ಬುಧವಾರ, ನವೆಂಬರ್ 20, 2019
27 °C

ಭ್ರಷ್ಟರಿಗೆ ಕುರ್ಚಿ ಇಲ್ಲ: ರಾಜನಾಥ್

Published:
Updated:

ಬೆಂಗಳೂರು: `ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಪಕ್ಷ ಬದ್ಧವಾಗಿದ್ದು, ಅಂತಹ ಆರೋಪಕ್ಕೆ ಒಳಗಾಗುವ ವ್ಯಕ್ತಿ ಎಷ್ಟೇ ಎತ್ತರದಲ್ಲಿದ್ದರೂ ಕುರ್ಚಿಯಿಂದ ಕೆಳಗೆ ಇಳಿಸಲಾಗುವುದು' ಎಂದು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ರಾಜನಾಥ್ ಸಿಂಗ್ ಭರವಸೆ ನೀಡಿದರು.ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ನಗರದಲ್ಲಿ ಏರ್ಪಡಿಸಿದ್ದ `ಬಿಜೆಪಿ ವಿಜಯ ಸಂಕಲ್ಪ' ಸಮಾವೇಶದಲ್ಲಿ ನವದೆಹಲಿಯಿಂದ ಟೆಲಿ ಕಾನ್ಫರೆನ್ಸ್ ಮೂಲಕ ಅವರು ಮಾತನಾಡಿದರು. ಸಭಾಂಗಣದಲ್ಲಿ ಹಾಕಿದ್ದ ಬೃಹತ್ ಪರದೆಗಳ ಮೂಲಕ ಅವರ ಭಾಷಣವನ್ನು ಬಿತ್ತರಿಸಲಾಯಿತು.`ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಪ್ರಥಮಾರ್ಧದಲ್ಲಿ ಕೆಲವು ಗೊಂದಲಗಳು ಉಂಟಾಗಿದ್ದು ನಿಜ. ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾದಾಗ ಅಧಿಕಾರ ಬಿಡಲು ಅವರು ಸಮ್ಮತಿಸಲಿಲ್ಲ. ಆದರೆ, ಭ್ರಷ್ಟಾಚಾರದ ಆರೋಪ ಕೇಳಿಬಂದಾಗ ಕುರ್ಚಿಯಿಂದ ಇಳಿಯಬೇಕು ಎನ್ನುವುದು ಪಕ್ಷದ ಸಿದ್ಧಾಂತವಾಗಿದ್ದು, ಅದರಂತೆ ಪಕ್ಷ ನಡೆದುಕೊಂಡಿತು' ಎಂದು ಅವರು ಹೇಳಿದರು.ವಿಶೇಷ ವಿಮಾನದಲ್ಲಿ ತಾಂತ್ರಿಕ ದೋಷ

ಬೆಂಗಳೂರು:
ನವದೆಹಲಿಯಿಂದ ಹೊರಟ ವಿಶೇಷ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಳ್ಳಲು ಆ ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಸಾಧ್ಯವಾಗಲಿಲ್ಲ.`ಬೆಳಿಗ್ಗೆ ನವದೆಹಲಿಯಿಂದ ಹೊರಟ ಕೆಲವೇ ಕ್ಷಣಗಳಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ತಕ್ಷಣ ಭೂಸ್ಪರ್ಶ ಮಾಡುವುದು ಅಗತ್ಯವಾಗಿದ್ದರಿಂದ ನವದೆಹಲಿ ನಿಲ್ದಾಣದಲ್ಲೇ `ಲ್ಯಾಂಡ್' ಮಾಡಲಾಯಿತು. ಇನ್ನೊಂದು ವಿಶೇಷ ವಿಮಾನದ ಮೂಲಕ ಬರುವ ಪ್ರಯತ್ನ ಕೈಗೂಡಲಿಲ್ಲ' ಎಂದು ಸಮಾವೇಶದಲ್ಲಿ ಪ್ರಹ್ಲಾದ ಜೋಶಿ ತಿಳಿಸಿದರು.ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಸಹ ವಿಮಾನದಲ್ಲಿ ಇದ್ದರು ಎಂದು ಹೇಳಿದರು. ಬೆಂಗಳೂರಿಗೆ ಬರುವ ಯತ್ನ ಫಲಿಸದ ಕಾರಣ ರಾಜನಾಥ್ ಸಿಂಗ್ ನವದೆಹಲಿಯಿಂದ ಟೆಲಿ ಕಾನ್ಫರೆನ್ಸ್ ಮೂಲಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಕ್ರಿಯಿಸಿ (+)