ಬುಧವಾರ, ಮೇ 19, 2021
22 °C

ಭೂ ಕಬಳಿಕೆ: ಸಚಿವರ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಜ್ ಮತ್ತು ವಕ್ಫ್ ಖಾತೆ ಸಚಿವ ಖಮರುಲ್ ಇಸ್ಲಾಂ ಅವರು ಗುಲ್ಬರ್ಗದ ಬಡೇಪುರ ಗ್ರಾಮದಲ್ಲಿ ರಾಜ್ಯ ವಕ್ಫ್ ಮಂಡಳಿ ಹೊಂದಿದ್ದ 8.34 ಎಕರೆ ಭೂಮಿಯನ್ನು ಕಬಳಿಸಿದ್ದಾರೆ ಎಂದು ಆರೋಪಿಸಿ ಕೋಲಾರ ಮೂಲದ ತಬ್ರೇಜ್ ಪಾಷಾ ಎಂಬುವರು ಶುಕ್ರವಾರ ನಗರದ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದಾರೆ.ಸಚಿವರ ವಿರುದ್ಧದ ಆರೋಪ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ. ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ಅರ್ಜಿಯ ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಿದ್ದಾರೆ.ಗುಲ್ಬರ್ಗದ ಹಜರತ್ ಖಾಜಾ ಬಂದೇ ನವಾಬ್ ದರ್ಗಾಕ್ಕೆ ಬಡೇಪುರ ಗ್ರಾಮದ ಸರ್ವೆ ನಂಬರ್ 12ರಲ್ಲಿ 8.34 ಎಕರೆ ಜಮೀನು ಮಂಜೂರು ಮಾಡಿ ರಾಜ್ಯ ಸರ್ಕಾರ 1974ರಲ್ಲಿ ಆದೇಶ ಹೊರಡಿಸಿತ್ತು. ನಂತರ ಸೈಯದ್ ದಸ್ತಗೀರ್ ಎಂಬುವರಿಂದ `ಜಿಪಿಎ' (ಜನರಲ್ ಪವರ್ ಆಫ್ ಅಟಾರ್ನಿ) ಪಡೆದುಕೊಂಡ ಖಮರುಲ್, ಅದನ್ನೇ ಬಳಸಿಕೊಂಡು ಭೂ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.

ಅಲ್ಲಿ ತಮ್ಮ ಪರವಾಗಿ ಆದೇಶ ಪಡೆದು ವಕ್ಫ್ ಜಮೀನು ಕಬಳಿಸಿದ್ದಾರೆ ಎಂಬ ಆರೋಪ ಅರ್ಜಿಯಲ್ಲಿದೆ. `ಭೂ ನ್ಯಾಯಮಂಡಳಿಯ ಆದೇಶ ಪ್ರಶ್ನಿಸಿ ವಕ್ಫ್ ಮಂಡಳಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ, 1987-88ರಲ್ಲಿ ವಕ್ಫ್ ಮಂಡಳಿ ಸದಸ್ಯರಾಗಿದ್ದ ಸಚಿವರು, ರಿಟ್ ಅರ್ಜಿ ಹಿಂದಕ್ಕೆ ಪಡೆಯಲು ನಿರ್ಣಯ ಮಂಡಿಸಿ, ಅಂಗೀಕಾರ ಪಡೆದರು.

ಅದರಂತೆ ಹೈಕೋರ್ಟ್‌ನಿಂದ ಅರ್ಜಿಯನ್ನು ಹಿಂದಕ್ಕೆ ಪಡೆಯಲಾಯಿತು. ಬಳಿಕ ಜಮೀನಿನ ಖಾತೆ ಸಚಿವರ ಹೆಸರಿಗೆ ವರ್ಗಾವಣೆ ಆಯಿತು. ಸಹೋದರನ ಮೂಲಕ ಈ ಜಮೀನನ್ನು ಮಾರಾಟ ಮಾಡಿದ್ದು, ್ಙ12 ಕೋಟಿಗೂ  ಹೆಚ್ಚು ಲಾಭ ಮಾಡಿಕೊಂಡಿದ್ದಾರೆ' ಎಂದು ಆರೋಪಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.