ಭೋವಿ ಸಮಾವೇಶ: ಭವ್ಯ ಮೆರವಣಿಗೆ

7

ಭೋವಿ ಸಮಾವೇಶ: ಭವ್ಯ ಮೆರವಣಿಗೆ

Published:
Updated:

ಬೀದರ್: ಶಿವಯೋಗಿ ಸಿದ್ಧರಾಮೇ ಶ್ವರರ 839 ನೇ ಜಯಂತಿ ಹಾಗೂ ಜಿಲ್ಲಾ ಪ್ರಥಮ ಭೋವಿ (ವಡ್ಡರ್) ಸಮಾವೇಶದ ನಿಮಿತ್ತ ನಗರದಲ್ಲಿ ಸೋಮವಾರ ಅಲಂಕೃತ ವಾಹನದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರ ಹಾಗೂ ಸಾರೋಟಿನಲ್ಲಿ ಕರ್ನಾಟಕ ಭೋವಿ (ವಡ್ಡರ) ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಭವ್ಯ ಮೆರವಣಿಗೆ ನಡೆಯಿತು.ಬೆಳಿಗ್ಗೆ ನಗರದ ಗಣೇಶ ಮೈದಾನದ ಬಳಿ ಮಾಜಿ ಸಚಿವ ಭೀಮಣ್ಣ ಖಂಡ್ರೆ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಆರಂಭಗೊಂಡ ಮೆರವಣಿಗೆಯು ಹರಳಯ್ಯ ವೃತ್ತ, ಶಿವಾಜಿ ವೃತ್ತ, ಭಗತ್‌ಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಜನರಲ್ ಕರಿಯಪ್ಪ ವೃತ್ತ, ನೆಹರು ಕ್ರೀಡಾಂಗಣ, ಮಡಿವಾಳ ಮಾಚಿದೇವ ವೃತ್ತದ ಮೂಲಕ ಹಾಯ್ದು ಹೊಸ ಬಸ್ ನಿಲ್ದಾಣ ಹತ್ತಿರ ಇರುವ ಝೀರಾ ಫಂಕ್ಷನ್ ಹಾಲ್‌ನಲ್ಲಿ ಸಮಾವೇಶಗೊಂಡಿತು.ಮಹಿಳೆಯರ ಡೊಳ್ಳು ಕುಣಿತ ಮೆರವಣಿಗೆಯ ಮೆರಗು ಹೆಚ್ಚಿಸಿತು. ಸಾಗರದ ತಾಂಡವ ಜನಪದ ಕಲಾ ತಂಡದ ಮಹಿಳೆಯರು ಆಕರ್ಷಕ ಡೊಳ್ಳು ಕುಣಿತ ಪ್ರದರ್ಶಿಸಿದರು. ಡೊಳ್ಳಿನ ಮೇಲೆ ನಿಂತು ಡೊಳ್ಳು ಬಾರಿಸಿದ್ದು ಎಲ್ಲರ ಗಮನ ಸೆಳೆಯಿತು.ಕಳಸ ಹೊತ್ತ ಮಹಿಳೆಯರು ಮೆರವಣಿಗೆಯ ವೈಭವ ಹೆಚ್ಚಿಸಿದರು. ಸಂಗೀತದ ಅಬ್ಬರಕ್ಕೆ ಯುವಕರು ಕುಣಿದು ಕುಪ್ಪಳಿಸಿದರು. ಹಿರಿಯರು ಕೂಡ ಹೆಜ್ಜೆ ಹಾಕಿದರು. ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ್ ಬೆಳಮಗಿ, ಶಾಸಕರಾದ ಅರವಿಂದ ಲಿಂಬಾವಳಿ, ಸುನೀಲ ವಲ್ಯ್‌ಪುರೆ, ಮಾನಪ್ಪ ವಜ್ಜಲ್, ಈಶ್ವರ ಖಂಡ್ರೆ, ರಹೀಮ್‌ಖಾನ್, ಭೋವಿ ಸಮಾಜದ ಜಿಲ್ಲಾ ಅಧ್ಯಕ್ಷ ಮಾಣಿಕರಾವ ವಾಡೇಕರ್, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ರಾಮಣ್ಣ ಒಡೆಯರ್, ಉಪಾಧ್ಯಕ್ಷ ಸುರೇಶ ಹುಬ್ಬಳ್ಳಿಕರ್, ಪ್ರಧಾನ ಕಾರ್ಯದರ್ಶಿ ರವಿ ರಾಮಲೆ, ಪ್ರಮುಖರಾದ ರಾಜು ಸಿಂಧೆ, ನಾಗನಾಥ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

-0-

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry