ಬುಧವಾರ, ಮಾರ್ಚ್ 29, 2023
31 °C

ಭೂಹಗರಣದಲ್ಲಿ ರೋಸಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೂಹಗರಣದಲ್ಲಿ ರೋಸಯ್ಯ

ಹೈದರಾಬಾದ್: ನಗರಾಭಿವೃದ್ಧಿಗಾಗಿ 30 ವರ್ಷಗಳ ಹಿಂದೆ ಹೊರಡಿಸಿದ್ದ ಸ್ವಾಧೀನ ಆದೇಶವನ್ನು ರದ್ದು ಮಾಡಿದ ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಇಲ್ಲಿನ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯ ಆದೇಶಿಸಿದೆ.

ಮಾಹಿತಿ ತಂತ್ರಜ್ಞಾನ ತರಬೇತಿ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಹೆಸರಾದ ಅಮೀರ್‌ಪೇಟೆಯಲ್ಲಿನ ಆಯಕಟ್ಟಿನ ಜಾಗವನ್ನು 30 ವರ್ಷಗಳ ಹಿಂದೆ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದ್ದ ಸರ್ಕಾರ ಅದನ್ನು ಹೈದರಾಬಾದ್ ಮೆಟ್ರೊ ಅಭಿವೃದ್ಧಿ ಪ್ರಾಧಿಕಾರಕ್ಕೆ (ಎಚ್‌ಎಂಡಿಎ)  ಹಸ್ತಾಂತರಿಸಿತ್ತು. ಈ ಜಾಗದಲ್ಲಿ ಎಚ್‌ಎಂಡಿಎ ಬಹುಮಹಡಿ ಸಂಕೀರ್ಣವನ್ನೂ ನಿರ್ಮಿಸಿದ ನಂತರ 9.14 ಎಕರೆ ಭೂಮಿ ಉಳಿದಿತ್ತು.

ತಾನು ವಶಪಡಿಸಿಕೊಂಡಿದ್ದ ಭೂಮಿಯ ಮಾಲಿಕರಿಗೆ 70.65 ಲಕ್ಷ ರೂಪಾಯಿಗಳನ್ನು ಪಾವತಿಸಲು ಸರ್ಕಾರ ಮುಂದಾಗಿತ್ತಾದರೂ ಮಾಲಿಕರು ಹಣ ತೆಗೆದುಕೊಳ್ಳಲು ನಿರಾಕರಿಸಿದ್ದರು. ಹೀಗಾಗಿ ರೂ 70.65 ಲಕ್ಷ ಹಣವನ್ನು ಆಗಿನಿಂದಲೂ ನಗರ ಭೂ ಸ್ವಾಧೀನ ಕಾಯ್ದೆಯನುಸಾರ ಠೇವಣಿ ಇರಿಸಲಾಗಿತ್ತು.

ಈ ಮಧ್ಯೆ ಖಾಲಿ ಉಳಿದಿದ್ದ 9.14 ಎಕರೆ ಭೂಮಿಯನ್ನು ಪುನಃ ತಮಗೆ ಮಂಜೂರು ಮಾಡುವಂತೆ ಕೋರಿ 14 ಜನರು 2004ರಿಂದ 06ರ ಅವಧಿಯಲ್ಲಿ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅಷ್ಟೂ ಬಾರಿ ಅದು ತಿರಸ್ಕೃತಗೊಂಡಿತ್ತು.

ಆದರೆ ರೋಸಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಇದೇ ಭೂಮಿಯನ್ನು ಪುನಃ ಈ 14 ಜನರಿಗೆ ಮರಳಿಸಿದ್ದಾರೆ. ಅವರ ಈ ನಿರ್ಧಾರದ ವಿರುದ್ಧ ಮೋಹನ್ ಲಾಲ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶೆ ರಾಧಾ ರಾಣಿ ಈ ಕುರಿತು ಸಮಗ್ರ ತನಿಖೆಗೆ ಆದೇಶಿಸಿ ಜ.28ರೊಳಗೆ ವರದಿ ನೀಡುವಂತೆ ಭ್ರಷ್ಟಾಚಾರ ನಿಗ್ರಹ ಬ್ಯೂರೋದ ಮಹಾ ನಿರ್ದೇಶಕರಿಗೆ ಸೂಚಿಸಿದ್ದಾರೆ.

ಸಂಬಂಧಪಟ್ಟ ದಾಖಲೆ ಪತ್ರಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ದಾಖಲೆಗಳಲ್ಲಿರುವುದು ಸ್ವತಃ ರೋಸಯ್ಯ ಅವರ ಸಹಿಯೋ ಅಥವಾ ನಕಲಿಯೇ ಎಂಬುದರ ಬಗ್ಗೆ ತನಿಖೆ ನಡೆದಿದೆ.



ನಗರ ಭೂ ಸ್ವಾಧೀನ ಕಾಯ್ದೆಯನುಸಾರ (ಯುಸಿಎಲ್‌ಎ) ಪರಿಹಾರ ನೀಡಿ ಸ್ವಾಧೀನ ಮಾಡಿಕೊಂಡ ಭೂಮಿಯನ್ನು ಸ್ವಾಧೀನದಿಂದ ಕೈಬಿಡುವ ಅಧಿಕಾರ ಸರ್ಕಾರಕ್ಕೆ ಇಲ್ಲವೇ ಇಲ್ಲ ಎಂದು  ಮೋಹನ್‌ಲಾಲ್ ಪರ ವಕೀಲ ಶ್ರೀರಂಗ ರಾವ್ ವಾದಿಸಿದರು.  ಈ ಸಂಬಂಧ ಸುಪ್ರೀಂಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.