ಮಂಗಳವಾರ, ಮೇ 11, 2021
27 °C

ಭ್ರಷ್ಟರಿಗೆ ಬೇಗ ಶಿಕ್ಷೆ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ಪ್ರಕರಣಗಳನ್ನು ಮೂರು ತಿಂಗಳಲ್ಲಿ ವಿಚಾರಣೆ ಮಾಡಿ ಕಾನೂನು ಕ್ರಮಗಳನ್ನು ಜರುಗಿಸುವ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಇನ್ನಷ್ಟು ಪಾರದರ್ಶಕತೆ ತರುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಕೈಹಾಕಿದೆ. ಅಣ್ಣಾ ಹಜಾರೆ ಅವರು ಆರಂಭಿಸಿದ್ದ ಅಂದೋಲನ ಯಶಸ್ವಿಯಾದ ನಂತರದ ಬೆಳವಣಿಗೆ ಇದು.ಅಧಿಕಾರಿಗಳ ಮಟ್ಟದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಚಿವ ಪ್ರಣಬ್‌ಮುಖರ್ಜಿ ಅವರ ಅಧ್ಯಕ್ಷತೆಯಲ್ಲಿನ ಕೆಲವು ಸಚಿವರ ಸಮಿತಿಯ ಶಿಫಾರಸುಗಳನ್ನು ಗಮನದಲ್ಲಿ ಇಟ್ಟುಕೊಂಡು ಅಧಿಕಾರಿಗಳ ಭ್ರಷ್ಟಾಚಾರದ ಪ್ರಕರಣಗಳನ್ನು ತ್ವರಿತ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ನಿರ್ಧರಿಸಿದೆ.ಈ ನಿರ್ಧಾರದಿಂದ ದೂರು ಕೇಳಿ ಬಂದ ಅಧಿಕಾರಿಯ ವಿರುದ್ಧ ಮೂರು ತಿಂಗಳಲ್ಲಿ ಸಂಬಂಧ ಪಟ್ಟವರು ತನಿಖೆಗೆ ಅದೇಶ ಹೊರಡಿಸಬೇಕು, ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಂಬಂಧಿಸಿದ ಸಚಿವರು ಅನುಮತಿ ಕೊಡಬೇಕು. ಅನುಮತಿ ನೀಡಲು ವಿಳಂಬವಾದರೆ ಅದರ ವಿರುದ್ಧ ಪ್ರಧಾನಿ ಅವರಿಗೆ ಮನವಿ ಸಲ್ಲಿಸಿ ಅನುಮತಿ ಪಡೆಯಲು ಅವಕಾಶ ಕಲ್ಪಿಸುವುದು.ಅನುಮತಿ ಪಡೆಯುವ ಹೊಣೆಯನ್ನು ಆಯಾ ಇಲಾಖೆಗಳ ಕಾರ್ಯದರ್ಶಿಗೆ ವಹಿಸಲು ಸರ್ಕಾರ ಉದ್ದೇಶಿಸಿದೆ. ಆರೋಪ ಸಾಬೀತಾದ ಅಧಿಕಾರಿಯನ್ನು ಕಡ್ಡಾಯ ನಿವೃತ್ತಿಗೊಳಿಸುವ ಈಗಿನ ಕ್ರಮದ ಬದಲು ನಿವೃತ್ತಿಯ ಜತೆಗೆ ಪಿಂಚಣಿಯಲ್ಲಿ ಶೇ 20 ರಷ್ಟನ್ನು ಕಡಿತಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಎಲ್ಲ ಕ್ರಮಗಳೂ ಸ್ವಾಗತಾರ್ಹ.ಎಷ್ಟೇ ಕಠಿಣ ನಿಯಮಗಳನ್ನು ಜಾರಿಗೆ ತಂದರೂ ಭ್ರಷ್ಟರು ಅವುಗಳಿಂದ ತಪ್ಪಿಸಿಕೊಳ್ಳುತ್ತಾರೆ. ಅನೇಕ ರಾಜಕಾರಣಿಗಳು ಭ್ರಷ್ಟ ಅಧಿಕಾರಿಗಳಿಗೆ ಕುಮ್ಮಕ್ಕು ಕೊಡುತ್ತಾರೆ. ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನೆರವಾಗುತ್ತಾರೆ. ಹೊಸ ಕಾನೂನು ಅಥವಾ ನಿಯಮಗಳನ್ನು ರೂಪಿಸಿದ ಮಾತ್ರಕ್ಕೆ ಭ್ರಷ್ಟಾಚಾರ ಕಡಿಮೆ ಆಗುವುದಿಲ್ಲ. ಕೆಲವೇ ರಾಜ್ಯಗಳಲ್ಲಿ ಲೋಕಾಯುಕ್ತ ವ್ಯವಸ್ಥೆ ಜಾರಿಯಲ್ಲಿದೆ.ಕರ್ನಾಟಕದಲ್ಲಿ ಲೋಕಾಯುಕ್ತರು ಕಳೆದ ಐದಾರು ವರ್ಷಗಳಲ್ಲಿ ಅನೇಕ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಭಾರಿ ಪ್ರಮಾಣದ ಅಕ್ರಮ ಸಂಪತ್ತನ್ನು ವಶಪಡಿಸಿಕೊಂಡು ಅವರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ್ದರೂ ಈವರೆಗೆ ಯಾರೊಬ್ಬರಿಗೂ ಶಿಕ್ಷೆ ಆಗಿಲ್ಲ. ಬದಲಾಗಿ ಭ್ರಷ್ಟರಿಗೆ ಬಡ್ತಿ ನೀಡಿದ ಉದಾಹರಣೆಗಳಿವೆ.ಭ್ರಷ್ಟರ ವಿರುದ್ಧ ನಡೆದ ಇಲಾಖಾ ಮಟ್ಟದ ತನಿಖಾ ಶಿಫಾರಸುಗಳನ್ನು ಜಾರಿಗೊಳಿಸದ ಉದಾಹರಣೆಗಳಿವೆ. ಇಂಥ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರದ ನಿರ್ಮೂಲನದಲ್ಲಿ ರಾಜಕೀಯ ಬದ್ಧತೆ ಬೇಕಾಗುತ್ತದೆ. ಅಧಿಕಾರಿಗಳು ಅಕ್ರಮ ಮಾರ್ಗದಿಂದ ಗಳಿಸಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂಥ ಕ್ರಮವನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಈಗಾಗಲೇ ಆರಂಭಿಸಿದ್ದಾರೆ.ಕೇಂದ್ರ ಸರ್ಕಾರದ ಉದ್ದೇಶಿತ ತ್ವರಿತ ವಿಲೇವಾರಿ ನ್ಯಾಯಾಲಯಗಳ ರಚನೆ ಭ್ರಷ್ಟರ ವಿರುದ್ಧ ಬೇಗ ಕ್ರಮ ಕೈಗೊಳ್ಳುವುದಕ್ಕೆ ಒತ್ತಾಸೆ ನೀಡುತ್ತದೆ. ನ್ಯಾಯಾಲಯಗಳ ತೀರ್ಪು ಜಾರಿಗೆ ತರುವುದಲ್ಲದೆ, ಅಕ್ರಮ ಆಸ್ತಿಯನ್ನು ವಶಪಡಿಸಿಕೊಳ್ಳುವ ಬದ್ಧತೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರದರ್ಶಿಸಬೇಕು. ಆಗ ಮಾತ್ರ ಅಧಿಕಾರಿ ವರ್ಗದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಬಂದೀತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.