ಭೂ ಒತ್ತುವರಿ ಎಲ್ಲಿ? ಯಾರು? ಎಷ್ಟು?

7
ಅರಣ್ಯ ಮತ್ತು ಸರ್ಕಾರಿ ಭೂಮಿ ಒತ್ತುವರಿ– 2

ಭೂ ಒತ್ತುವರಿ ಎಲ್ಲಿ? ಯಾರು? ಎಷ್ಟು?

Published:
Updated:
ಭೂ ಒತ್ತುವರಿ ಎಲ್ಲಿ? ಯಾರು? ಎಷ್ಟು?

ಚಿಕ್ಕಮಗಳೂರು: ಸ್ವಚ್ಛ ಗಾಳಿ, ಶುದ್ಧ ಕುಡಿಯುವ ನೀರು, ಸುಂದರ ಪರಿಸರ ಇರಬೇಕಾದರೆ ಭೂಮಿ ಮೇಲೆ ಶೇ.33ರಷ್ಟಾದರೂ ಅರಣ್ಯ ಇರಬೇಕು. ಆದರೆ, ನಾಡು ಬೆಳೆದಂತೆ ಕಾಡು ಕ್ಷೀಣಿಸುತ್ತಾ ಬಂದ ಪರಿಣಾಮ ಅರಣ್ಯ ಪ್ರದೇಶ ಶೇ.11.9ಕ್ಕೆ ಇಳಿದಿದೆ.ಅದರಲ್ಲೂ ಜಗತ್ತಿನ ಅತ್ಯಂತ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿರುವ ಪಶ್ಚಿಮ ಮಘಟ್ಟ ಪ್ರದೇಶ ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡು ಅಭಯಾರಣ್ಯಗಳು, ಶೋಲಾ ಅರಣ್ಯಗಳು, ಗಿರಿ ಶ್ರೇಣಿಗಳು ಇದ್ದಾಗ್ಯೂ ಅರಣ್ಯ ಪ್ರದೇಶ ಶೇ.23ರಷ್ಟು ಮಾತ್ರ ಉಳಿದಿದೆ.ಒತ್ತುವರಿ, ಮರಗಳ್ಳತನ, ಬೇಟೆ, ಮರಳು, ಕಲ್ಲುಗಣಿಗಾರಿಕೆ ಇತ್ಯಾದಿ ಅರಣ್ಯಕ್ಕೆ ಮಾರಕವಾದ ಚಟುವಟಿ ಕೆಗಳಿಂದ ಅರಣ್ಯ ಉಳಿಸಿ ಕೊಳ್ಳುವುದು ಒಂದು ಸವಾಲಿನ ಕೆಲಸವಾಗಿದೆ. ಕಾಡು ಕಡಿಮೆಯಾಗುತ್ತಿರುವ ಪರಿಣಾಮ ವನ್ಯಜೀವಿ ಮತ್ತು ಮನುಷ್ಯನ ನಡುವೆ ತಮ್ಮ ಅಸ್ತಿತ್ವಕ್ಕಾಗಿ ದಿನೇ ದಿನೇ ಸಂಘರ್ಷ ಹೆಚ್ಚುತ್ತಿದೆ.ಜಿಲ್ಲೆಯು ಭೌಗೋಳಿಕವಾಗಿ 17,83,525 ಎಕರೆ ಭೂ ಪ್ರದೇಶ ಹೊಂದಿದೆ. ಇದರಲ್ಲಿ ಕಂದಾಯ ಭೂಮಿ 4,89,195 ಎಕರೆ ಮತ್ತು ಅರಣ್ಯ ಭೂಮಿ 4,54,073 ಎಕರೆ ಹಾಗೂ ಸರ್ಕಾರಿ ಭೂಮಿ 9,43,268 ಎಕರೆ ಇದೆ.ಚಿಕ್ಕಮಗಳೂರು ವಿಭಾಗ, ಕೊಪ್ಪ ಪ್ರಾದೇಶಿಕ ಅರಣ್ಯ ವಿಭಾಗ, ಕುದುರೆಮುಖ ಮತ್ತು ಭದ್ರಾ ವನ್ಯಜೀವಿ ವಿಭಾಗ ಹಾಗೂ ಭದ್ರಾವತಿ ಅರಣ್ಯ ವಿಭಾಗಕ್ಕೆ ಸೇರಿರುವ ತರೀಕೆರೆ ತಾಲ್ಲೂಕಿನ ಕೆಲವು ಭಾಗ ಸೇರಿದಂತೆ ಸುಮಾರು 40 ಸಾವಿರ ಎಕರೆ ಘೋಷಿತ ಅರಣ್ಯ ಒತ್ತುವರಿಯಾಗಿದೆ.ಜಿಲ್ಲೆಯಲ್ಲಿ 15,508 ಮಂದಿ ಒಟ್ಟು 39, 555 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿರುವುದನ್ನು ಅರಣ್ಯ ಇಲಾಖೆ ದಾಖಲೆಗಳೇ ಹೇಳುತ್ತವೆ.ಚಿಕ್ಕಮಗಳೂರು ತಾಲ್ಲೂಕಿನಲ್ಲಿ 1791 ಮಂದಿ, 9446 ಎಕರೆ, ಕೊಪ್ಪ ತಾಲ್ಲೂಕಿನಲ್ಲಿ 7168 ಕುಟುಂಬಗಳು 24017 ಎಕರೆ, ತರೀಕೆರೆ ತಾಲ್ಲೂಕಿನಲ್ಲಿ 1804 ಮಂದಿ 4722 ಎಕರೆ, ಲಕ್ಕವಳ್ಳಿ ಅರಣ್ಯ ಪ್ರದೇಶದಲ್ಲಿ 542 ಮಂದಿ 1325 ಎಕರೆ, ಕುದುರೆಮುಖದಲ್ಲಿ 122 ಮಂದಿ 175 ಎಕರೆ, ಭದ್ರಾ ವನ್ಯಜೀವಿ ವಿಭಾಗದಲ್ಲಿ 81 ಮಂದಿ 270 ಎಕರೆ ಭೂಮಿ ಒತ್ತುವರಿ ಮಾಡಿದ್ದಾರೆ. 756 ಕುಟುಂಬಗಳು ಒತ್ತುವರಿ ಮಾಡಿದ್ದ 2282 ಎಕರೆ ಅರಣ್ಯ ಭೂಮಿಯನ್ನು ಮಾತ್ರ ತೆರವುಗೊಳಿಸಲು ಅರಣ್ಯ ಇಲಾಖೆಗೆ ಸಾಧ್ಯವಾಗಿದೆ. ಜಿಲ್ಲೆಯಲ್ಲಿ ಇನ್ನೂ 37,245 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವಿಗೆ ಬಾಕಿ ಇದೆ.ಇದು ಅರಣ್ಯ ಭೂಮಿ ಪರಿಸ್ಥಿತಿಯಾದರೆ, ಇದರ ಮೂರುಪಟ್ಟು ಅಂದರೆ 1.06,249 ಎಕರೆ ಕಂದಾಯ ಭೂಮಿ ಜಿಲ್ಲೆಯಲ್ಲಿ ಒತ್ತುವರಿಯಾಗಿದೆ. ತರೀಕೆರೆ ತಾಲ್ಲೂಕಿನಲ್ಲಿ 5,841 ಮಂದಿ 14,819 ಎಕರೆ, ಮೂಡಿಗೆರೆ ತಾಲ್ಲೂಕಿನಲ್ಲಿ 1744 ಮಂದಿ 7342.03 ಎಕರೆ, ಕೊಪ್ಪ ತಾಲ್ಲೂಕಿನಲ್ಲಿ 2900 ಮಂದಿ 11,968.11 ಎಕರೆ, ಶೃಂಗೇರಿ ತಾಲ್ಲೂಕಿನಲ್ಲಿ 3357 ಮಂದಿ 3070.31 ಎಕರೆ ಭೂಮಿ ಒತ್ತುವರಿ ಮಾಡಿದ್ದಾರೆ.ಘೋಷಿತ ಅರಣ್ಯಗಳ ಒತ್ತುವರಿಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಬಿಡಬಾರದು. ರಕ್ಷಿತಾರಣ್ಯ ಸೇರಿದಂತೆ ಉಳಿದ ಘೋಷಿತ ಅರಣ್ಯಗಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳುವುದು ಅತ್ಯಂತ ಅನಿವಾರ್ಯ.ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹಾಕದೆ ಅರಣ್ಯಗಳ ರಕ್ಷಣೆಗೆ ಬಿಗಿ ನಿಲುವು ತೆಗೆದು ಕೊಳ್ಳಬೇಕು ಎನ್ನುತ್ತಾರೆ ವನ್ಯಜೀವಿ ಕಾರ್ಯಕರ್ತ ಜಿ.ವೀರೇಶ್‌ ಮತ್ತು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆಯ ನಾಗೇಶ ಅಂಗೀರಸ.‘ಜಿಲ್ಲೆಯಲ್ಲಿ ಬದುಕಿಗಾಗಿ ಒತ್ತುವರಿ ಮಾಡಿರುವವರ ಪರ ನಾವು ಮತ್ತು ನಮ್ಮ ಪಕ್ಷವಿದೆ. ಆದರೆ, ದುರಾಸೆಗಾಗಿ ಒತ್ತುವರಿ ಮಾಡಿರುವುದನ್ನು ನಾವು ವಿರೋಧಿಸುತ್ತೇವೆ ಮತ್ತು ಅದನ್ನು ಖುಲ್ಲಾಪಡಿಸಬೇಕು’ ಎನ್ನುತ್ತಾರೆ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಎಂ.ಎಲ್‌.ಮೂರ್ತಿ.

(ಮುಂದುವರಿಯಲಿದೆ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry