ಭೋಜನ ಸಮ್ಮೇಳನ ಆಗದಿರಲಿ

7

ಭೋಜನ ಸಮ್ಮೇಳನ ಆಗದಿರಲಿ

Published:
Updated:

‘ವಿಶ್ವ ಕನ್ನಡ ಸಮ್ಮೇಳನದಲ್ಲಿ ಭೂರಿ ಭೋಜನ’ ಎಂಬ ವರದಿಯನ್ನು ನೋಡಿ (ಫೆ .12),  ‘ನಾಯಿ ಬಾಲ ಡೊಂಕು’ ಎಂಬಂತೆ ಸಮ್ಮೇಳನಗಳು ಸಾಗುತ್ತಿರುವ ದಾರಿಯನ್ನು ನೆನೆದು ನಗಬೇಕೋ ಅಳಬೇಕೋ ತಿಳಿಯಲ್ಲಿಲ್ಲ. ಸಮ್ಮೇಳನಗಳಿಗೆ ಬರುವವರಿಗೆ ಭೋಜನದ ವ್ಯವಸ್ಥೆ ಮಾಡಿಕೊಡುವುದು ಅತ್ಯಗತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.ಆದರೆ ಭೋಜನವೇ ಸಮ್ಮೇಳನಗಳ ಮುಖ್ಯ ಅಂಗವಾಗುತ್ತಿರುವುದು, ಎಲ್ಲ ಸಮ್ಮೇಳನಗಳಲ್ಲಿಯೂ ಅದು ಸಮಸ್ಯೆಗೆ ಕಾರಣವಾಗುತ್ತಿರುವುದು, ಪರಿಣಾಮವಾಗಿ ಸಾಹಿತ್ಯ ಸಮ್ಮೇಳನಗಳ ಆತಿಥ್ಯ ವಹಿಸಿಕೊಳ್ಳುವವರನ್ನೆಲ್ಲ ಊಟದ ವ್ಯವಸ್ಥೆಯೇ ದುಃಸ್ವಪ್ನವಾಗಿ ಕಾಡುತ್ತಿರುವುದು ವಾಸ್ತವ ಸಂಗತಿ.ಈ ಹಿನ್ನೆಲೆಯಲ್ಲಿಯೇ, ಸಾಹಿತ್ಯ ಸಮ್ಮೇಳನಗಳ ವ್ಯವಸ್ಥಾಪಕರು ಊಟದ ವ್ಯವಸ್ಥೆಯ ಹೊಣೆ ಹೊರುವ ಬದಲು ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸುವ ಬಗ್ಗೆ ಗಂಭೀರ ಚಿಂತನೆಗಳು ನಡೆಯಬೇಕು ಎಂದು ಅನೇಕ ಮಂದಿ ಹಿರಿಯ ಸಾಹಿತಿಗಳು, ಪ್ರಜ್ಞಾವಂತರು ಹೇಳುತ್ತಲೇ ಬಂದಿದ್ದಾರೆ. ಆದರೆ ಈ ಬಗ್ಗೆ ಯಾರೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ತಪ್ಪುಗಳಿಂದ ನಾವು ಪಾಠ ಕಲಿಯುತ್ತಿಲ್ಲ.ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಮ್ಮೇಳನದ ಸಂದರ್ಭದಲ್ಲಿಯೂ ಊಟದ ವ್ಯವಸ್ಥೆಯು ಭಾರೀ ಗದ್ದಲ, ಗೊಂದಲ, ಆಕ್ರೋಶಗಳಿಗೆಲ್ಲ ಕಾರಣವಾದ ನೆನಪು ಮರೆಯಾಗುವ ಮುನ್ನ ಬೆಳಗಾವಿ ಸಮ್ಮೇಳನದಲ್ಲಿ ಒಂದೂವರೆ ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿರುವ ಸುದ್ದಿ ಹೊರಬಿದ್ದಿದೆ.  ‘ವಿಶ್ವ ಕನ್ನಡದ ಸಮ್ಮೇಳನ’ದ ತಯಾರಿಯ ಬದಲು ಅದು  ‘ವಿಶ್ವ ಭೋಜನ ಸಮ್ಮೇಳನ’   ವಾಗುವ ದಾರಿಯಲ್ಲಿ ಸಾಗಿದಂತಿದೆ.ಇನ್ನಾದರೂ ಸಮ್ಮೇಳನಗಳಲ್ಲಿ ಕನ್ನಡ, ಸಂಸ್ಕೃತಿ, ಸಾಹಿತ್ಯ ಇವು ಮುಖ್ಯವಾಗ ಬೇಕೋ ಅಥವಾ ಊಟ ಮುಖ್ಯವಾಗಬೇಕೋ ಎಂಬ ವಿಚಾರದಲ್ಲಿ ಖಚಿತ ನಿಲುವು ಮತ್ತು ದೃಢ ಕ್ರಮ ತೆಗೆದುಕೊಳ್ಳದಿದ್ದರೆ, ಅಲ್ಲಿ ಊಟದ ಸಮಸ್ಯೆ ಕಾಯಮ್ಮಾಗಿ ಮುಂದುವರಿಯುವುದರಲ್ಲಿ ಮತ್ತು ಸಮ್ಮೇಳನಗಳ ಯಶಸ್ಸಿನ ಬಣ್ಣವನ್ನು ಅಲ್ಲಿನ ಭೋಜನ ವ್ಯವಸ್ಥೆ ಗೊಂದಲಗಳ ಮಸಿ ನುಂಗುತ್ತಲೇ ಇರುವುದರಲ್ಲಿ ಅನುಮಾನವಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry