ಭ್ರಮನಿರಸನಗೊಂಡ ಅಭ್ಯರ್ಥಿಗಳು!

ಬುಧವಾರ, ಜೂಲೈ 17, 2019
28 °C

ಭ್ರಮನಿರಸನಗೊಂಡ ಅಭ್ಯರ್ಥಿಗಳು!

Published:
Updated:

ಬೆಂಗಳೂರು: ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ನಡೆದ ಹಗರಣಗಳ ಬಗ್ಗೆ ತನಿಖೆ ನಡೆಸಿ ಸಿಐಡಿ ನೀಡಿದ ವರದಿ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದೇ ಇರುವುದರಿಂದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಆಕಾಂಕ್ಷಿಗಳು ಭ್ರಮನಿರಸನಗೊಂಡಿದ್ದಾರೆ.`ಏನ್ ಮಾಡೋದು ಈಗ. ಈ ಹಿಂದೆ ನಡೆದ ತನಿಖಾ ವರದಿಗೆ ಸಂಬಂಧಿಸಿದಂತೆಯೇ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹೈಕೋರ್ಟ್ ನಿರ್ದೇಶನ ನೀಡಿ 2 ವರ್ಷವಾದರೂ ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸಿಲ್ಲ. ಈಗ ಮತ್ತೆ ಸಿಐಡಿ ತನಿಖೆ ನಡೆಯುತ್ತಿದೆ. ಇದು ಇನ್ನು 2-3 ವರ್ಷ ಆಗಬಹುದು. ಅಲ್ಲಿಯವರೆಗೆ ನಾವು ಏನು ಮಾಡಬೇಕು. ಮಣ್ಣು ತಿನ್ನಬೇಕಾ? ಬೇರೆ ಉದ್ಯೋಗ ನೋಡಿಕೊಳ್ಳೋದೊಂದೇ ಈಗಿರುವ ದಾರಿ' ಎಂದು ಈ ಬಾರಿ ಸಂದರ್ಶನಕ್ಕೆ ಹಾಜರಾಗಿದ್ದ ಅಭ್ಯರ್ಥಿಯೊಬ್ಬರು ಹೇಳುತ್ತಾರೆ.`ಕೆಪಿಎಸ್‌ಸಿಯಲ್ಲಿ ಪ್ರತಿ ಬಾರಿಯೂ ಅಕ್ರಮ ನಡೆಯುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟವಾದ ನಂತರ ಸಂದರ್ಶನಕ್ಕೆ ಆಯ್ಕೆಯಾದವರೆಲ್ಲ ಆಯೋಗದ ಕೆಲ ಸದಸ್ಯರ ಬಳಿಗೆ ಹೋಗಿ ವ್ಯವಹಾರ ನಡೆಸಿ ಉದ್ಯೋಗ ಖಚಿತಪಡಿಸಿಕೊಳ್ಳುವುದು ಸಂಪ್ರದಾಯವೇ ಆಗಿದೆ' ಎಂದು ಇನ್ನೊಬ್ಬರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಸದ್ಯ ಸಿಐಡಿ ತನಿಖೆ ನಡೆಯುತ್ತಿರುವುದರಿಂದ ತಮ್ಮ ಹೆಸರು ಹೇಳಿಕೊಳ್ಳಲು ಹಿಂಜರಿಯುತ್ತಾರೆ.1998, 1999 ಮತ್ತು 2004ನೇ ಸಾಲಿನಲ್ಲಿ ಆಯೋಗ ನಡೆಸಿದ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಮತ್ತು ಬಿ ಹುದ್ದೆಗಳ ನೇಮಕಾತಿಯಲ್ಲಿ ಸಾಕಷ್ಟು ಅಕ್ರಮಗಳಾಗಿವೆ ಎಂಬ ದೂರು ಬಂದಾಗ, ತನಿಖೆ ನಡೆಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಸರ್ಕಾರ ತನಿಖೆಯನ್ನು ಸಿಐಡಿಗೆ ಒಪ್ಪಿಸಿತ್ತು. ಅದು ತನಿಖೆಯನ್ನು ಪೂರ್ಣಗೊಳಿಸಿ 2012 ಏಪ್ರಿಲ್ 9ರಂದು ಸರ್ಕಾರಕ್ಕೆ ವರದಿ ನೀಡಿತು.`ಆಯೋಗದ ಆಗಿನ ಅಧ್ಯಕ್ಷ ಡಾ.ಎಚ್.ಎನ್.ಕೃಷ್ಣ, ಸಿಬ್ಬಂದಿಗಳಾದ ಕೆ.ನರಸಿಂಹ, ಪಿ.ಗೋಪಿಕೃಷ್ಣ, ಎಂ.ಬಿ.ಬಣಕಾರ್ ಅವರು ನೇಮಕಾತಿಯಲ್ಲಿ ಅಕ್ರಮ ನಡೆಸಿದ್ದಾರೆ. ಇವರು ಶಿಕ್ಷೆಗೆ ಯೋಗ್ಯರು' ಎಂದು ಸಿಐಡಿ ವರದಿ ಮಾಡಿದೆ. ಉದ್ಯೋಗ ಪಡೆದ ಆಶಾ ಪರ್ವೀನ್, ಸಲ್ಮಾ ಫಿರ್ದೋಸ್ ಕೂಡ ತಪ್ಪಿತಸ್ಥರು ಎಂದು ಹೇಳಿದೆ. ಲಿಖಿತ ಪರೀಕ್ಷೆಯಲ್ಲಿ ಅಂಕಗಳ ಬದಲಾವಣೆ, ಸಂದರ್ಶನದಲ್ಲಿ ಸ್ವಜನ ಪಕ್ಷಪಾತ, ಮೀಸಲಾತಿ ತಿದ್ದುಪಡಿ ಮುಂತಾದ ಅಕ್ರಮಗಳು ನಡೆದಿರುವುದನ್ನು ಪತ್ತೆ ಮಾಡಿದೆ. 300ಕ್ಕೂ ಹೆಚ್ಚು ಮಂದಿ ಅಕ್ರಮವಾಗಿ ನೇಮಕಗೊಂಡಿದ್ದಾರೆ ಎಂಬ ಅಂಶವನ್ನು ವಿವರವಾಗಿ ತನ್ನ ವರದಿಯಲ್ಲಿ ಹೇಳಿದೆ.`ಪರೀಕ್ಷೆಯನ್ನೇ ಬರೆಯದ ಅಭ್ಯರ್ಥಿಗಳಿಗೆ ಕೆಲಸ ನೀಡಲಾಗಿದೆ. ಸಂದರ್ಶನಕ್ಕೆ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುವಾಗ ಮೀಸಲಾತಿಯನ್ನು ಬದಲಾಯಿಸಲಾಗಿದೆ. ಆಯೋಗದ ಇತರ ಸದಸ್ಯರ ಗಮನಕ್ಕೆ ತರದೆ ಸಿಬ್ಬಂದಿ ಸಹಾಯದಲ್ಲಿ ಆಗಿನ ಅಧ್ಯಕ್ಷರು ಮೀಸಲಾತಿಯನ್ನು ಬದಲಾಯಿಸಿ ಒಂದೇ ಜಾತಿಯವರಿಗೆ ಹೆಚ್ಚು ಉದ್ಯೋಗ ಸಿಗುವಂತೆ ಮಾಡಿದ್ದಾರೆ. ಜಾತಿ, ವರ್ಗ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯುವಾಗ ಮತ್ತು ತಿರಸ್ಕರಿಸುವಾಗ ಕೂಡ ಅಕ್ರಮ ನಡೆಸಲಾಗಿದೆ. ಪರಿಶಿಷ್ಟ ಜಾತಿಯ ಅಭ್ಯರ್ಥಿಗಳನ್ನೂ ಸಾಮಾನ್ಯ ವರ್ಗಕ್ಕೆ ಸೇರಿಸಲಾಗಿದೆ. ಲಿಖಿತ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದವರಿಗೆ ಸಂದರ್ಶನದಲ್ಲಿ ಹೆಚ್ಚು ಅಂಕ ನೀಡಲಾಗಿದೆ' ಎನ್ನುವುದನ್ನು ಸಿಐಡಿ ಪತ್ತೆ ಮಾಡಿದೆ.ಇದೇ ವರದಿಯನ್ನು ಹೈಕೋರ್ಟ್‌ಗೆ ಕೂಡ ನೀಡಲಾಗಿದೆ. ಸಿಐಡಿ ನೀಡಿದ ವರದಿಯ ಬಗ್ಗೆ ಯಾವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡುತ್ತಲೇ ಇದೆ. ಆದರೆ ಸರ್ಕಾರ ಇನ್ನೂ ಸ್ಪಷ್ಟ ಉತ್ತರವನ್ನು ನೀಡುತ್ತಿಲ್ಲ. ಈ ಪ್ರಕರಣದ ವಿಚಾರಣೆ ಮಂಗಳವಾರ ಕೂಡ ಹೈಕೋರ್ಟ್ ಮುಂದೆ ಬಂದಿತ್ತು. ಆಗಲೂ ಕೂಡ  ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸಿಲ್ಲ. ಇನ್ನೂ 15 ದಿನಗಳ ಕಾಲಾವಕಾಶ ಬೇಕು ಎಂದು ಹೇಳಿದೆ. ವಿಚಾರಣೆಯನ್ನು ಜುಲೈ 16ಕ್ಕೆ ಮುಂದೂಡಲಾಗಿದೆ.

`ಹುದ್ದೆಗಳನ್ನು ಮಾರಿದ ಭೀಮಪ್ಪ'

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಹಿಂದಿನ ಅಧ್ಯಕ್ಷ ಗೋನಾಳ ಭೀಮಪ್ಪ ಮತ್ತು ಅವರ ಅಧಿಕಾರಿಗಳು `ರಾಜ್ಯ ಸರ್ಕಾರದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳನ್ನು ಭಾರಿ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ' ಎಂದು ಸರ್ಕಾರ ಹೈಕೋರ್ಟ್‌ಗೆ ಬುಧವಾರ ಹೇಳಿಕೆ ಸಲ್ಲಿಸಿದೆ. ಇದೇ ವೇಳೆ, ಭೀಮಪ್ಪ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯಿಂದ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ ಅವರು ಹಿಂದಕ್ಕೆ ಸರಿದಿದ್ದಾರೆ. `ನಾನು ಹಿಂದೊಮ್ಮೆ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದೆ. ಹಾಗಾಗಿ ಈ ಅರ್ಜಿಯ ವಿಚಾರಣೆಯನ್ನು ನಾನು ನಡೆಸಲಾರೆ' ಎಂದು ಅವರು ಹೇಳಿದ್ದಾರೆ. ಭೀಮಪ್ಪ ಸಲ್ಲಿಸಿರುವ ಅರ್ಜಿ ಯಾರು ವಿಚಾರಣೆಗೆ ಎತ್ತಿಕೊಳ್ಳಬೇಕು ಎಂಬುದನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ನಿರ್ಧರಿಸಲಿದ್ದಾರೆ.`ಭೀಮಪ್ಪ ವಿರುದ್ಧ ಗಂಭೀರ ಆರೋಪಗಳಿವೆ. ಅವರು ನಿವೃತ್ತ ಐಎಎಸ್ ಅಧಿಕಾರಿ. ಅವರಿಗೆ ಜಾಮೀನು ನೀಡಿದರೆ, ಸಾಕ್ಷ್ಯಗಳನ್ನು ಶಪಡಿಸಲು ಯತ್ನಿಸುವ ಸಾಧ್ಯತೆಗಳು ಇದೆ' ಎಂದು ಸರ್ಕಾರದ ಪರವಾಗಿ ಎಸ್‌ಪಿಪಿ (ಸ್ಟೇಟ್ ಪಬ್ಲಿಕ್ ಪ್ರಾಸಿಕ್ಯೂಟರ್) ಎಸ್. ದೊರೆರಾಜು ಹೇಳಿಕೆ ಸಲ್ಲಿಸಿದ್ದಾರೆ.ನ್ಯಾ. ದಾಸ ಅವರು ವಿಚಾರಣೆಯಿಂದ ಹಿಂದಕ್ಕೆ ಸರಿದಿರುವ ಕಾರಣ, ಭೀಮಪ್ಪ ಪಡೆದಿರುವ ಮಧ್ಯಂತರ ನಿರೀಕ್ಷಣಾ ಜಾಮೀನು ಮುಂದುವರಿದಿದೆ. ಜೂನ್ 30ರಂದು ತಮ್ಮ ಪುತ್ರಿಯ ವಿವಾಹ ಎಂಬ ಕಾರಣ ನೀಡಿ ಭೀಮಪ್ಪ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry