ಭಾನುವಾರ, ಆಗಸ್ಟ್ 1, 2021
27 °C

ಭ್ರಷ್ಟರ ಕೈಯಲ್ಲಿ ದೇಶ: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಇದ್ದ ಒಗ್ಗಟ್ಟು ಈಗ ನಮ್ಮಲ್ಲಿ ಇಲ್ಲ. ದೇಶವನ್ನು ಭ್ರಷ್ಟರ ಕೈಯಲ್ಲಿಟ್ಟು ಸುಮ್ಮನೆ ಕುಳಿತಿದ್ದೇವೆ. ಅವರನ್ನು ಪ್ರಶ್ನಿಸುವ ಗೋಜಿಗೂ ಹೋಗುತ್ತಿಲ್ಲ ಎಂದು ಜನಸಂಘದ ಹಿರಿಯ ನಾಯಕ ಬಿ. ಜಯಾಚಾರ್ಯ ವಿಷಾದ ವ್ಯಕ್ತಪಡಿಸಿದರು.ಜನಸಂಘದಲ್ಲಿ ತೊಡಗಿ, ದೇಶಕ್ಕಾಗಿ ಸೆರೆವಾಸ ಅನುಭವಿಸಿದ ಹಿರಿಯರಿಗೆ ಆಯಾ ಜಿಲ್ಲಾ ಕೇಂದ್ರದಲ್ಲಿ ಸನ್ಮಾನಿಸುವಂತೆ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾನಿಯವರ ಆದೇಶದ ಹಿನ್ನೆಲೆಯಲ್ಲಿ ಇಲ್ಲಿಯ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಜನಸಂಘದ ಹಿರಿಯ ಕಾರ್ಯಕರ್ತರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಂದು ದೇಶದ ಸ್ವಾತಂತ್ರ್ಯದ ಗುರಿ ಇತ್ತು. ಎಲ್ಲರೂ ಒಟ್ಟಾಗಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವ ಸಂಕಲ್ಪ ಮಾಡಲಾಗಿತ್ತು. ಆದರೆ ಈಗ ಅದೆಲ್ಲವೂ ಮಾಯವಾಗಿದೆ. ನಮ್ಮಲ್ಲಿಯೇ ಒಗ್ಗಟ್ಟು ಎಂಬುದು ಉಳಿದಿಲ್ಲ. ಇದರಿಂದಾಗಿ ದೇಶಕ್ಕಾಗಿ ಕೆಲಸ ಮಾಡುವ ಮನಸ್ಸುಗಳೂ ಕಡಿಮೆ ಆಗುತ್ತಿವೆ ಎಂದ ಅವರು, ಭಾವುರಾವ ದೇಶಪಾಂಡೆ, ಜಗನ್ನಾಥರಾವ ಜೋಶಿ ಅವರೊಂದಿಗೆ ತೀರ ಹತ್ತಿರದಿಂದ ಕೆಲಸ ಮಾಡಿದ್ದು, ಒಪ್ಪಿತ್ತಿನ ಊಟವೂ ಮಾಡದೇ ದೇಶವನ್ನು ಸುತ್ತಿದ ಅಂತಹ ಧೀಮಂತರು ಇಂದು ನಮ್ಮೊಂದಿಗಿಲ್ಲ ಎಂದು ಭಾವುಕರಾಗಿ ಹೇಳಿದರು.ಭಾರತಾಂಬೆಯ ಸೇವೆ ಮಾಡಲು ಬಯಸುವ ಪ್ರತಿಯೊಬ್ಬ ದೇಶ ಭಕ್ತನಿಗೂ ಬಿಜೆಪಿಯಲ್ಲಿ ಮುಕ್ತ ಅವಕಾಶವಿದೆ. ಈ ಮಣ್ಣಿನಲ್ಲಿ ಜನಿಸಿ, ದೇಶಕ್ಕೆ ಕೊಡುಗೆ ನೀಡಲು ಮುಂದೆ ಬರುವಂತೆ ಯುವಕರಿಗೆ ಸಲಹೆ ಮಾಡಿದರು.ಪಕ್ಷದ ಜಿಲ್ಲಾ ಉಸ್ತುವಾರಿ, ವಿಧಾನ ಪರಿಷತ್ ಸದಸ್ಯ ಎನ್. ಶಂಕ್ರಪ್ಪ ಮಾತನಾಡಿ, ಜನಸಂಘದ ಕಾರ್ಯಕರ್ತರನ್ನು ಸನ್ಮಾನಿಸಿದ್ದು, ನಮ್ಮನ್ನು ನಾವು ಗೌರವಿಸಿದಂತೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮನೆ, ಕುಟುಂಬಗಳನ್ನು ಲೆಕ್ಕಿಸದೇ ಅನೇಕ ಜನರು ತ್ಯಾಗ, ಬಲಿದಾನ ಮಾಡಿದ್ದಾರೆ. ಅಧಿಕಾರದ ಆಸೆ ಇಲ್ಲದೇ ದೇಶಕ್ಕಾಗಿ ಹೋರಾಡಿದ ಇಂತಹ ಧೀಮಂತರನ್ನು ಗೌರವಿಸುವುದರಲ್ಲಿ ಅರ್ಥವಿದೆ ಎಂದು ಹೇಳಿದರು.ಜನಸಂಘದ ಡಾ. ದಲಭಂಜನ್, ಲಕ್ಷ್ಮಿಕಾಂತರಾವ ಕುಲಕರ್ಣಿ ಪಡಕಿ, ಚಂದನಕರ್, ಜಿ.ಬಿ. ಕೋರಿ, ಮಲ್ಲೇಶಪ್ಪ ಬೇಲಿ, ಭೋಜಪ್ಪ ಮಗ್ಗ, ಮಲ್ಲಪ್ಪ ಮುಂಡರಗಿ ಅವರನ್ನು ಸನ್ಮಾನಿಸಲಾಯಿತು.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ವೀರಬಸವಂತರೆಡ್ಡಿ ಮುದ್ನಾಳ ಅಧ್ಯಕ್ಷತೆ ವಹಿಸಿದ್ದರು. ಅಯ್ಯಣ್ಣ ಹುಂಡೇಕಾರ, ವೀರಣ್ಣ ಮಲ್ಲಾಬಾದಿ, ದೇವಿಂದ್ರನಾಥ ನಾದ್, ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಖಂಡ್ರೆ, ಮಾಜಿ ಸದಸ್ಯ ಖಂಡೆಪ್ಪ ದಾಸನ್, ರಾಜುಗೌಡ ಪಾಟೀಲ ಉಕ್ಕಿನಾಳ, ವೆಂಕಟರಾಮರೆಡ್ಡಿ ವಡವಟ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶ್ರೀದೇವಿ, ಸಿದ್ದು ಯಲಗೋಡ, ನಾಗರಾಜ ಬೀರನೂರ, ಸಿದ್ರಾಮರೆಡ್ಡಿ ಖಂಡ್ರೆ, ಶಿವಪುತ್ರಪ್ಪ ಪಾಟೀಲ, ಮಲ್ಲಿನಾಥ ಸುಂಗಲಕರ್ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.ನೀಲಕಂಠರಾಯ ಯಲ್ಹೇರಿ ನಿರೂಪಿಸಿದರು. ಶರಣಗೌಡ ಬಾಡಿಯಾಳ ಸ್ವಾಗತಿಸಿದರು. ಸಿದ್ಧಾರೆಡ್ಡಿ ಬಲಕಲ್ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.