ಭೂ ಹಗರಣ- ಲೋಕಾಯುಕ್ತ ತನಿಖೆ: ಈಗ ಸಚಿವ ನಿರಾಣಿ ಸರದಿ

7

ಭೂ ಹಗರಣ- ಲೋಕಾಯುಕ್ತ ತನಿಖೆ: ಈಗ ಸಚಿವ ನಿರಾಣಿ ಸರದಿ

Published:
Updated:

 ಬೆಂಗಳೂರು, (ಪಿಟಿಐ): ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ಧ, ಹಣಕಾಸಿನ ಲಾಭಕ್ಕಾಗಿ ಸರ್ಕಾರಿ ಭೂಮಿಯನ್ನು ಡಿ ನೋಟಿಫೈ ಮಾಡಿದ ಆರೋಪದ ಕುರಿತು ತನಿಖೆ ನಡೆಸಲು ಲೋಕಾಯುಕ್ತ ನ್ಯಾಯಾಲಯವು ಸೋಮವಾರ ಆದೇಶ ನೀಡಿದ್ದು, ರಾಜ್ಯ ಬಿಜೆಪಿ ಸರ್ಕಾರಕ್ಕೆ ಈಗ ಮತ್ತೊಮ್ಮೆ ಮುಜುಗರ ಎದುರಾದಂತಾಗಿದೆ.

ಸಚಿವ ನಿರಾಣಿ ಅವರ ವಿರುದ್ಧ ಭ್ರಷ್ಟಚಾರ ನಿಗ್ರಹ ಕಾಯಿದೆ ಅನ್ವಯ ಸಲ್ಲಿಸಲಾದ ಅರ್ಜಿಯನ್ನು ಪುರಸ್ಕರಿಸಿದ ಲೋಕಾಯುಕ್ತ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ಸಚಿವರ ವಿರುದ್ಧ ಮಾಡಲಾದ ಭ್ರಷ್ಟಾಚಾರದ ಆರೋಪಗಳ ಕುರಿತು ತನಿಖೆ ನಡೆಸಿ ನವೆಂಬರ್ 16 ರಂದು ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.

ಕೈಗಾರಿಕಾ ಸಚಿವ ನಿರಾಣಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ ನಗರದ ಕೈಗಾರಿಕೋದ್ಯಮಿ ಆಲಂ ಪಾಷಾ ಎನ್ನುವವರು ಗುರುವಾರ ಈ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

`2010ರಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲಿ,  ಸ್ವಂತ ಲಾಭಕ್ಕಾಗಿ ತಮ್ಮ ಸಚಿವ ಸ್ಥಾನವನ್ನು ದುರುಪಯೋಗ ಮಾಡಿದ ಸಚಿವ ನಿರಾಣಿ ಅವರು, ತಾವು ಮತ್ತು ತಮ್ಮ ಕುಟುಂಬದ ಸದಸ್ಯರು ಸೇರಿದಂತೆ ಎಂಟು ಜನರು ಸೇರಿಕೊಂಡು ಅಸ್ತಿತ್ವವಿಲ್ಲದ ಸಂಸ್ಥೆಗಳನ್ನು ಹೆಸರಿಸಿದ್ದಾರೆ. ದೇವನಹಳ್ಳಿ ಮತ್ತು ದಾಬಸ್ ಪೇಟೆ ಸಮೀಪದಲ್ಲಿ ಕೈಗಾರಿಕಾ ಅಭಿವೃದ್ಧಿ ಮಂಡಳಿಗೆ ಸೇರಿದ್ದ ಭೂಮಿಯನ್ನು ಡಿನೋಟಿಫೈ ಮಾಡಿಸಿ ಆ ಸಂಸ್ಥೆಗಳಿಗೆ ಮಂಜೂರು ಮಾಡಿದ್ದಾರೆ, ಅದರಿಂದ ಸರ್ಕಾರದ ಬೊಕ್ಕಸಕ್ಕೆ 130 ಕೋಟಿ ರೂಪಾಯಿಯಯಷ್ಟು ನಷ್ಟ ಉಂಟಾಗಿದೆ~ ಎಂದೂ  ದೂರಿನಲ್ಲಿ ಆರೋಪಿಸಲಾಗಿತ್ತು. 

ಇದಲ್ಲದೇ ಯಾವ ಅಧಿಕಾರವಿಲ್ಲದಿದ್ದರೂ ಸಚಿವರು ತಾವೇ ಹೆಸರಿಸಿದ ವ್ಯಕ್ತಿಗಳಿಗೆ ಸೇರಿದ ಸಂಸ್ಥೆಗಳ ಹೆಸರಿನಲ್ಲಿ ಮಂಜೂರು ಮಾಡಿದ್ದ ಜಮೀನುಗಳನ್ನು ಒಟ್ಟಿಗೆ ಕೂಡಿಸಿ  ಅವುಗಳನ್ನು ಅಡವಿಟ್ಟು 500 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ ಎಂದೂ ದೂರಿನಲ್ಲಿ ತಿಳಿಸಲಾಗಿತ್ತು.

ಕಳೆದ ವಾರ ಸದಾನಂದಗೌಡ ಅವರ ಸಂಪುಟದ ಹಿರಿಯ ಸದಸ್ಯ ಗೃಹ ಸಚಿವ ಆರ್ .ಅಶೋಕ್ ಅವರ ವಿರುದ್ಧ  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಿಡಿಎ ಸ್ವಾಧೀನದಲ್ಲಿದ್ದ  ಭೂಮಿಯನ್ನು ಅಕ್ರಮವಾಗಿ ಖರೀದಿಸಿ, ಡಿ ನೋಟಿಫೈ ಮಾಡಿ ಲಾಭ ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ  ನ್ಯಾಯಾಲಯವು ತನಿಖೆಗೆ ಆದೇಶಿಸಿತ್ತು. ಈಗ  ಸದಾನಂದಗೌಡ ಅವರ ಸಂಪುಟದ ಇನ್ನೊಬ್ಬ  ಸದಸ್ಯ ಸಚಿವ ನಿರಾಣಿ ಅವರು ತನಿಖೆಗೆ ಒಳಪಡುತ್ತಿದ್ದಾರೆ. 

ದಕ್ಷಿಣ ಭಾರತದಲ್ಲಿ  ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದ ಹೆಗ್ಗಳಿಕೆ ಹೊಂದಿದ್ದ  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಣದ ಲಾಭಕ್ಕಾಗಿ ಸರ್ಕಾರಿ ಭೂಮಿಯನ್ನು ಡಿ ನೋಟಿಫೈ ಮಾಡಿದ ಕುರಿತಾದ ಖಾಸಗಿ ದೂರಿನ ಕಾರಣ ತೊಂದರೆ ಅನುಭವಿಸುತ್ತಿದ್ದಾರೆ. ಲೋಕಾಯುಕ್ತ ನ್ಯಾಯಾಲಯದ ಆದೇಶದಂತೆ ಈಗ ನ್ಯಾಯಾಂಗದ ವಶದಲ್ಲಿ  ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry