ಭ್ರಷ್ಟರ ವಿರದ್ಧವೂ ಶರಣರ ಹೋರಾಟ

7

ಭ್ರಷ್ಟರ ವಿರದ್ಧವೂ ಶರಣರ ಹೋರಾಟ

Published:
Updated:

ಔರಾದ್: ಬಸವಾದಿ ಶರಣರು ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯ ಜತೆಗೆ ಭ್ರಷ್ಟಾಚಾರದ ವಿರುದ್ಧವೂ ಹೋರಾಟ ನಡೆಸಿದರು ಎಂದು ಹಿರಿಯ ಬಸವತತ್ವ ಅನುಯಾಯಿ ಡಾ. ಅಮರನಾಥ ಸೋಲಪುರೆ ಹೇಳಿದರು. ಭಾಲ್ಕಿ ಹಿರೇಮಠ ಸಂಸ್ಥಾನ ಮತ್ತು ಮಹಾರಾಷ್ಟ್ರ ಬಸವ ಪರಿಷತ್ ಜಂಟಿ ಆಶ್ರಯದಲ್ಲಿ ಇಲ್ಲಿಗೆ ಸಮೀಪದ ದೇಗಲೂರನಲ್ಲಿ ಭಾನುವಾರ ನಡೆದ ತಾಲ್ಲೂಕು ಮಟ್ಟದ ಪ್ರಥಮ ಬಸವತತ್ವ ಸಮ್ಮೇಳನದಲ್ಲಿ ಅವರು ಉಪನ್ಯಾಸ ನೀಡಿದರು.ಶರಣರ ಅನೇಕ ವಚನಗಳಲ್ಲಿ ಭ್ರಷ್ಟಾಚಾರ ವಿರುದ್ಧ ಧ್ವನಿ ಎತ್ತಿರುವ ವಿಷಯಗಳು ಅಡಗಿವೆ. ‘ಭಂಡಾರ ತುಂಬಿದ ಬಳಿಕ ಸುಂಕ ತುಂಬದೇ ಇರಬಾರದು’ ಎಂಬ ವಚನ ಈಗಲೂ ಅನ್ವಯವಾಗುತ್ತದೆ. ಆದರೆ ಇಂದು ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಕಳ್ಳ ದಂಧೆ ಈ ತತ್ವಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿದರು.ಭೀಮರಾವ ಪಾಟೀಲ ಸಮ್ಮೇಳನ ಉದ್ಘಾಟಿಸಿ, ಮಹಾರಾಷ್ಟ್ರದಲ್ಲಿ ಬಸವತತ್ವದ ಬಗ್ಗೆ ಇನ್ನು ಸಾಕಷ್ಟು ಪ್ರಚಾರವಾಗಬೇಕು ಎಂದರು. ದೇಗಲೂರ ಶಾಸಕ ರಾವಸಾಹೇಬ ಅಂತಾಪುರಕರ್ ಅಧ್ಯಕ್ಷತೆ ವಹಿಸಿದರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಮಷ್ಣಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿ, ಬಸವತತ್ವ ದೇಶ ವಿದೇಶಗಳಲ್ಲಿ ಪಸರಿಸಬೇಕು. ಈ ನಿಟ್ಟಿನಲ್ಲಿ ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು.ಅಲ್ಲಮಗಿರಿಯ ಬಸವಲಿಂಗ ಸ್ವಾಮೀಜಿ, ಡಾ. ನಾಗೂರಾವ ಮಾತನಾಡಿದರು. ನಂದಾತಾಯಿ, ಉದಯ ಪಾಟೀಲ, ಶಂಕರರಾವ, ನಗರಸಭೆ ಮುಖ್ಯಾಧಿಕಾರಿ ವೆಂಕಟೇಶ, ಶಿವರಾಜಪ್ಪ ಎಕಲಾರ ಮತ್ತಿತರರು ಉಪಸ್ಥಿತರಿದ್ದರು.ಮೆರವಣಿಗೆ: ಸಮಾರಂಭಕ್ಕೂ ಮುನ್ನ ದೇಗಲೂರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಒಂಟೆ ಮೇಲೆ ವಚನ ಸಾಹಿತ್ಯ ಮತ್ತು ಬಸವೇಶ್ವರ ಭಾವಚಿತ್ರದ ಮೆರವಣಿಗೆ ನಡೆಯಿತು. ಎತ್ತಿನ ಬಂಡಿಗಳ ಮೇಲೆ ಶರಣರ ಭಾವಚಿತ್ರ ಇಟ್ಟು ಮೆರವಣಿಗೆ ಮಾಡಲಾಯಿತು. ಬಸವಣ್ಣ, ಅಕ್ಕಮಹಾದೇವಿ ವೇಶಧಾರಿ ವಿದ್ಯಾರ್ಥಿಗಳು ಮತ್ತು ಕೋಲಾಟ, ಲೇಜಿಮ್ ಮೆರವಣಿಗೆಗೆ ವಿಶೇಷ ಕಳೆ ತಂದುಕೊಟ್ಟಿತು. ಭಾಲ್ಕಿ ಮಠದ ಆಶ್ರಯದಲ್ಲಿ ನಡೆಯುತ್ತಿರುವ ವಿವಿಧ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಔರಾದ್ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಸಮ್ಮೇಳನದಲ್ಲಿ ಪಾಲ್ಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry