಶ್ ಸ್ಪಷ್ಟಪಡಿಸಿದರು.ಬಹುದಿನಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಭೂಸ್ವಾಧೀನ ಮಸೂದೆಯ ಕರಡಿಗೆ ಸಚಿವರುಗಳ ಸಮಿತಿ ಮಂಗಳವಾರಷ್ಟೆ ಅಂತಿಮರೂಪ ನೀಡಿದ್ದು, ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry