ಭೌತವಿಜ್ಞಾನಿಗಳ ಮಹಾಹೆಜ್ಜೆ

ಶನಿವಾರ, ಜೂಲೈ 20, 2019
28 °C

ಭೌತವಿಜ್ಞಾನಿಗಳ ಮಹಾಹೆಜ್ಜೆ

Published:
Updated:

ಜಿನಿವಾ ಬಳಿ ಐರೋಪ್ಯ ಪರಮಾಣು ಸಂಶೋಧನಾ ಸಂಸ್ಥೆ (ಸಿಇಆರ್‌ಎನ್) ನಿರ್ಮಿಸಿದ ಭೂತಳ ಪ್ರಯೋಗಾಲಯದಲ್ಲಿ ಸೃಷ್ಟಿಯ ಮೂಲ ಧಾತು ಎನ್ನಲಾದ ಹಿಗ್ಸ್ ಬೋಸನ್ ಕಣಗಳನ್ನು ಹೋಲುವ ಕಣಗಳು ಪತ್ತೆಯಾಗಿರುವುದು ಜಗತ್ತಿನಾದ್ಯಂತ ಭೌತವಿಜ್ಞಾನಿಗಳಲ್ಲಿ ಭಾರಿ ಸಡಗರಕ್ಕೆ ಕಾರಣವಾಗಿದೆ.ವಿಶ್ವದ ಉಗಮಕ್ಕೆ ಕಾರಣವಾದ ಮಹಾಸ್ಫೋಟದ (ಬಿಗ್‌ಬ್ಯಾಂಗ್) ಸನ್ನಿವೇಶವನ್ನು ಕೃತಕವಾಗಿ ಸೃಷ್ಟಿಸಿ ಸ್ಫೋಟದ ನಂತರದ ಕ್ಷಣಗಳಲ್ಲಿ ಪರಮಾಣುಗಳು ದ್ರವ್ಯರಾಶಿ ಗಳಿಸಿಕೊಂಡಿದ್ದು ಹೇಗೆ ಎಂದು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದರು.

 

ಪರಮಾಣುಗಳ ಉಪಕಣಗಳಿಗೆ ದ್ರವ್ಯರಾಶಿಯನ್ನು ನೀಡಿದ್ದು ಹಿಗ್ಸ್ ಬೋಸನ್ (ದೇವ ಕಣ) ಕಣಗಳು ಎಂಬ ಸಿದ್ಧಾಂತ ದಶಕಗಳಿಂದ ಚಾಲ್ತಿಯಲ್ಲಿತ್ತು. ಭಾರತೀಯ ಭೌತವಿಜ್ಞಾನಿ ಸತ್ಯೇಂದ್ರನಾಥ್ ಬೋಸ್ ಹಾಗೂ ಐನ್‌ಸ್ಟೀನ್ 20ನೇ ಶತಮಾನದ ಆರಂಭದಲ್ಲಿ ನಡೆಸಿದ ಸಂಶೋಧನೆ ಆಧರಿಸಿ ಬ್ರಿಟನ್ ವಿಜ್ಞಾನಿ ಪೀಟರ್ ಹಿಗ್ಸ್ ಅವರು ಈ ಸಿದ್ಧಾಂತ ಮಂಡಿಸಿದ್ದರಿಂದ ಈ  ಕಣಗಳಿಗೆ `ಹಿಗ್ಸ್ ಬೋಸನ್~ ಎಂಬ ಹೆಸರು ನೀಡಲಾಗಿದೆ. ಈ ಕಣಗಳನ್ನು ಪತ್ತೆ ಹಚ್ಚುವ ಸಲುವಾಗಿಯೇ `ಸಿಇಆರ್‌ಎನ್~ ಭೂಮಿಯ ಆಳದ ಪ್ರಯೋಗಾಲಯದಲ್ಲಿ ಬೃಹತ್ ಡಿಕ್ಕಿ ಯಂತ್ರವೊಂದನ್ನು (ಲಾರ್ಜ್ ಹೆಡ್ರನ್ ಕೊಲೈಡರ್) ನಿರ್ಮಿಸಿ ಅತಿ ವೇಗದಲ್ಲಿ ಪರಮಾಣುವಿನ ಉಪಕಣವಾದ ಪ್ರೋಟಾನ್‌ಗಳ ಡಿಕ್ಕಿ ಹೊಡೆಸಿ ಫಲಿತಾಂಶವನ್ನು ಎದುರುನೋಡುತ್ತಿತ್ತು. ಕಣ ಭೌತಶಾಸ್ತ್ರದ ಅಧ್ಯಯನಕ್ಕೆ ದೊಡ್ಡ ತಿರುವು ನೀಡಬಹುದಾದ ಈ ಪ್ರಯೋಗಕ್ಕೆ 2008ರ ಅಕ್ಟೋಬರ್‌ನಲ್ಲಿ ಮೊದಲ ಬಾರಿ ಚಾಲನೆ ನೀಡಲಾಗಿತ್ತು.ಈ ಅಧ್ಯಯನದಲ್ಲಿ  `ಸಿಇಆರ್‌ಎನ್~ ವಿಜ್ಞಾನಿಗಳ ಜತೆ ಭಾರತ ಸೇರಿದಂತೆ ಹಲವು ದೇಶಗಳ ವಿಜ್ಞಾನಿಗಳು ಕೈಜೋಡಿಸಿದ್ದರು. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಹಲವು ಬಾರಿ ಪ್ರಯೋಗಗಳನ್ನು ನಡೆಸಿ ಫಲಿತಾಂಶವನ್ನು ಕಂಪ್ಯೂಟರ್ ಮೂಲಕ ವಿಶ್ಲೇಷಣೆಗೆ ಒಳಪಡಿಸುವ ಯತ್ನ ನಿರಂತರವಾಗಿ ನಡೆದಿತ್ತು. ಜಿನಿವಾದಲ್ಲಿ ಬುಧವಾರ ನಡೆದ ವಿಚಾರಸಂಕಿರಣದಲ್ಲಿ `ಸಿಇಆರ್‌ಎನ್~ ವಿಜ್ಞಾನಿಗಳು `ಹಿಗ್ಸ್ ಬೋಸನ್~ ಹೋಲುವ ಕಣ ಪತ್ತೆಯಾಗಿರುವುದನ್ನು ದೃಢಪಡಿಸಿರುವುದು ವೈಜ್ಞಾನಿಕ ವಲಯದಲ್ಲಿ ಹೊಸ ನಿರೀಕ್ಷೆಗಳನ್ನು ಗರಿಗೆದರಿಸಿದೆ.ಈ ಸಂಶೋಧನೆ ಸೃಷ್ಟಿ ರಹಸ್ಯ ಅರಿಯಲು ಮುಂದಿನ ದಿನಗಳಲ್ಲಿ ನೆರವಾಗಲಿದೆ ಎಂಬುದು ಮಹತ್ವದ ಸಂಗತಿ. ಇದು ಅಂತ್ಯ ಅಲ್ಲ, ಆರಂಭ ಎಂದು ಹಲವು ವಿಜ್ಞಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.ಜೀವವಿಜ್ಞಾನದಲ್ಲಿ ವಿಕಾಸವಾದದ ಸಿದ್ಧಾಂತ ಮಂಡನೆಯಾದಾಗ ಎಂತಹ ಸಂಭ್ರಮ ಕಂಡಿತ್ತೋ ಅಂಥದ್ದೇ ಸಂಭ್ರಮವನ್ನು ಭೌತವಿಜ್ಞಾನಿಗಳು ಅನುಭವಿಸುತ್ತಿದ್ದಾರೆ. ಈ ಸಂಭ್ರಮದಲ್ಲಿ ಭಾರತದ ವಿಜ್ಞಾನಿಗಳಿಗೂ ಪಾಲಿದೆ. ನೂರಕ್ಕೂ ಹೆಚ್ಚಿನ ಭಾರತೀಯ ವಿಜ್ಞಾನಿಗಳು ಈ ಸಂಶೋಧನೆಯ ವಿವಿಧ ಹಂತಗಳಲ್ಲಿ ಪಾಲ್ಗೊಂಡಿದ್ದಾರೆ.ಅಲ್ಲದೆ, ಭಾರತದ  ಮುಂಬೈನ ಟಾಟಾ ಮೂಲವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಕಂಪ್ಯೂಟರ್ ಜಾಲ ನಿರ್ಮಿಸಿಕೊಡುವಲ್ಲಿ `ಸಿಇಆರ್‌ಎನ್~ಗೆ ನೆರವು ನೀಡಿದ್ದರು. ಕೆಲ ಯಂತ್ರೋಪಕರಣಗಳನ್ನು ಪೂರೈಸಿದ್ದರು.ನಿಜಕ್ಕೂ `ಸಿಇಆರ್‌ಎನ್~ ವಿಜ್ಞಾನಿಗಳ ಈ ಯಶಸ್ಸು ನಮ್ಮ ಯುವವಿಜ್ಞಾನಿಗಳಿಗೆ ಹೊಸ ಪ್ರೇರಣೆ ಆಗಬಹುದು. ವೃತ್ತಿಪರ ಕೋರ್ಸ್‌ಗಳಿಗೆ ಮುಗಿಬಿದ್ದು ಮೂಲವಿಜ್ಞಾನದಿಂದ ದೂರ ಸರಿಯುತ್ತಿರುವ ವಿದ್ಯಾರ್ಥಿ ಸಮುದಾಯಕ್ಕೆ ಭೌತಶಾಸ್ತ್ರ, ರಾಸಾಯನಿಕಶಾಸ್ತ್ರಗಳಂತಹ ವಿಜ್ಞಾನದ ಮೂಲ ಶಾಖೆಗಳಲ್ಲಿ ಅಧ್ಯಯನ ನಡೆಸಲು ಈ ಸಾಧನೆ ಸ್ಫೂರ್ತಿಯಾಗಲಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry