ಗುರುವಾರ , ಏಪ್ರಿಲ್ 15, 2021
21 °C

ಭೂ ಕ್ಷಾರ ನಿವಾರಣೆಗೆ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ (ಕಾಡಾ) ವತಿಯಿಂದ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದಲ್ಲಿ ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸುತ್ತಿರುವ ಭೂ ಕ್ಷಾರ ನಿವಾರಣಾ ಕಾಮಗಾರಿಯನ್ನು ಅಧ್ಯಕ್ಷ ಡಿ.ರಾಮಲಿಂಗಯ್ಯ ಮಂಗಳವಾರ ವೀಕ್ಷಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕಬಿನಿ, ಹಾರಂಗಿ, ಹೇಮಾವತಿ ಮತ್ತು ಕೃಷ್ಣರಾಜಸಾಗರ ಯೋಜನೆಗಳ ವ್ಯಾಪ್ತಿ ಯಲ್ಲಿ ಒಟ್ಟಾರೆ 29810 ಎಕರೆ ಪ್ರದೇಶವನ್ನು ಸವಳು, ಜವಳು ಮತ್ತು ಕ್ಷಾರ ಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ. ಈ ಪ್ರದೇಶಗಳು ವ್ಯವಸಾಯ ಯೋಗ್ಯವಾಗಿಲ್ಲದಿರುವುದನ್ನು ಮನಗಂಡು ಇಂತಹ ಪ್ರದೇಶಗಳನ್ನು ಆದ್ಯತೆಯ ಮೇರೆಗೆ ಬೇಸಾಯ ಯೋಗ್ಯವನ್ನಾಗಿ ಮಾಡುವ ದಿಶೆಯಲ್ಲಿ ಪ್ರಾಧಿಕಾರವು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ’ ಎಂದರು.‘ಇದುವರೆಗೆ 10710 ಎಕರೆ ಪ್ರದೇಶವನ್ನು ವ್ಯವಸಾಯ ಯೋಗ್ಯವನ್ನಾಗಿ ಮಾಡಲಾಗಿದೆ. ಇನ್ನೂ 19100 ಎಕರೆ ಪ್ರದೇಶವು ಸಮಸ್ಯಾತ್ಮಕವಾಗಿದ್ದು, ಜಿಲ್ಲೆಯಲ್ಲಿ 3355 ಎಕರೆ ಪ್ರದೇಶವನ್ನು ಸಮಸ್ಯಾತ್ಮಕ ಪ್ರದೇಶವೆಂದು ಗುರುತಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಪ್ರಾಧಿಕಾರದಿಂದ 2778 ಎಕರೆ ಪ್ರದೇಶದಲ್ಲಿ ಭೂ ಕ್ಷಾರ ನಿವಾರಣಾ ಕಾರ್ಯಕ್ರಮವನ್ನು ಅನು ಷ್ಠಾನಗೊಳಿಸಲಾಗುತ್ತಿದೆ’ ಎಂದು ತಿಳಿಸಿದರು.‘ಪ್ರಾಧಿಕಾರದಿಂದ ಇಂತಹ ಕಾರ್ಯಕ್ರಮವನ್ನು ಕಾವೇರಿ ನೀರಾವರಿ ನಿಗಮ ಮತ್ತು ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ನಿಗಮದ ಮೂಲಕ ಜೌಗು ಪ್ರದೇಶಗಳಲ್ಲಿ ತೆರೆದ ಬಸಿಗಾಲುವೆಗಳನ್ನು ತೆರೆಯುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು ಲವಣಾಂಶಗಳ ಹೆಚ್ಚಿನ ಪ್ರಮಾಣದಿಂದ ಸವಳು ಮತ್ತು ಕ್ಷಾರ ಪೀಡಿತವಾಗಿರುವ ಸಮಸ್ಯಾತ್ಮಕ ಪ್ರದೇಶಗಳಲ್ಲಿ ತೆರೆದ ಬಸಿಗಾಲುವೆಯನ್ನು ತೆರೆದು ಅದರಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಅಂತಹ ಕಡೆಗಳಲ್ಲಿ ಕೊಳವೆ ಬಸಿಗಾಲುವೆಗಳನ್ನು ತೆಗೆದು ಅಂತಹ ಜಮೀನುಗಳನ್ನು ಮೂರು ನಾಲ್ಕು ವರ್ಷ ಕೃಷಿ ಯೋಗ್ಯವನ್ನಾಗಿ ಮಾಡಲಾಗುವುದು. ಇದಕ್ಕೆ ತಗಲುವ ಖರ್ಚಿನಲ್ಲಿ ಶೇ 10 ರಷ್ಟು ಫಲಾನುಭವಿಗಳಿಂದ ವಂತಿಗೆ ಅಥವಾ ಕಾಮಗಾರಿ ರೂಪದಲ್ಲಿ ಭರಿಸಬೇಕಾಗುತ್ತದೆ’ ಎಂದು ಹೇಳಿದರು.ಈ ಸಂದರ್ಭದಲ್ಲಿ ಫಲಾನುಭವಿಗಳು ಹಾಜರಿದ್ದರು ಭೂ ಕ್ಷಾರ ನಿವಾರಣಾ ಕಾರ್ಯಕ್ರಮದ ಅನುಷ್ಠಾನದಿಂದ ಬಹಳಷ್ಟು ಅನುಕೂಲವಾಗಿದೆ ಎಂದರು. ಅಕ್ಕಪಕ್ಕದ ರೈತರು ಹಾಜರಿದ್ದು ತಮ್ಮ ಜಮೀನುಗಳೂ ಸಹ ಸವಳು,  ಜವಳು ಮತ್ತು ಕ್ಷಾರ ಪೀಡಿತವಾಗಿದ್ದು ಅವುಗಳನ್ನೂ ಸಹ ಕೃಷಿ ಯೋಗ್ಯವನ್ನಾಗಿ ಮಾಡಬೇಕು ಎಂದು ಮನವಿ  ಮಾಡಿದರು.ಪ್ರಾಧಿಕಾರದ ಭೂ ಅಭಿವೃದ್ಧಿ ಅಧಿಕಾರಿ (ಕೃಷಿ) ಡಾ.ವೈ.ಟಿ.ಹಿರಿಯಣ್ಣಯ್ಯ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.