ಭೂ ವ್ಯಾಜ್ಯ, ಪ್ರಕರಣ ಶೀಘ್ರ ಇತ್ಯರ್ಥ ಪಡಿಸಿ

7
ಅಧಿಕಾರಿಗಳಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಬಸವರಾಜು ಸೂಚನೆ

ಭೂ ವ್ಯಾಜ್ಯ, ಪ್ರಕರಣ ಶೀಘ್ರ ಇತ್ಯರ್ಥ ಪಡಿಸಿ

Published:
Updated:
ಭೂ ವ್ಯಾಜ್ಯ, ಪ್ರಕರಣ ಶೀಘ್ರ ಇತ್ಯರ್ಥ ಪಡಿಸಿ

ಚಿತ್ರದುರ್ಗ: ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿನ ಭೂ ವ್ಯಾಜ್ಯ ಪ್ರಕರಣಗಳನ್ನು ವಿಳಂಬ ಮಾಡದೆ ಶೀಘ್ರವೇ ಇತ್ಯರ್ಥ ಮಾಡುವಂತೆ ಸರ್ಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಬಸವರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ  ಕಂದಾಯಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿವಿಧ ಭೂ ವ್ಯಾಜ್ಯ, ಪರಿಹಾರ ಹಾಗೂ ಭೂ ಸುಧಾರಣಾ ಕಾಯ್ದೆ ನಿಯಮ ಉಲ್ಲಂಘನೆ ಪ್ರಕರಣ, ಮೇಲ್ಮನವಿ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ೬೪೮ ಹಾಗೂ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ೨೧೦೨ ಪ್ರಕರಣ ಬಾಕಿ ಉಳಿದಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದರು.ಈಗಾಗಲೇ ಬಾಕಿ ಇರುವ ಪ್ರಕರಣಗಳಲ್ಲಿ ಪಿಟಿಸಿಎಲ್ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ೧೭೪, ಜಿಲ್ಲಾಧಿಕಾರಿ ಕಚೇರಿಯಲ್ಲಿ ೧೬೦, ಕಂದಾಯ ಕಾಯ್ದೆಯಡಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ೯೬೫, ಜಿಲ್ಲಾಧಿಕಾರಿ ಕಚೇರಿಯಲ್ಲಿ ೧೦೮, ಭೂ ಸುಧಾರಣೆ ಕಾಯ್ದೆಯ ಉಲ್ಲಂಘನೆಯಡಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ೬೫೭, ಜಿಲ್ಲಾಧಿಕಾರಿ ಕಚೇರಿಯಲ್ಲಿ ೫, ಆರ್ಆರ್‌ಟಿ ಅಡಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ೨೭೭, ಇನಾಂ ರದ್ದತಿಯಡಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ೩ ಹಾಗೂ ಆರ್ಬಿಟ್ರೇಷನ್‌ನಡಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ೩೪೮ ಪ್ರಕರಣ, ಭೂ ದಾಖಲೆ ಹಾಗೂ ಭೂ ಮಾಪನ ಇಲಾಖೆಯಲ್ಲಿ ಪೋಡಿ ಹದ್ದುಬಸ್ತು ಪ್ರಕರಣಗಳಲ್ಲಿ ಸುಮಾರು ೭೨೫೬ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು,ಅದರಲ್ಲಿ ಮ್ಯುಟೇಷನ್ ೬, ದರ್ಖಾಸ್ತು ೫೨೨, ಭೂ ಸ್ವಾಧೀನ ೨, ಭೂ ಪರಿವರ್ತನೆ ೧೭೪, ತತ್ಕಾಲ್ ಪೋಡಿ ೪೩೧, ೧೧ ಇ ಸ್ಕೆಚ್ ೩೩೮೬, ಹದ್ದುಬಸ್ತು ೨೭೦೦, ಸಂಯೋಜಿತ ಮ್ಯುಟೇಷನ್ ಪೋಡಿಯಡಿ ೩೫ ಪ್ರಕರಣ ಬಾಕಿ ಇವೆ. ಅವುಗಳನ್ನು ಸಹ ವಿಳಂಬವಿಲ್ಲದೆ ಕಾಲ ಮಿತಿಯಲ್ಲಿ ಇತ್ಯರ್ಥಪಡಿಸಿ ಎಂದು ಸೂಚನೆ ನೀಡಿದರು.‘ಸಾಮಾಜಿಕ ಭದ್ರತಾ ಯೋಜನೆ ಗಳಾದ ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ ಹಾಗೂ ಸಂಧ್ಯಾಸುರಕ್ಷಾ ಯೋಜನೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೧,೦೮,೮೩೪ ಫಲಾನುಭವಿಗಳಿದ್ದಾರೆ. ಅದರಲ್ಲಿ ಖಜಾನೆ ಮೂಲಕ ೫೩೩೦೯ ಹಾಗೂ ವಿವಿಧ ಬ್ಯಾಂಕ್‌ಗಳ ಸ್ಮಾರ್ಟ್ ಕಾರ್ಡ್ ಮೂಲಕ ೫೫೫೨೫ ಫಲಾನುಭವಿಗಳಿಗೆ ಮಾಸಾಶನ ವಿತರಣೆ ಮಾಡಲಾಗುತ್ತಿದೆ. ಆದರೆ, ಸ್ಮಾರ್ಟ್ ಕಾರ್ಡ್‌ಗಳ ಮೂಲಕ ವಿತರಣೆ ಮಾಡುತ್ತಿರುವ ಮಾಸಾಶನ ಸರಿಯಾಗಿ ತಲುಪುತ್ತಿಲ್ಲ ಎನ್ನುವುದಾಗಿ ಹೊಸದುರ್ಗ ಶಾಸಕರು ನನ್ನೊಂದಿಗೆ ಚರ್ಚಿಸಿದ್ದಾರೆ. ಲೀಡ್ ಬ್ಯಾಂಕ್ ಮ್ಯಾನೇಜರ್ ಹಾಗೂ ಬ್ಯಾಂಕ್‌ ಗಳೊಂದಿಗೆ ಚರ್ಚಿಸಿ ಸಮರ್ಪಕವಾಗಿ ಮಾಸಾಶನ ತಲುಪುವಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ’ ಜಿಲ್ಲಾಧಿಕಾರಿಗೆ ತಿಳಿಸಿದರು.ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್, ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ ಹಾಗೂ ವಿವಿಧ ತಾಲ್ಲೂಕುಗಳ ತಹಶೀಲ್ದಾರರು ಸಭೆಯಲ್ಲಿ ಹಾಜರಿದ್ದರು.ಸಮಸ್ಯೆ ಉದ್ಭವಿಸುವ ಮೊದಲೇ ಸನ್ನದ್ಧರಾಗಿ

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಕಡಿಮೆ ಮಳೆಯಾಗಿರುವುದರಿಂದ ಡಿಸೆಂಬರ್ ನಂತರ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಬಹುದು. ಆದ್ದರಿಂದ ಬೇಸಿಗೆ ಮುನ್ನಾ ನೀರಿನ ಸಮಸ್ಯೆ ಉಂಟಾಗದಂತೆ ಜಿಲ್ಲಾಡಳಿತ ಎಲ್ಲ ರೀತಿಯಲ್ಲಿಯೂ ಸನ್ನದ್ಧವಾಗಬೇಕು. ಜಿಲ್ಲೆಯ ಜನರು ಮೂಲ ಸೌಕರ್ಯ ಹಾಗೂ ಕುಡಿಯುವ ನೀರಿಗಾಗಿ ಪದೇ ಪದೇ ಪ್ರತಿಭಟನೆ ಕೈಗೊಳ್ಳುತ್ತಿರುವ ಬಗ್ಗೆ ವರದಿಯಾಗುತ್ತಿರುವುದು ಗಮನಕ್ಕೆ ಬಂದಿದೆ.ಕುಡಿಯುವ ನೀರಿನ ಸಮಸ್ಯೆ ಬಂತೆಂದರೆ ಜನರು ಜಿಲ್ಲಾ ಪಂಚಾಯ್ತಿಗೆ ಕೇಳಲು ಹೋಗುವುದಿಲ್ಲ. ಜಿಲ್ಲಾಧಿಕಾರಿ ಕಚೇರಿ ಹತ್ತಿರ ಪ್ರತಿಭಟಿಸುತ್ತಾರೆ. ಆದ್ದರಿಂದ ನಾಗರಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸುವುದಕ್ಕೂ ಮೊದಲು ಸಮಸ್ಯೆ ಇದ್ದ ಕಡೆ ಪರಿಹರಿಸುವುದಕ್ಕೆ ಮುಂದಾಗಬೇಕು. ಇದಕ್ಕಾಗಿ ಪ್ರಕೃತಿ ವಿಕೋಪ ನಿಧಿಯಡಿ ಅನುದಾನ ಮೀಸಲಿರಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು.

– ಬಿ. ಬಸವರಾಜು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry