ಭೂ ಹಗರಣ: ಗೃಹ ಸಚಿವ ಅಶೋಕ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

5

ಭೂ ಹಗರಣ: ಗೃಹ ಸಚಿವ ಅಶೋಕ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

Published:
Updated:

ಬೆಂಗಳೂರು (ಪಿಟಿಐ): ಭೂ ಹಗರಣದ ಆಪಾದನೆ ಎದುರಿಸುತ್ತಿರುವ ಗೃಹ ಸಚಿವ ಆರ್. ಅಶೋಕ  ಅವರು ನೈತಿಕ ಆಧಾರದಲ್ಲಿ ರಾಜೀನಾಮೆ ನೀಡಿ ಲೋಕಾಯುಕ್ತ ತನಿಖೆ ಪ್ರಾಮಾಣಿಕವಾಗಿ ನಡೆಯುವುದನ್ನು ಖಾತರಿ ಪಡಿಸಬೇಕು ಎಂದು ವಿರೋಧಿ ಪಕ್ಷ ಕಾಂಗ್ರೆಸ್ ಬುಧವಾರ ಬೆಂಗಳೂರಿನಲ್ಲಿ ಆಗ್ರಹಿಸಿತು.ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಮೂರು ದಿನಗಳ ರಥಯಾತ್ರೆ ನಡೆಸುವ ಸಂದರ್ಭದಲ್ಲಿ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರು ತಮ್ಮ ಪಕ್ಷದ ಆಡಳಿತ ಇರುವ ಕರ್ನಾಟಕದಲ್ಲಿನ ~ಭ್ರಷ್ಟಾಚಾರ~ ಬಗ್ಗೆ ಬೆಳಕು ಚೆಲ್ಲಬೇಕು ಎಂದು ಹೇಳಿದರು.ರಾಜ್ಯದಲ್ಲಿನ ಬಿಜೆಪಿ ಸರ್ಕಾರವೇ ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ ಅಡ್ವಾಣಿಯವರು ಕರ್ನಾಟಕದಲ್ಲಿ ತಮ್ಮ ಜನ ಚೈತನ್ಯ ಯಾತ್ರೆಯನ್ನು ನಡೆಸಬಾರದಾಗಿತ್ತು. ಈಗ ಅವರು ಯಾತ್ರೆಯಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಬೇಕು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಸಂಪುಟದ ಹಲವಾರು ಸಚಿವ ಸಹೋದ್ಯೋಗಿಗಳು ಸೆರೆಮನೆ ಸೇರಿರುವ ಹಿನ್ನೆಲೆಯಲ್ಲಿ ಕನಿಷ್ಠ ಪಕ್ಷ ವಿಧಾನಸಭೆಯನ್ನು ವಿಸರ್ಜಿಸಿ ಹೊಸದಾಗಿ ಜನಾದೇಶ ಪಡೆಯುವಂತೆಯಾದರೂ ಅಡ್ವಾಣಿಯವರು ತಮ್ಮ ಪಕ್ಷದ ಸರ್ಕಾರಕ್ಕೆ ಸಲಹೆ ಮಾಡಬೇಕು ಎಂದು ಸಿದ್ಧರಾಮಯ್ಯ ಒತ್ತಾಯಿಸಿದರು.ತಮ್ಮ ಪೂರ್ವಾಧಿಕಾರಿ ಬಿ.ಎಸ್. ಯಡಿಯೂರಪ್ಪ ಅವರ ಬಂಧನದಿಂದ ತಮಗೆ ಮುಜುಗರವಾಗಿಲ್ಲ ಎಂಬುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ನೀಡಿದ್ದಾರೆನ್ನಲಾದ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್ ಧುರೀಣ ~ಬಿಜೆಪಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕು ಇಲ್ಲ~ ಎಂದು ಹೇಳಿದರು.ವಿರೋಧ ಪಕ್ಷ ಒತ್ತಾಯಿಸಿದಾಗಲೆಲ್ಲ ವಿಧಾನಸಭಾ ಅಧಿವೇಶನ ಕರೆಯಲಾಗದು ಎಂಬುದಾಗಿ ಮುಖ್ಯಮಂತ್ರಿ ನೀಡಿದ್ದಾರೆನ್ನಲಾದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ~ಇದು ಉದ್ಧಟತನದ ಪರಮಾವಧಿ~ ಎಂದು ಬಣ್ಣಿಸಿದರು. ~ ನಾವು ಜನರ ಸಮಸ್ಯೆಗಳ ಬಗ್ಗೆ ನಾವು ಮಾತನಾಡಬಾರದೇ ಎಂಬುದಾಗಿ ತಿಳಿಯಬಯಸುತ್ತೇನೆ~ ಎಂದೂ ಕಾಂಗ್ರೆಸ್ ಮುಖಂಡ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry