ಬುಧವಾರ, ಅಕ್ಟೋಬರ್ 16, 2019
21 °C

ಭೂ ಸ್ವಾಧೀನ ವಿರುದ್ಧ ಹೋರಾಟಕ್ಕೆ ನಿರ್ಧಾರ

Published:
Updated:

ಬೆಂಗಳೂರು: ಬಂಡವಾಳ ಆಕರ್ಷಣೆ ಹೆಸರಿನಲ್ಲಿ ರೈತರ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡು ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಬಂಡವಾಳಶಾಹಿಗಳಿಗೆ ನೀಡುವುದರ ವಿರುದ್ಧ ರಾಜ್ಯವ್ಯಾಪಿ ಹೋರಾಟ ನಡೆಸಲು ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ರಾಜ್ಯ ಮಂಡಳಿ ನಿರ್ಧರಿಸಿದೆ.ಸಿಪಿಐ 21ನೇ ರಾಜ್ಯ ಸಮ್ಮೇಳನದ ಕೊನೆಯ ದಿನವಾದ ಶನಿವಾರ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ `ಭೂ ಬ್ಯಾಂಕ್~ ಕಾರ್ಯಕ್ರಮದ ಅಡಿಯಲ್ಲಿ ರೈತರ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕ್ರಮಕ್ಕೆ ನಿರ್ಣಯದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದೆ.ರಾಜ್ಯ ಸರ್ಕಾರ ಹೂಡಿಕೆದಾರರ ಸಮಾವೇಶ ನಡೆಸಿ ಯಾವುದೇ ಪೂರ್ವಸಿದ್ಧತೆ ಇಲ್ಲದೆ ಉದ್ಯಮಿಗಳಿಗೆ ಭೂಮಿ ನೀಡುವುದನ್ನು ವಿರೋಧಿಸಲು ಗ್ರಾಮೀಣ ಪ್ರದೇಶಗಳಲ್ಲಿ ಹೋರಾಟ ರೂಪಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ವಿಷಯದಲ್ಲಿ ರೈತರು ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನಪರ ಚಳವಳಿಗಳ ಜೊತೆ ಕೈ ಜೋಡಿಸಬೇಕೆಂಬ ನಿರ್ಣಯಕ್ಕೆ ಸಿಪಿಐ ಬಂದಿದೆ.ಶನಿವಾರ ಮಧ್ಯಾಹ್ನದವರೆಗೂ ಪಕ್ಷದ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹ, ಚರ್ಚೆ ಮತ್ತು ಪರಿಶೀಲನೆ ನಡೆಯಿತು. ವಿವಿಧ ಜಿಲ್ಲೆಗಳಿಂದ ಬಂದಿದ್ದ 200ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.ರಾಜ್ಯ ಕಾರ್ಯದರ್ಶಿ ಮಂಡಳಿಯ ಪುನರ್ ರಚನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಈ ಸಂದರ್ಭದಲ್ಲಿ ಚರ್ಚೆ ನಡೆದಿದೆ ಎಂದು ಸಿಪಿಐ ಮೂಲಗಳು ತಿಳಿಸಿವೆ.ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಫೆ. 28ರಂದು ಎಡ ಪಕ್ಷಗಳು ಮತ್ತು ಅವುಗಳ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನಡೆಯುವ ರಾಷ್ಟ್ರವ್ಯಾಪಿ ಮುಷ್ಕರವನ್ನು ಯಶಸ್ವಿಗೊಳಿಸಲು ಅಗತ್ಯವಿರುವ ಸಿದ್ಧತೆ ಮಾಡಲು ಸಮ್ಮೇಳನದಲ್ಲಿ ತೀರ್ಮಾನಿಸಲಾಗಿದೆ.ದಲಿತರು, ಹಿಂದುಳಿದ ವರ್ಗದವರು ಮತ್ತು ಮಹಿಳೆಯರ ಮೇಲಿನ ಸಾಮಾಜಿಕ, ಸಾಂಸ್ಕೃತಿಕ ದಾಳಿಯ ವಿರುದ್ಧ ನಿರಂತರ ಹೋರಾಟ ಸೇರಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಮತ್ತು ಉಪಪ್ರಧಾನ ಕಾರ್ಯದರ್ಶಿ ಸುರವರಂ ಸುಧಾಕರ ರೆಡ್ಡಿ, ಪಕ್ಷದ ರಾಜ್ಯ ಮಂಡಳಿ ಕಾರ್ಯದರ್ಶಿ ಡಾ.ಸಿದ್ದನಗೌಡ ಪಾಟೀಲ, ಎಐಟಿಯುಸಿ ಮುಖಂಡ ಅನಂತಸುಬ್ಬರಾವ್, ಮುಖಂಡರಾದ ರಾಮಚಂದ್ರಪ್ಪ, ಶೇಷಾದ್ರಿ, ಪರಿಮಳಾ ಮತ್ತಿತರರು ಅಧ್ಯಕ್ಷೀಯ ಮಂಡಳಿ ವೇದಿಕೆಯಲ್ಲಿದ್ದರು.

Post Comments (+)