ಸೋಮವಾರ, ಜೂನ್ 21, 2021
29 °C

ಭೇಷ್ ಎನಿಸಿದ ಕಲಾಭಿವ್ಯಕ್ತಿ

ಡಾ. ಎಂ. ಸೂರ್ಯಪ್ರಸಾದ್ Updated:

ಅಕ್ಷರ ಗಾತ್ರ : | |

ನರ್ತಕಿಯ ಅಂಗಶುದ್ಧಿ ಮತ್ತು ಖಚಿತ ಲಯಗಳು ಸೂಕ್ತವಾಗಿ ಪ್ರಸ್ತುತ ಪಡಿಸಿದಾಗ ಮಾತ್ರ ನೃತ್ಯ ಆಕರ್ಷಣೀಯವಾಗಿರುತ್ತದೆ.ಇಂಥದ್ದೇ ಆಕರ್ಷಕ ನೃತ್ಯ ಶನಿವಾರ ಚೌಡಯ್ಯ ಸ್ಮಾರಕ ಭವನದಲ್ಲಿ ನೋಡಲು ದೊರೆಯಿತು. ಗುರು ವಸುಂಧರ ಸಂಪತ್‌ಕುಮಾರ್ ಶಿಷ್ಯೆ ಸ್ಮೃತಿ ಎಂ. ಹರಿತ್ಸ್ ಅವರ ಭರತನಾಟ್ಯ ಕಾರ್ಯಕ್ರಮ ರಸಿಕರ ಗಮನ ಸೆಳೆಯಿತು.ಆರಂಭದಲ್ಲಿ ಸ್ವಲ್ಪ ಅಳುಕಿದಂತೆ ಭಾಸವಾಯಿತು. ಆದರೆ ಸ್ಮೃತಿ  ಕ್ರಮೇಣ ಆತ್ಮವಿಶ್ವಾಸದಿಂದ ಸೂಕ್ತವಾಗಿ ಕಲಾಭಿವ್ಯಕ್ತಿಗೊಳಿಸಿದರು. ಭೇಷ್ ಎನ್ನಿಸುವಂಥ ಪ್ರದರ್ಶನ ನೀಡಿದರು.ಕಾರ್ಯಕ್ರಮದ ಮೊದಲ ಬಂಧವಾಗಿದ್ದ ನೃತ್ತ ಪ್ರಧಾನ ಮಲ್ಲಾರಿಯ ಅಂತಿಮ ಹಂತಗಳಲ್ಲಿ ಅವರು ಸಂಪೂರ್ಣ ವಿಶ್ವಾಸದಿಂದ ಯಾವುದೇ ಲೋಪವಿರದಂತೆ ಪ್ರಸ್ತುತ ಪಡಿಸಿದರು. ವಿಜಯವಿಠಲರ `ಗಜವದನನ್ನು ಪಾಲಿಸೋ~ (ಆಭೋಗಿ) ಎಂದು ಸ್ತುತಿಸಿದಾಗ ಅವರ ಅಭಿನಯ ಕೌಶಲವು ರಂಜಿಸಿತು. ಸುಬ್ರಹ್ಮಣ್ಯ ಕೌತುವಂ (ಗೌಳ) ಸ್ವಾಗತಾರ್ಹ ಮುನ್ನುಡಿಯಂತಾಯಿತು.ಆದರೂ ನರ್ತಕಿಯು ನವಿಲು ಗರಿಗಳನ್ನು ತಮ್ಮ ಮುಡಿಗೇರಿಸಿಕೊಂಡು ನರ್ತಿಸಿದ ಅಗತ್ಯ, ಅನಿವಾರ್ಯ ಅಥವಾ ಆಕರ್ಷಣೆ ಇತ್ತೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತು.ರಾಗಮಾಲಿಕಾ ಜತಿಸ್ವರ ಮನ ಒಪ್ಪುವ ಅಡುವುಗಳು, ಜತಿಗಳು ಮತ್ತು ತೀರ್ಮಾನಗಳಿಂದ ರೂಪ ತಳೆಯಿತು. ನೃತ್ಯ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಕಾಣಬರುವ `ಸಖಿಯೇ ಇಂದ ಜಾಲಂ ಏಲಡಿ ಎಂದನ್ ಸ್ವಾಮಿಯೇ ವರಚೊಲ್ಲಡಿ~  ಶಂಕರಾಭರಣ ವರ್ಣ ಆಕರ್ಷಕವೆನಿಸಿತು.ವಿರಹೋತ್ಕಂಠಿತ ನಾಯಕಿಯು ತನ್ನ ಸ್ವಾಮಿಯನ್ನು ಕರೆತರುವಂತೆ ತನ್ನ ಮನದಾಳವನ್ನು ತೋಡಿಕೊಳ್ಳುವ ಚಿತ್ರಣದಲ್ಲಿ ಅವರ ನಿಲುವು, ನಡೆಗಳೆಲ್ಲಾ ಕಣ್ಸೆಳೆದವು. ಅದರ ನೃತ್ತ, ನೃತ್ಯ ಮತ್ತು ಅಭಿನಯಾಂಶಗಳು ಪ್ರಶಂಸೆಗೆ ಅರ್ಹವಾದವು.

 

ಒಂದೆರಡು ಬಾರಿ ಅವರ ಅರೆಮಂಡಳಿಗಳ ಪ್ರಮಾಣ ಬದ್ಧತೆ ಏರುಪೇರಾದಂತೆ ಅನಿಸಿದರೂ ಆಕೆಯ ನಿಲುವುಗಳಲ್ಲಿ ಸೊಬಗು, ಆಂಗಿಕಗಳಲ್ಲಿ ಮತ್ತು ರೇಖಾ ವಿನ್ಯಾಸದಲ್ಲಿ ಸಾಮ್ಯತೆಗಳಿದ್ದವು.ಗುರು ವಸುಂಧರ ಸಂಪತ್‌ಕುಮಾರ್ (ನಟುವಾಂಗ), ಬಾಲಸುಬ್ರಹ್ಮಣ್ಯಶರ್ಮ (ಗಾಯನ), ನಟರಾಜ ಮೂರ್ತಿ (ಪಿಟೀಲು), ಜಯರಾಮ್ (ಕೊಳಲು), ಪ್ರಸನ್ನಕುಮಾರ್ (ರಿದಂ) ಮತ್ತು ಪುರುಷೋತ್ತಮ (ಮೃದಂಗ) ಅವರ ಪೋಷಕ ಮತ್ತು ಪೂರಕ ಪಕ್ಕವಾದ್ಯಗಳೊಂದಿಗೆ ಮುಂದುವರೆದ ಸ್ಮೃತಿ ಚೆಲಿನೇನೆಟ್ಲು (ಫರಸ್, ವಾಸಿಕಸಜ್ಜಿಕಾ ನಾಯಕಿಯ ಪ್ರಬುದ್ಧ ಅಭಿನಯ) ಮತ್ತು ಗುಮ್ಮನ ಕರೆಯದಿರೆ (ತಿಲ್ಲಂಗ್, ಬಾಲಕೃಷ್ಣನ ಚಿತ್ರಣ) ನರ್ತಕಿಯ ಪ್ರತಿಭೆ ಮತ್ತು ಪರಿಣತಿಗಳನ್ನು ಪ್ರತಿಬಿಂಬಿಸಿದವು.

 

ನಟರಾಜನನ್ನು ಕುರಿತಾದ ನಾಟ್ಯವನ್ನಾಡಿದ ಮತ್ತು ಸಿಂಧುಭೈರವಿ ತಿಲ್ಲಾನದೊಂದಿಗೆ ಅವರ ಭರತನಾಟ್ಯ ಪ್ರದರ್ಶನ ಕೊನೆಗೊಂಡಿತು.ವಿಶಿಷ್ಟ ವಸುಂಧರಾ

ಭರತನಾಟ್ಯ ನೃತ್ಯ ಪ್ರಕಾರಕ್ಕೆ ಕರ್ನಾಟಕದ ವಿಶಿಷ್ಟ ಕೊಡುಗೆಯಾಗಿ ಮೈಸೂರಿನ ಡಾ. ವಸುಂಧರಾ ದೊರೆಸ್ವಾಮಿ ಅವರು ಚಿರಪರಿಚಿತರಾಗಿದ್ದಾರೆ. ಶುದ್ಧ ಸಾಂಪ್ರದಾಯಿಕತೆ ಹಾಗೂ ಶಾಸ್ತ್ರೀಯತೆಯನ್ನು ಅತಿಕ್ರಮಿಸದೆ ಇರುವುದು ವಸುಂಧರಾ ಅವರ ವೈಶಿಷ್ಟ್ಯ.ಇದೇ ತತ್ವಗಳನ್ನು ಬಲಪಡಿಸುತ್ತ ತಮ್ಮ ಸಂಶೋಧನಾ ಪ್ರವೃತ್ತಿಯಿಂದ ಭರತನಾಟ್ಯದ ಆಯಾಮಗಳನ್ನು ವಿಸ್ತರಿಸುತ್ತಿದ್ದಾರೆ. ಪಂದನಲ್ಲೂರು ಶೈಲಿಯ ಸಾರ್ಥಕ ಪ್ರಬಲ ಪ್ರತಿಪಾದಕಿಯಾಗಿದ್ದಾರೆ.ಪುರುಷ-ಪ್ರಧಾನ ಸಮರ ಕಲೆಗಳಾದ (ಮಾರ್ಷಿಯಲ್ ಆರ್ಟ್ಸ್)ಮಣಿಪುರಿಯ `ಥಾಂಗ್ ಟಾ~ ಮತ್ತು ಕೇರಳದ  ಕಲರಿಯಪಟ್ಟು ಪ್ರಕಾರಗಳಲ್ಲೂ ಅಸಾಧಾರಣ ಪ್ರಭುತ್ವ ಸಾಧಿಸಿಕೊಂಡಿದ್ದಾರೆ.

 

ಜಾನಪದ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ವಸುಂಧರಾ ಅವರು ಜಾನಪದ ಮತ್ತು ಶಾಸ್ತ್ರೀಯ ನೃತ್ಯದ ನಡುವೆ ರಸಾತ್ಮಕ ಸೇತುವೆಯಾಗಿ ಮಹತ್ವಪೂರ್ಣ ಕೊಡುಗೆಯನ್ನು ನೀಡುತ್ತಿದ್ದಾರೆ.

 

ಯಕ್ಷಗಾನ ಸಂಗೀತದೊಂದಿಗೆ ಭರತನಾಟ್ಯ ಮಾಧ್ಯಮವನ್ನು ಮಿಳಿತಗೊಳಿಸಿ ಅವರು ನೀಡುತ್ತಿರುವ  ಪಾಂಚಾಲಿ  ನೃತ್ಯ ರೂಪಕ ಜನಪ್ರಿಯವಾಗಿದೆ.ಕರ್ನಾಟಕ ನೃತ್ಯಕಲಾ ಪರಿಷತ್ತು ಮತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕಳೆದ ಭಾನುವಾರ   ಭಾರತೀಯ ವಿದ್ಯಾಭವನದಲ್ಲಿ ಅವರ ಅಲ್ಪಾವಧಿಯ ಕಾರ್ಯಕ್ರಮದ ವೀಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಯಿತು.ಧ್ವನಿ ಮುದ್ರಿತ ಸಂಗೀತ ಸಹಕಾರದೊಂದಿಗೆ ಅವರು ಮಹತ್ವದ ಹರಿಹರನ ರಗಳೆಗಳಿಂದ ಆಯ್ದ  ಗುಂಡಣ್ಣನ ರಗಳೆಯನ್ನು ನೃತ್ಯೀಕರಿಸಿದರು.  ಆಡಿದನಾಡಿದನು ಆಹಾ  ಪದ್ಯವನ್ನು ಆಧರಿಸಿಕೊಂಡು ಶಿವನ ಗುಣಗಾನ (ಗಂಗಾವತರಣ) ಮಾಡಿದ ಡಾ. ವಸುಂಧರಾ ಅವರ ಗ್ರೀವಾ, ರೇಚಕ ಮತ್ತು ಕಾರ್ವೆಗಳು ಪ್ರೌಢವೂ ಕಲಾತ್ಮಕವೂ ಭರತನಾಟ್ಯದ ಅಪ್ರತಿಮ ಸೌಂದರ್ಯವನ್ನೂ ತೋರಿದವು.ಅವರ ವಯಸ್ಸನ್ನು ಮರೆಮಾಚಿಸುವಂತಹ ಚಲನವಲನಗಳು, ನಿಲುವುಗಳು ಮತ್ತು ಲಯ ನಿರ್ವಹಣೆ (ನಾಲ್ಕು ಗತಿಗಳ ಸಂಯೋಜನೆ) ನಿಷ್ಕಳಂಕವಾಗಿದ್ದು ಯುವ ಕಲಾವಿದರಲ್ಲಿ ಅಸೂಯೆ ಮೂಡಿಸುವಂತಿತ್ತು.ತಾಯಿಗೆ ತಕ್ಕ ಮಗಳು

