ಭ್ರಷ್ಟರ ರಕ್ಷಣೆಗಾಗಿ ಕ್ರಮ ವಿಳಂಬ

7

ಭ್ರಷ್ಟರ ರಕ್ಷಣೆಗಾಗಿ ಕ್ರಮ ವಿಳಂಬ

Published:
Updated:

ಬೆಂಗಳೂರು: `ಭ್ರಷ್ಟರನ್ನು ರಕ್ಷಿಸುವ ದೃಷ್ಟಿಯಿಂದಲೇ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಲೋಕಾಯುಕ್ತ ವರದಿ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರ ವಿಳಂಬ ಮಾಡುತ್ತಿದೆ~ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ವಿಧಾನ ಸಭೆಯಲ್ಲಿ ಆರೋಪಿಸಿದರು. ನಿಲುವಳಿ ಸೂಚನೆ ಮೇಲಿನ ಪೂರ್ವಭಾವಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಜುಲೈ 27ರಂದು ಲೋಕಾಯುಕ್ತರು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ನಿಯಮಾವಳಿ ಪ್ರಕಾರ ವರದಿ ನೀಡಿದ ಮೂರು ತಿಂಗಳಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು. ಆದರೆ ಆರು ತಿಂಗಳಾದರೂ ಕ್ರಮಕೈಗೊಂಡಿಲ್ಲ ಎಂದು ಟೀಕಿಸಿದರು.2008ರ ಡಿಸೆಂಬರ್ 18ರಂದು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಮಧ್ಯಂತರ ವರದಿ ನೀಡಲಾಗಿತ್ತು. ಅದಾದ ನಂತರವೇ ಅಕ್ರಮ ಗಣಿಗಾರಿಕೆ ಮತ್ತು ರಫ್ತು ಪ್ರಮಾಣ ಜಾಸ್ತಿಯಾಗಿದೆ ಎಂದು ಲೋಕಾಯುಕ್ತರು ಅಂತಿಮ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ. ಮಧ್ಯಂತರ ವರದಿ ಆಧರಿಸಿ ಕ್ರಮಕೈಗೊಂಡಿದ್ದರೆ ಇದನ್ನು ತಪ್ಪಿಸಬಹುದಾಗಿತ್ತು ಎಂಬುದು ಇದರ ಅರ್ಥ ಎಂದರು.ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ 16,085 ಕೋಟಿ ರೂಪಾಯಿ ನಷ್ಟವಾಗಿದೆ. ಇದನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಬೇಕು ಎಂದು ಲೋಕಾಯುಕ್ತರು ಶಿಫಾರಸು ಮಾಡಿದ್ದಾರೆ. ಆದರೆ ಇದುವರೆಗೆ ಯಾರಿಂದಲೂ ನಷ್ಟವನ್ನು ವಸೂಲಿ ಮಾಡಿಲ್ಲ. ಈ ವಿಷಯದಲ್ಲಿ ಸರ್ಕಾರಕ್ಕೆ ಆಸಕ್ತಿ ಇಲ್ಲ. ನೂತನ ಲೋಕಾಯುಕ್ತರ ನೇಮಕಕ್ಕೂ ಆಸಕ್ತಿ ಇಲ್ಲ ಎಂದು ಟೀಕಿಸಿದರು.ವಿರೋಧ ಪಕ್ಷದ ಉಪ ನಾಯಕ ಟಿ.ಬಿ.ಜಯಚಂದ್ರ ಮಾತನಾಡಿ, ಖಾಸಗಿ ದೂರಿನ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೈಲಿಗೆ ಹೋಗಿದ್ದರು. ಆದರೆ ಇಷ್ಟೊಂದು ಅವ್ಯವಹಾರ ಆಗಿದ್ದರೂ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.ಈ ವಿಷಯ ನಿಲುವಳಿ ಸೂಚನೆಯಡಿ ಬರುವುದಿಲ್ಲ. ಬೇಕಾದರೆ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡುವಾಗ ಪ್ರಸ್ತಾಪ ಮಾಡಲಿ, ನಿಲುವಳಿ ಸೂಚನೆಗೆ ಅವಕಾಶ ನೀಡಬೇಡಿ ಎಂದು ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದರು.ಈ ಬಗ್ಗೆ ರೂಲಿಂಗ್ ನೀಡಿದ ಸ್ಪೀಕರ್ ಕೆ.ಜಿ.ಬೋಪಯ್ಯ, `ಈ ವಿಷಯ ಇತ್ತೀಚಿನದಲ್ಲ, ಹೀಗಾಗಿ ನಿಲುವಳಿ ಸೂಚನೆಯಡಿ ಬರುವುದಿಲ್ಲ. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಸಂದರ್ಭದಲ್ಲಿ ಪ್ರಸ್ತಾಪಿಸಿ ಅಥವಾ ಬೇರೆ ರೂಪದಲ್ಲಿ ತನ್ನಿ~ ಎಂಬುದಾಗಿ ಹೇಳಿದರು.ಇದರಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ, ಕಳೆದ ಅಧಿವೇಶನದಲ್ಲಿ ನಿಲುವಳಿ ಸೂಚನೆಯಡಿ ತೆಗೆದುಕೊಳ್ಳುವಂತೆ ಪ್ರಸ್ತಾಪಿಸಿದಾಗ, ನಿಯಮ 69ರ ಅಡಿ ಚರ್ಚೆಗೆ ಅವಕಾಶ ನೀಡಲಾಗಿತ್ತು. ಆದರೆ ಕೋರಂ ಇಲ್ಲದ ಕಾರಣ ಸದನವನ್ನು ಮುಂದೂಡಲಾಯಿತು. ನಿಲುವಳಿ ಸೂಚನೆಯಡಿ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ 69ರ ಅಡಿ ಚರ್ಚಿಸಲು ಅವಕಾಶ ನೀಡಬೇಕು ಎಂದು ಪಟ್ಟುಹಿಡಿದರು. ಕೊನೆಗೆ ಬೋಪಯ್ಯ ಅವರು 69ರ ಅಡಿ ಚರ್ಚೆಗೆ ಸಮ್ಮತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry