ಭಾನುವಾರ, ಆಗಸ್ಟ್ 25, 2019
23 °C

ಭ್ರಷ್ಟತೆ ಎದುರು ಸೋತ ಸೈನಿಕರು

Published:
Updated:

ಬೆಂಗಳೂರು:  ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಬಹುತೇಕ ಎಲ್ಲ ನೇಮಕಾತಿಗಳಲ್ಲಿಯೂ ಮಾಜಿ ಸೈನಿಕರಿಗೆ ಮೀಸಲಾತಿ ಇದೆ. ದೇಶ ಕಾಯ್ದ ಸೈನಿಕರಿಗೆ ಗೌರವ ಕೊಡುವುದು ಹಾಗೂ ಸೇನೆಯಿಂದ ನಿವೃತ್ತರಾಗಿ ಬಂದ ನಂತರ ಅವರ ಬದುಕು ಸುಂದರವಾಗಿರಲಿ ಎಂಬ ಉದ್ದೇಶ ಈ ಮೀಸಲಾತಿಯ ಹಿಂದಿದೆ. ಆದರೆ ಇಲ್ಲಿಯೂ ಪ್ರತಿಭಾವಂತರಿಗೆ ಕೆಲಸ ಸಿಗುತ್ತದೆ ಎನ್ನುವ ಖಾತರಿ ಇಲ್ಲ.ಮಾಜಿ ಸೈನಿಕರೇ ಆದರೂ `ಹಣದ ವಹಿವಾಟು', `ತಾಳಿ ಭಾಗ್ಯ' ಯೋಜನೆಗಳಿಗೆ ಬದ್ಧರಾಗಿದ್ದರೆ ಮಾತ್ರ ಕೆಲಸ ಎನ್ನುವಂತಾಗಿದೆ. 2011ರ ನೇಮಕಾತಿಯಲ್ಲಿಯೂ ಇದರ ವಾಸನೆ ಗಾಢವಾಗಿಯೇ ಬೀರಿದೆ.`ಗಡಿಯಲ್ಲಿ ದೇಶದ ರಕ್ಷಣೆಯಲ್ಲಿ ತೊಡಗಿದ್ದ ನಾವು ಶಿಸ್ತಿಗೆ ಹೆಸರಾದವರು. ಪ್ರಾಮಾಣಿಕತೆ ಮೈಗೂಡಿಸಿಕೊಂಡವರು. ನಾವು ಯಾಕೆ ಹಣ ಕೊಟ್ಟು ಕೆಲಸವನ್ನು ಖರೀದಿ ಮಾಡಬೇಕು' ಎನ್ನುವುದು ಈ ಪರಿಕ್ಷೆಗೆ ಹಾಜರಾಗಿ ಆಯ್ಕೆಯಾಗುವಲ್ಲಿ ವಿಫಲರಾದ ಮಾಜಿ ಸೈನಿಕರೊಬ್ಬರ ಪ್ರಶ್ನೆ.2011ರಲ್ಲಿ ಮಾಜಿ ಸೈನಿಕರಿಗೆ 31 ಹುದ್ದೆಗಳನ್ನು ಮೀಸಲಾಗಿಡಲಾಗಿತ್ತು. ಅದರಲ್ಲಿ 21 ಹುದ್ದೆಗಳು ಸಾಮಾನ್ಯ ವರ್ಗದ ಮಾಜಿ ಸೈನಿಕರಿಗೆ ಹಾಗೂ ಉಳಿದ ಹುದ್ದೆಗಳು ಹಿಂದುಳಿದ ವರ್ಗ ಮತ್ತು ಪರಿಶಿಷ್ಟರಿಗೆ ಮೀಸಲಿದ್ದವು. ಸಾಮಾನ್ಯ ವರ್ಗದ ಮಾಜಿ ಸೈನಿಕರಿಗೆ 10 ಎ ದರ್ಜೆ ಹುದ್ದೆಗಳು ಹಾಗೂ 11 ಬಿ ದರ್ಜೆ ಹುದ್ದೆಗಳು, ಪರಿಶಿಷ್ಟ ಜಾತಿಯವರಿಗೆ ಒಂದು ಎ ದರ್ಜೆ ಹುದ್ದೆ, 3 ಬಿ ದರ್ಜೆ ಹುದ್ದೆಗಳು, ಸಿ-1 ವರ್ಗಕ್ಕೆ ಒಂದು ಬಿ ದರ್ಜೆ ಹುದ್ದೆ, 2ಎ ವರ್ಗಕ್ಕೆ 3 ಬಿ ದರ್ಜೆ ಹುದ್ದೆಗಳು, 2ಬಿ ವರ್ಗಕ್ಕೆ ಒಂದು ಬಿ ದರ್ಜೆ ಹುದ್ದೆ, 3ಎ ವರ್ಗಕ್ಕೆ ಒಂದು ಬಿ ದರ್ಜೆ ಹುದ್ದೆ ಮೀಸಲಿಡಲಾಗಿತ್ತು.ಇಲ್ಲೂ, ಮಾಜಿ ಸೈನಿಕರ ಮೀಸಲಾತಿಯಲ್ಲಿ ಎ ದರ್ಜೆ ಹುದ್ದೆಗಳಿಗೆ ಭಾರಿ  ಪ್ರಮಾಣದಲ್ಲಿ ಹಣದ ಕೈ ಬದಲಾವಣೆ ನಡೆದಿದೆ ಎಂದು ಮಾಜಿ ಸೈನಿಕ ಅಭ್ಯರ್ಥಿಗಳು ಆರೋಪಿಸುತ್ತಾರೆ. ಮುಖ್ಯ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿ ಕಡಿಮೆ ಅಂಕ ಕೊಡಲಾಗಿದೆ. ಉದ್ದೇಶಪೂರ್ವಕವಾಗಿಯೇ ಸಂದರ್ಶನದಲ್ಲಿ ಹೆಚ್ಚು ಅಂಕ ನೀಡಿ ತಮಗೆ ಬೇಕಾದವರನ್ನು ಎ ದರ್ಜೆ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ಅವರು ದಾಖಲೆ ಸಮೇತ ವರಿಸುತ್ತಾರೆ.ಮುಖ್ಯ ಪರೀಕ್ಷೆಯಲ್ಲಿ ಮಾಜಿ ಸೈನಿಕರ ವಿಭಾಗದಲ್ಲಿ ಮಂಜುನಾಥ ಹೆಗಡೆ ಅತಿ ಹೆಚ್ಚು ಅಂದರೆ 928 ಅಂಕ ಗಳಿಸಿದ್ದರು. ಅವರಿಗೆ ಸಂದರ್ಶನದಲ್ಲಿ ನೀಡಿದ್ದು ಕೇವಲ 50 ಅಂಕ. ಇದರಿಂದ ಅವರ ಒಟ್ಟು ಅಂಕ 978 ಆಯಿತು. ಅವರಿಗಿಂತ ಹದಿನಾರುವರೆ ಅಂಕ ಕಡಿಮೆ ಪಡೆದ ಅಭ್ಯರ್ಥಿಗೆ ಸಂದರ್ಶನದಲ್ಲಿ 80 ಅಂಕ ನೀಡಿದ್ದರಿಂದ ಅವರ ಒಟ್ಟಾರೆ ಅಂಕ 991.5 ಆಯಿತು.

 

`ಮುಖ್ಯ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದವರಿಗೆ ಸಂದರ್ಶನದಲ್ಲಿ ಅತ್ಯಂತ ಕಡಿಮೆ ಅಂಕ ಬಂತು. ಮುಖ್ಯ ಪರೀಕ್ಷೆಯಲ್ಲಿ ಅತಿ ಕಡಿಮೆ ಅಂಕ ಪಡೆದ 7 ಮಂದಿಗೆ ಗರಿಷ್ಠ 150 ಅಂಕ ನೀಡಲಾಗಿದೆ. ಇದು ಯಾವ ನ್ಯಾಯ' ಎಂದು ಅವರು ಪ್ರಶ್ನೆ ಮಾಡುತ್ತಾರೆ.ಇದೇ ಮೊದಲಲ್ಲ: ಮಾಜಿ ಸೈನಿಕರಿಗೆ ಹೀಗೆ ಅನ್ಯಾಯವಾಗುತ್ತಿರುವುದು ಇದೇ ಮೊದಲೇನಲ್ಲ. ಹಿಂದಿನ ಹಲವಾರು ನೇಮಕಾತಿ ಪ್ರಕ್ರಿಯೆಯಲ್ಲಿಯೂ ಇದೇ ರೀತಿಯ ಅನ್ಯಾಯ ನಡೆಯುತ್ತಲೇ ಬಂದಿದೆ ಎಂದು ಮಾಜಿ ಸೈನಿಕರೊಬ್ಬರು ಹೇಳುತ್ತಾರೆ. ತಾವು ಸಂದರ್ಶನಕ್ಕೆ ಹಾಜರಾದ ಅನುಭವವನ್ನು ಅವರು ಹಂಚಿಕೊಳ್ಳುತ್ತಾರೆ.`ಸಂದರ್ಶನದ ಕೊಠಡಿಗೆ ಹೋದಾಗ ಅಲ್ಲಿ ನಾಲ್ಕು ಮಂದಿ ಸಂದರ್ಶಕರ ಬದಲಾಗಿ ಇಬ್ಬರೇ ಕುಳಿತಿದ್ದರು. ಒಬ್ಬರು ನನ್ನ ಹೆಸರು ಕೇಳಿದರು. ಇನ್ನೊಬ್ಬರು ನಿಮಗೆ ಮುಖ್ಯ ಪರೀಕ್ಷೆಯಲ್ಲಿ ಎಷ್ಟು ಅಂಕ ಬಂದಿದೆ ಎಂದು ಕೇಳಿದರು. ಇಷ್ಟಕ್ಕೇ ನನ್ನ ಸಂದರ್ಶನ ಮುಗಿದೇ ಹೋಯ್ತು. ಸಂದರ್ಶನ ಮುಗಿಯುವ ವೇಳೆಗೆ ಇನ್ನೊಬ್ಬರು ಸಂದರ್ಶಕರು ಬಂದು ಕುಳಿತುಕೊಂಡರು. ಅವರು ಯಾವುದೇ ಪ್ರಶ್ನೆ ಕೇಳಲಿಲ್ಲ' ಎಂದು ಅವರು ವಿವರಿಸಿದರು.2006ರಿಂದ ಸತತವಾಗಿ ನಾಲ್ಕು ಬಾರಿ ಮಾಜಿ ಸೈನಿಕರ ಕೋಟಾದಲ್ಲಿಯೇ ಕೆಎಎಸ್ ಪರೀಕ್ಷೆ ಎದುರಿಸುತ್ತಿರುವ ಅಭ್ಯರ್ಥಿಯೊಬ್ಬರು ತಮ್ಮ ಅನುಭವವನ್ನು ಹೀಗೆ ಹಂಚಿಕೊಳ್ಳುತ್ತಾರೆ. `2006ರಲ್ಲಿ ಮುಖ್ಯ ಪರೀಕ್ಷೆಯಲ್ಲಿ 852 ಅಂಕ ಬಂದಿತ್ತು.ಆಗಲೂ ನಾನು ನಮ್ಮ ವಿಭಾಗದಲ್ಲಿ ಮೂರನೇ ಅತಿ ಹೆಚ್ಚು ಅಂಕ ಪಡೆದವನಾಗಿದ್ದೆ. ನನಗೆ ಸಂದರ್ಶನದಲ್ಲಿ 52 ಅಂಕ ನೀಡಲಾಯಿತು. 2008ರಲ್ಲಿ ಮುಖ್ಯ ಪರೀಕ್ಷೆಯಲ್ಲಿ 858 ಅಂಕ ಬಂದಿತ್ತು. ಸಂದರ್ಶನದಲ್ಲಿ ಸಿಕ್ಕಿದ್ದು 60 ಅಂಕ. 2010ರಲ್ಲಿ ಮುಖ್ಯ ಪರೀಕ್ಷೆಯಲ್ಲಿ 878.5 ಅಂಕ ಬಂದಿತ್ತು. ಸಂದರ್ಶನದಲ್ಲಿ ಸಿಕ್ಕಿದ್ದು ಕೇವಲ 50 ಅಂಕ. ಹೀಗೆ ಕಳೆದ ನಾಲ್ಕು ಪರೀಕ್ಷೆಗಳಲ್ಲಿಯೂ ನನಗೆ ಸಂದರ್ಶನದಲ್ಲಿ ಸಿಕ್ಕ ಅಂಕ 60ಕ್ಕಿಂತ ಜಾಸ್ತಿ ಆಗಲೇ ಇಲ್ಲ. ಉಪ ವಿಭಾಗಾಧಿಕಾರಿಯಾಗುವ ನನ್ನ ಕನಸು ನನಸಾಗಲೂ ಇಲ್ಲ' ಎಂದು ಅವರು ನೋವು ತೋಡಿಕೊಳ್ಳುತ್ತಾರೆ.`ದೇಶ ಕಾಯುವ ಕೆಲಸದಲ್ಲಿ ವೈರಿಗಳ ಬಂದೂಕಿಗೆ ನಾವು ಬೆದರಲಿಲ್ಲ. ಎದೆ ಸೆಟೆದುಕೊಂಡು ನಿಂತು ಹೋರಾಡಿದೆವು. ಆದರೆ ಇಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ನಮ್ಮಲ್ಲಿ ಉತ್ತರವೇ ಇಲ್ಲ' ಎಂದಾಗ ಅವರ ಕಣ್ಣುಗಳಲ್ಲಿ ನೀರು ತುಂಬಿ ಬಂದಿತ್ತು.Post Comments (+)