ಭಾನುವಾರ, ಮಾರ್ಚ್ 26, 2023
31 °C
ನಳಪಾಕ

ಭೋಜನಪ್ರಿಯ ಲಖ್ಬೀರ್ ಖಾದ್ಯ ವೈವಿಧ್ಯ

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಭೋಜನಪ್ರಿಯ ಲಖ್ಬೀರ್ ಖಾದ್ಯ ವೈವಿಧ್ಯ

ಪಂಜಾಬ್‌ ಮೂಲದ ಲಖ್ಬೀರ್‌ ಸಿಂಗ್‌ ಈಗ ಬೆಂಗಳೂರಿನ ಶ್ಯಾಂಗ್ರಿ–ಲಾ ಹೋಟೆಲ್‌ನಲ್ಲಿರುವ ಎಸ್‌ಸ್ಯಾಫ್ರನ್‌ ರೆಸ್ಟೋರೆಂಟ್‌ನ ಮುಖ್ಯ ಬಾಣಸಿಗರಾಗಿ ಕೆಲಸ ಮಾಡುತ್ತಿದ್ದಾರೆ. ಹುಟ್ಟಿ ಬೆಳೆದಿದ್ದು ಪಂಜಾಬ್‌ನಲ್ಲಿಯಾದರೂ ಲಖ್ಬೀರ್‌ ಪಾಕ ವೃತ್ತಿಯಲ್ಲಿ ಹೆಚ್ಚು ಸಮಯ ಕಳೆದದ್ದು ಬೆಂಗಳೂರಿನಲ್ಲಿಯೇ. ಲಖ್ಬೀರ್‌ ತಂದೆ ಭಾರತೀಯ ಸೇನೆಯಲ್ಲಿದ್ದವರು. ಹೀಗಾಗಿ ಲಖ್ಬೀರ್‌ಗೆ ದೇಶ ಸುತ್ತುವ, ಆ ಭಾಗದ ತಿನಿಸುಗಳ ಅಪ್ಪಟ ರುಚಿಯನ್ನು ಸವಿಯುವ ಅವಕಾಶ ಸಿಗುತ್ತಲೇ ಇತ್ತು.



ಹೋದಲ್ಲೆಲ್ಲಾ ಆಯಾ ಪ್ರದೇಶದ ಜನಪ್ರಿಯ ಆಹಾರಗಳನ್ನು ಸವಿಯುವುದರ ಜೊತೆಗೆ ಅಲ್ಲಿನ ರೆಸ್ಟೋರೆಂಟ್‌ಗಳಲ್ಲಿ ನಡೆಯುವ ಆಹಾರೋತ್ಸವ ಮತ್ತು ಸ್ಟ್ರೀಟ್‌ಫುಡ್‌ಗಳ ರುಚಿಯನ್ನೂ ಮನಸಾರೆ ಸವಿಯುತ್ತಿದ್ದರಂತೆ. ಮಗನ ಆಹಾರಪ್ರೀತಿಯನ್ನು ಅರಿತಿದ್ದ ಲಖ್ಬೀರ್‌ ತಾಯಿ ಪುತ್ರನಿಗೆ ಆಹಾರ ತಯಾರಿಕೆಯ ಪಟ್ಟುಗಳನ್ನೂ ಹೇಳಿಕೊಟ್ಟರು.ಹೀಗಾಗಿ ತಾಯಿಯಿಂದ ಕಲಿತ ಸೀಕ್ರೆಟ್‌ ರೆಸಿಪಿಗಳು ಲಖ್ಬೀರ್‌ ಬತ್ತಳಿಕೆಯಲ್ಲಿ ಸಾಕಷ್ಟಿವೆ. 



ಭೋಜನಪ್ರಿಯರಾದ ಲಖ್ಬೀರ್‌ ತಮಗಿದ್ದ ಆಹಾರಪ್ರೀತಿಯಿಂದಲೇ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಸೇರಿಕೊಂಡರು. ಶಿಕ್ಷಣ ಪೂರೈಸಿದ ನಂತರ ಹಲವು ರೆಸ್ಟೊರೆಂಟ್‌ಗಳಲ್ಲಿ ಕೆಲಸ ಮಾಡಿದರು. ಬಾಣಸಿಗ ವೃತ್ತಿಯಲ್ಲಿ ಅನುಭವ ಹೆಚ್ಚುತ್ತಾ ಹೋದಂತೆ ಇವರ ಕೈರುಚಿಯೂ ಹೆಚ್ಚುತ್ತಾ ಹೋಯಿತು. ಈ ನಡುವೆ ತಾವೇ ಅನೇಕ ಬಗೆಯ, ವಿಶಿಷ್ಟ ರುಚಿಯ ಖಾದ್ಯಗಳನ್ನು ಅನ್ವೇಷಣೆ ಮಾಡಿ ಗ್ರಾಹಕರಿಗೆ ಉಣ ಬಡಿಸಿ ತಮ್ಮ ಅಡುಗೆಯಾತ್ರೆಯನ್ನು ಸಾಂಗವಾಗಿ ಮುಂದುವರಿಸಿಕೊಂಡು ಬರುತ್ತಿದ್ದಾರೆ.



ಅಂದಹಾಗೆ, ಮಾಂಸದಡುಗೆ ಮಾಡುವುದರಲ್ಲಿ ಇವರದ್ದು ಎತ್ತಿದ ಕೈ. ಪಂಜಾಬಿ, ಹೈದರಾಬಾದಿ ತಿನಿಸುಗಳನ್ನು ತಯಾರಿಸುವುದರಲ್ಲೂ ಪಳಗಿದ್ದಾರೆ. ‘ಕೊಟ್ಟ ಹಣಕ್ಕೆ ಮೋಸವಾಗದಂತೆ ಗ್ರಾಹಕರಿಗೆ ರುಚಿಯಾದ ಖಾದ್ಯಗಳನ್ನು ಉಣಬಡಿಸಬೇಕು. ಅವರಿಗೆ ಗುಣಮಟ್ಟದ, ಹೊಸ ರುಚಿಯ ಖಾದ್ಯಗಳನ್ನು ಬಡಿಸುವುದರಲ್ಲೇ ನನಗೆ ಪರಮಖುಷಿ ಸಿಗುತ್ತದೆ. ಇವೇ ನನ್ನ ಅಡುಗೆ ಮಂತ್ರಗಳು’ ಎನ್ನುವ ಲಖ್ಬೀರ್‌ ತಾವು ಮಾಡಿದ ಅಡುಗೆಯನ್ನು ಸಿಂಗರಿಸುವುದರಲ್ಲೂ ನಿಸ್ಸೀಮರು. ಇವರ ಡ್ರೆಸ್ಸಿಂಗ್‌ ಕೌಶಲಕ್ಕೆ ಸಾಟಿಯಾಗುವ ಮತ್ತೊಬ್ಬ ಬಾಣಸಿಗ ಸಿಗುವುದು ಕಷ್ಟ.



ಕಾನೆ ಕೆಂಪು

ಬೇಕಾಗುವ ಪದಾರ್ಥಗಳು:  ಕಾನೆ ಮೀನು (ಲೇಡಿ ಫಿಶ್) (250 ಗ್ರಾಂ), ಕೆಂಪು ಮೆಣಸಿನಕಾಯಿ ಪೇಸ್ಟ್, ನಿಂಬೆ ರಸ (30 ಎಂ.ಎಲ್‌.), ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಎಣ್ಣೆ, ಹೆಚ್ಚಿದ ಕರಿಬೇವು, ಧನಿಯಾ ಪುಡಿ, ಗರಂ ಮಸಾಲ, ಜೀರಿಗೆ ಪುಡಿ, ಕಡಲೆ ಹಿಟ್ಟು (30 ಗ್ರಾಂ), ಅಕ್ಕಿಹಿಟ್ಟು  (20 ಗ್ರಾಂ), ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಒಂದು ಬೋಗುಣಿಯಲ್ಲಿ ಮೀನನ್ನು ಬಿಟ್ಟು ಉಳಿದ ಎಲ್ಲ ಪದಾರ್ಥಗಳನ್ನು ಸೇರಿಸಿರಿ. ನಂತರ ಅದಕ್ಕೆ ನೀರು ಸುರಿದುಕೊಂಡು ನಯವಾದ ಪೇಸ್ಟ್ ಮಾಡಿಕೊಳ್ಳಿ.ಆಮೇಲೆ ಸ್ವಚ್ಛಗೊಳಿಸಿ ಕತ್ತರಿಸಿದ ಲೇಡಿಫಿಶ್‌ ಅನ್ನು ಮೊದಲೇ ಸಿದ್ಧಪಡಿಸಿಕೊಂಡ ಮಿಶ್ರಣದೊಳಕ್ಕೆ ಹಾಕಿ. ಮೀನಿಗೆ ಚೆನ್ನಾಗಿ ಮಸಾಲೆ ಹತ್ತುವಂತೆ ನೋಡಿಕೊಂಡು ನಂತರ ಅದನ್ನು ಅರ್ಧ ಗಂಟೆ ಹಾಗೆಯೇ ಇಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಮಸಾಲೆಯಲ್ಲಿ ಚೆನ್ನಾಗಿ ನೆನೆಯಿಸಿದ ಮೀನನ್ನು ಕಂದು ಬಣ್ಣಕ್ಕೆ ತಿರುಗುವವರೆಗೂ ಎಣ್ಣೆಯಲ್ಲಿ ಕರಿಯಿರಿ. ಈರುಳ್ಳಿ ರಿಂಗ್ ಮತ್ತು ಲಿಂಬೆ ತುಂಡಿನ ಜೊತೆಗೆ ಬಿಸಿಯಾಗಿ ತಿನ್ನಲು ನೀಡಿರಿ.



ಮಲೈ ಕೋಫ್ತಾ

ಬೇಕಾಗುವ ಸಾಮಾಗ್ರಿಗಳು: 
ತುರಿದ ಪನ್ನೀರ್ (100 ಗ್ರಾಂ), ಹೆಚ್ಚಿದ ಈರುಳ್ಳಿ, ಗೋಡಂಬಿ (150 ಗ್ರಾಂ), ಸ್ವಲ್ಪ ತುಪ್ಪ, ಅಡುಗೆ ಎಣ್ಣೆ, ಹೆಚ್ಚಿದ ಶುಂಠಿ ಸ್ವಲ್ಪ, ಶುಂಠಿ ಬೆಳ್ಳುಳ್ಳಿ ಪೇಸ್ಟ್ (10 ಗ್ರಾಂ), ಉಪ್ಪು ರುಚಿಗೆ ತಕ್ಕಷ್ಟು, ಜೋಳದ ಹಿಟ್ಟು (10 ಗ್ರಾಂ), ಹಸಿರು ಏಲಕ್ಕಿ ಪುಡಿ ಸ್ವಲ್ಪ, ಅಡುಗೆ ಕ್ರೀಂ (20 ಎಂ.ಎಲ್‌.), ಖೋವಾ (20 ಗ್ರಾಂ), ಬೆಂದ ಆಲೂಗಡ್ಡೆ, ಹೆಚ್ಚಿದ ಹಸಿರು ಮೆಣಸಿನಕಾಯಿ ಸ್ವಲ್ಪ.

ವಿಧಾನ: ಖೋವಾವನ್ನು ತುರಿದು ಅದಕ್ಕೆ ಹಸಿರು ಮೆಣಸಿನಕಾಯಿ, ಕೇಸರಿ, ಉಪ್ಪು ಮತ್ತು ಹೆಚ್ಚಿದ ಶುಂಠಿ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಗ್ರೇವಿಗೆ– ದಪ್ಪ ತಳದ ಬಾಣಲೆಗೆ ಎರಡು ಲೀಟರ್ ನೀರು ಹಾಕಿ. ಅದಕ್ಕೆ ಗೋಡಂಬಿ ಮತ್ತು ಈರುಳ್ಳಿ ಸೇರಿಸಿ, ಅದು ಹದವಾಗುವವರೆಗೂ ಬೇಯಿಸಿ. ಹೆಚ್ಚಾದ ನೀರನ್ನು ಸೋಸಿ, ತಣ್ಣಗಾಗಲು ಬಿಡಿ. ಆರಿದ ಮೇಲೆ ನಯವಾದ ಪೇಸ್ಟ್ ಮಾಡಿಕೊಳ್ಳಿ. ಮತ್ತೊಂದು ಬಾಣಲೆಯಲ್ಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ. ಅದಕ್ಕೆ ಮೊದಲೇ ತಯಾರಿಸಿಟ್ಟುಕೊಂಡ ಗೋಡಂಬಿ ಬೀಜದ ಪೇಸ್ಟ್ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿ. ನಂತರ ಅದಕ್ಕೆ ಏಲಕ್ಕಿ ಪುಡಿ ಮತ್ತು ಕ್ರೀಂ ಸೇರಿಸಿ.