ಶೇಷಾದ್ರಿಪುರದ ಲಿಂಕ್‌ರಸ್ತೆಯಲ್ಲಿರುವ ಕೇಶವ ಕಲ್ಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಪರಿಚಿತ ಕಲಾವಿದೆ ವೈಜಯಂತಿ ಕಾಶಿ ಅವರ ಪುತ್ರಿ-ಶಿಷ್ಯೆ ಪ್ರತೀಕ್ಷಾ ಕಾಶಿ  ಲೀಲಾಜಾಲವಾಗಿ ಕೂಚಿಪುಡಿ ನಾಟ್ಯದ ನಯ ನಾಜೂಕು ಮತ್ತು ನವಿರುಗಳನ್ನು ಪ್ರದರ್ಶಿಸಿದರು.

 

ಪುಟ್ಟ ವೇದಿಕೆಯನ್ನು ಕಲಾಪೂರ್ಣವಾಗಿ ಕ್ರಮಿಸಿ ಕೂಚಿಪುಡಿಯ ಓಘ ಮತ್ತು ತೇಜಸ್ಸನ್ನು ವ್ಯಕ್ತವಾಯಿತು. ದಾಸರ  `ಹರಿ ಆಡಿದನು~  ಮೂಲಕ ಬಾಲಕೃಷ್ಣನ ಚೇಷ್ಟೆಗಳು ಮತ್ತು ಲೀಲೆಗಳನ್ನು ರಮ್ಯವಾಗಿ ಅಭಿನಯಿಸಿದರು.

 

ಅದಕ್ಕೆ ನೃತ್ತವನ್ನು ಹೆಣೆದು ಕೆಲವು ಆವರ್ತನಗಳನ್ನು ಹಿತ್ತಾಳೆ ತಟ್ಟೆಯ ಮೇಲೆ ನಿರ್ವಹಿಸಿದರು. ಸ್ವಾತಿ ತಿರುನಾಳರ ಹಿಂದಿ ರಚನೆ  ಶಂಕರ ಶ್ರಿಗಿರಿನಾಥ ವನ್ನಾಧರಿಸಿ ಶಿವನ ಚಿತ್ರಣ ಮತ್ತು ಅಭಿನಯಕ್ಕೆ ಪೂರಕವಾಗಿದ್ದ ಸುಂದರ ಜತಿ ಮತ್ತು ಅಡುವುಗಳ ನೃತ್ತ ಗಮನ ಸೆಳೆಯಿತು.

 

ಭಾಮಾ ಕಲಾಪಂನ  ಲೇಖಾ  ಪ್ರಸಂಗವನ್ನು ಕುಳಿತ ಭಂಗಿಯಲ್ಲಿ ಅಭಿನಯಿಸಿ ನಂತರ ಎದ್ದು ಸಂಪೂರ್ಣ ವೇದಿಕೆಯನ್ನು ಬಳಸಿಕೊಂಡು ಅವರು ರಸಿಕರ ಹೃನ್ಮನಗಳನ್ನು ಗೆದ್ದರು. ದೇವೀ ಸ್ತುತಿಯೊಂದಿಗೆ ಅವರ ಕಾರ್ಯಕ್ರಮ ಸಮಾಪ್ತವಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.