ಸೋಮವಾರ, ಮಾರ್ಚ್ 8, 2021
22 °C

ಭೂ ಮಾಫಿಯಾಕ್ಕೆ ಮೂಗುದಾರ: ಚೂಡಾ ದಿಟ್ಟ ಹೆಜ್ಜೆ

ಪ್ರಜಾವಾಣಿ ವಾರ್ತೆ/ ಕೆ.ಎಚ್. ಓಬಳೇಶ್ Updated:

ಅಕ್ಷರ ಗಾತ್ರ : | |

ಭೂ ಮಾಫಿಯಾಕ್ಕೆ ಮೂಗುದಾರ: ಚೂಡಾ ದಿಟ್ಟ ಹೆಜ್ಜೆ

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ತಲೆಎತ್ತುತ್ತಿದ್ದ ಭೂ ಮಾಫಿಯಾಕ್ಕೆ ಮೂಗುದಾರ ಹಾಕಲು ನಗರಾಭಿವೃದ್ಧಿ ಪ್ರಾಧಿಕಾರ ದಿಟ್ಟಹೆಜ್ಜೆ ಇಟ್ಟಿದೆ.ನಗರ ಹೊರವಲಯದ ಪ್ರದೇಶಗಳಿಗೆ ಭೇಟಿ ನೀಡಿದರೆ ಸುಪ್ರೀಂ ಕೋರ್ಟ್ ಆದೇಶ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಾವಳಿ ಉಲ್ಲಂಘಿಸಿ ಅನಧಿಕೃತವಾಗಿ ಬಡಾವಣೆ ನಿರ್ಮಿಸಿರುವುದು ಕಣ್ಣಿಗೆ ಬೀಳುತ್ತದೆ. ಅಲ್ಲಿ ಯಾವುದೇ ಮೂಲ ಸೌಕರ್ಯ ಕಲ್ಪಿಸಿಲ್ಲ. ಆದರೆ, ತಮಗೆ ಮನಸ್ಸಿಗೆ ಬಂದಷ್ಟು ಅಳತೆ ನಿಗದಿಪಡಿಸಿ ನಿವೇಶನದ ಗುರುತಿನ ಕಲ್ಲು ನೆಟ್ಟಿದ್ದಾರೆ.ಪ್ರಾಧಿಕಾರದ ಅಂದಾಜಿನ ಪ್ರಕಾರ ರಿಯಲ್ ಎಸ್ಟೇಟ್ ಉದ್ಯಮಿಗಳು ನಗರದ ಸುತ್ತಮುತ್ತ ಸುಮಾರು 250 ಎಕರೆಯಷ್ಟು ಪ್ರದೇಶದಲ್ಲಿ ಬಡಾವಣೆಗಳನ್ನು ನಿರ್ಮಿಸಿದ್ದಾರೆ. ಇಲ್ಲಿಯವರೆಗೆ 35 ಎಕರೆ ಪ್ರದೇಶದಲ್ಲಿ ನಿರ್ಮಿಸಿದ್ದ 16 ಅನಧಿಕೃತ ಬಡಾವಣೆ  ತೆರವುಗೊಂಡಿವೆ. ಇನ್ನೂ 45ಕ್ಕೂ ಹೆಚ್ಚು ಬಡಾವಣೆಗಳ ತೆರವು ಕಾರ್ಯಾಚರಣೆ ಬಾಕಿಯಿದೆ. ಗಾಳಿಪುರ, ಕರಿನಂಜನಪುರ, ಸೋಮವಾರಪೇಟೆ ಸುತ್ತಮುತ್ತ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಬಡಾವಣೆ ನಿರ್ಮಿಸಿರುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆಯಿಂದ ಜಂಟಿ ಕಾರ್ಯಾಚರಣೆ ಮೂಲಕ ಬಡಾವಣೆ ತೆರವುಗೊಳಿಸಲಾಗುತ್ತಿದೆ. ನಿವೇಶನದ ಗುರುತು ಕಲ್ಲುಗಳನ್ನು ಕಿತ್ತುಹಾಕಲಾಗುತ್ತಿದೆ.ಜತೆಗೆ, ಜಮೀನನ್ನು ಯಥಾಸ್ಥಿತಿಗೆ ತರಲಾಗುತ್ತಿದೆ. ಈ ಕಾರ್ಯಾಚರಣೆಗೆ ರಿಯಲ್ ಎಸ್ಟೇಟ್ ಉದ್ಯಮಿಗಳಿಂದ ವಿರೋಧವೂ ವ್ಯಕ್ತವಾಗಿದೆ. ಆದರೆ, ಚೂಡಾ ಅಧ್ಯಕ್ಷರು ಹಾಗೂ ನಗರಸಭೆ ಅಧಿಕಾರಿಗಳು ಸೊಪ್ಪು ಹಾಕಿಲ್ಲ. ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ತೆರವು ಕಾರ್ಯಾಚರಣೆ ಮುಂದುವರಿಸಿದ್ದಾರೆ.ನಾಗರಿಕರ ಪೇಚಾಟ

ರಿಯಲ್ ಎಸ್ಟೇಟ್ ಉದ್ಯಮಿಗಳು ಸಂಬಂಧಪಟ್ಟ ರೈತರಿಗೆ ಹಣ ನೀಡಿ ಭೂಮಿಯನ್ನು ವಶಕ್ಕೆ ಪಡೆಯುತ್ತಾರೆ. ಬಡಾವಣೆ ನಿರ್ಮಿಸಿ ನಾಗರಿಕರನ್ನು ಸೆಳೆಯುತ್ತಾರೆ. ಬಡಾವಣೆ ನಿರ್ಮಿಸುವಾಗ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆಯುವುದಿಲ್ಲ. ಬಡಾವಣೆಯಲ್ಲಿ ಯಾವುದೇ ಮೂಲ ಸೌಕರ್ಯ ಕಲ್ಪಿಸುವುದಿಲ್ಲ. ಆದರೆ, ನಿವೇಶನ ಖರೀದಿಸುವ ನಾಗರಿಕರಿಂದ ಅಭಿವೃದ್ಧಿ ಶುಲ್ಕ ಕೂಡ ಪಡೆಯುತ್ತಾರೆ ಎಂಬುದು ಪ್ರಾಧಿಕಾರದ ವಿವರಣೆ.ಯಾವುದೇ, ಹೊಸ ಬಡಾವಣೆ ನಿರ್ಮಿಸುವಾಗ ರಸ್ತೆ, ಚರಂಡಿ, ಉದ್ಯಾನ ಇತ್ಯಾದಿಗೆ ಇಂತಿಷ್ಟು ಪ್ರಮಾಣದ ಸ್ಥಳ ಮೀಸಲಿಡಬೇಕು. ಆದರೆ, ಹಣದ ಆಸೆಗಾಗಿ ಎಲ್ಲ ಸ್ಥಳವನ್ನು ನಿವೇಶನವನ್ನಾಗಿ ಪರಿವರ್ತಿಸಲಾಗುತ್ತಿದೆ. ಬಡಾವಣೆ ನಿರ್ಮಾಣಕ್ಕೂ ಮೊದಲು ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಕಡ್ಡಾಯ. ಜತೆಗೆ, ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕಿದೆ. ಜತೆಗೆ, ಬಡಾವಣೆಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಬೇಕಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಇಂತಹ ಯಾವುದೇ ನಿಯಮ ಪಾಲಿಸಿಲ್ಲ.ಕಾರ್ಯಾಚರಣೆ ಪರಿಣಾಮ ರಿಯಲ್ ಎಸ್ಟೇಟ್ ವ್ಯಕ್ತಿಗಳಿಂದ ನಿವೇಶನ ಪಡೆದಿರುವ ನಾಗರಿಕರು ಈಗ ಪೇಚಾಟಕ್ಕೆ ಸಿಲುಕಿದ್ದಾರೆ. ಇತ್ತ ನಿವೇಶನವೂ ಇಲ್ಲದಂತಾಗಿದೆ. ಜತೆಗೆ, ಪಾವತಿಸಿರುವ ಹಣವೂ ಇಲ್ಲದೇ ಪರಿತಪಿಸುವಂತಾಗಿದೆ.`ಪ್ರಸ್ತುತ ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಿರುವ ಅನಧಿಕೃತ ಬಡಾವಣೆಗಳನ್ನು ತೆರವುಗೊಳಿಸಲಾಗುತ್ತಿದೆ. ಪ್ರಾಧಿಕಾರದ ನಿಯಮಾವಳಿ ಪ್ರಕಾರ ಬಡಾವಣೆ ನಿರ್ಮಿಸಿರುವ ಮಾಲೀಕರಿಗೆ ನೋಟಿಸ್ ನೀಡುವ ಅಗತ್ಯವಿಲ್ಲ.ಮಾಧ್ಯಮಗಳಲ್ಲಿ ಪ್ರಕಟಣೆ ನೀಡಿ ತೆರವಿಗೆ ಕ್ರಮಕೈಗೊಳ್ಳಲಾಗಿದೆ. ಇನ್ನೂ 45ಕ್ಕೂ ಹೆಚ್ಚು ಬಡಾವಣೆಗಳನ್ನು ತೆರವುಗೊಳಿಸುವ ಕೆಲಸ ಬಾಕಿಯಿದೆ. ಹಂತ ಹಂತವಾಗಿ ಕಾರ್ಯಾಚರಣೆ ಮುಂದುವರಿಯಲಿದೆ~ ಎಂದು ಚೂಡಾ ಅಧ್ಯಕ್ಷ ಎಸ್. ಬಾಲಸುಬ್ರಮಣ್ಯ `ಪ್ರಜಾವಾಣಿ~ಗೆ ತಿಳಿಸಿದರು.`ಪ್ರಾಧಿಕಾರಕ್ಕೆ ಒಳಪಟ್ಟ ತಾವರೆಕಟ್ಟೆಮೋಳೆ, ಮರಿಯಾಲ ಗ್ರಾಮದ ಪಕ್ಕದಲ್ಲಿಯೇ ಅನಧಿಕೃತ ಬಡಾವಣೆ ತಲೆಎತ್ತುತ್ತಿವೆ. ಅವುಗಳನ್ನು ಕೂಡ ತೆರವುಗೊಳಿಸಲಾಗುವುದು. ನಿಯಮಾವಳಿ ಉಲ್ಲಂಘಿಸಿ ಬಡಾವಣೆ ನಿರ್ಮಿಸಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಕುರಿತು ಚಿಂತನೆ ನಡೆದಿದೆ~ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.