ಕೋಫ್ತಾಗೆ– ತುರಿದ ಪನ್ನೀರ್, ಬೇಯಿಸಿ ತುರಿದುಕೊಂಡ ಆಲೂಗಡ್ಡೆ, ಏಲಕ್ಕಿ ಪುಡಿ, ಜೋಳದ ಹಿಟ್ಟು ಮತ್ತು ಉಪ್ಪನ್ನು ಸೇರಿಸಿ. ಇದನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ, ಪ್ರತಿ ಉಂಡೆಯಲ್ಲಿ ಖೋವಾ ಮಿಶ್ರಣ ಸೇರಿಸಿ, ನಯವಾದ ಉಂಡೆಗಳನ್ನಾಗಿ ಮಾಡಿ.  ಈ ಉಂಡೆಗಳನ್ನು ಕಂದು ಬಣ್ಣ ಬರುವವರೆಗೂ ಎಣ್ಣೆಯಲ್ಲಿ ಕರಿಯಿರಿ. ಗ್ರೇವಿಗೆ ಉಂಡೆಗಳನ್ನು ಸೇರಿಸಿ, ಚೆನ್ನಾಗಿ ಕಲೆಸಿ, ಅದನ್ನು ಕುದಿಸಿ. ಕೆಲವು ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಬಿಸಿಯಾಗಿದ್ದಾಗ ತಿನ್ನಲು ಬಡಿಸಿರಿ.



ಇಂಗು ಜೀರಿಗೆಯ ತಡ್ಕಾವಾಲಿ ದಾಲ್ಬೇ

ಕಾಗುವ ಪದಾರ್ಥಗಳು: ಹೆಚ್ಚಿದ ಬೆಳ್ಳುಳ್ಳಿ, ಜೀರಿಗೆ, ಹೆಚ್ಚಿದ ಈರುಳ್ಳಿ, ಚಿಟಿಕೆಯಷ್ಟು ಇಂಗು ಮತ್ತು ಅರಿಶಿಣ ಪುಡಿ, ಮೂರು ಕೆಂಪು ಮೆಣಸಿನಕಾಯಿ, ಟೊಮೆಟೊ, ಸ್ವಲ್ಪ ಹಸಿರು ಮೆಣಸಿನಕಾಯಿ, ಹೆಸರುಬೇಳೆ ಹಳದಿ (40 ಗ್ರಾಂ), ಮಸೂರ್ ಬೇಳೆ ಕೆಂಪು (30 ಗ್ರಾಂ),  ತುಪ್ಪ  (25 ಗ್ರಾಂ), ಸ್ವಲ್ಪ ಕೊತ್ತಂಬರಿ ಸೊಪ್ಪು, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ದಾಲ್‌ಗೆ– ಹಳದಿ ಮತ್ತು ಕೆಂಪುಬೇಳೆಯನ್ನು ತೊಳೆದು ಅದಕ್ಕೆ ಉಪ್ಪು, ಅರಿಶಿಣ ಸೇರಿಸಿರಿ. ನಂತರ ಅದನ್ನು ಅರ್ಧ ಗಂಟೆ ಅಥವಾ ಬೇಳೆ ಬೇಯುವವರೆಗೆ ಬೇಯಿಸಿ. ತಡ್ಕಾಗೆ– ಮೊದಲು ಒಂದು ಬಾಣಲೆಗೆ ತುಪ್ಪ ಹಾಕಿ. ತುಪ್ಪ ಬಿಸಿಯಾದ ನಂತರ ಅದಕ್ಕೆ ಜೀರಿಗೆ ಮತ್ತು ಕೆಂಪು ಮೆಣಸಿನಕಾಯಿ ಸೇರಿಸಿ.



ಜೀರಿಗೆ ಸಿಡಿದಾಗ ಅದಕ್ಕೆ ಬೆಳ್ಳುಳ್ಳಿ ಸೇರಿಸಿ. ನಂತರ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಅದು ಹದವಾಗುವವರೆಗೂ ಬೇಯಿಸಿ. ಆಮೇಲೆ ಹಿಂಗು, ಟೊಮೆಟೊ ಸೇರಿಸಿ ಅವು ಮೆತ್ತಗಾಗುವವರೆಗೂ ಬೇಯಿಸಿ. ಬೆಂದ ಬೇಳೆಯನ್ನು ಅದಕ್ಕೆ ಸೇರಿಸಿ. ಅಲ್ಲಿಗೆ ತಡ್ಕಾವಾಲಿ ದಾಲ್‌ ರೆಡಿ. ಸಿದ್ಧವಾದ ದಾಲ್‌ ಅನ್ನು ಒಂದು ಬೌಲ್‌ಗೆ ಸುರಿದು ಅದರ ಮೇಲೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.