ಭ್ರಷ್ಟಾಚಾರ:ಕೇಜ್ರಿವಾಲ ಹಾದಿ ಎತ್ತ?

7

ಭ್ರಷ್ಟಾಚಾರ:ಕೇಜ್ರಿವಾಲ ಹಾದಿ ಎತ್ತ?

Published:
Updated:

ಕೇಜ್ರಿವಾಲ ಹುಯಿಲೆಬ್ಬಿಸಿರುವ ಮೂರು ತಾಜಾ ಪ್ರಕರಣಗಳಲ್ಲಿ:* ಒಂದು: ವಾಣಿಜ್ಯ ಉದ್ದೇಶದ ರಿಯಲ್ ಎಸ್ಟೇಟ್ ಅಭಿವೃದ್ಧಿ ಕ್ಷೇತ್ರದಲ್ಲಿ ಭಾರತದ್ಲ್ಲಲೇ ಅತ್ಯಂತ ದೊಡ್ಡ ಕುಳ ಎನಿಸಿರುವ ಡೆಲ್ಲಿ ಲ್ಯಾಂಡ್ ಅಂಡ್ ಡೆವಲಪರ್ಸ್‌ (ಡಿಎಲ್‌ಎಫ್) ಜತೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ನಡೆಸಿದ್ದಾರೆ ಎನ್ನಲಾದ ಭೂ ಅವ್ಯವಹಾರ* ಎರಡು: ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರ ಪತ್ನಿ ಲೂಯಿಸ್ ಖುರ್ಷಿದ್ (ಇವರು ಮೂಲತಃ ಉಡುಪಿಯವರು) ಯೋಜನಾ ನಿರ್ದೇಶಕರಾಗಿರುವ ಡಾ.ಝಕೀರ್ ಹುಸೇನ್ ಸ್ಮಾರಕ ಟ್ರಸ್ಟ್‌ನ ಅವ್ಯವಹಾರ.

 

ಈ ಟ್ರಸ್ಟ್ ಕೆಲವು ಅಧಿಕಾರಿಗಳ ಸಹಿಯನ್ನು ಫೋರ್ಜರಿ ಮಾಡಿರುವ ಪ್ರಮಾಣ ಪತ್ರ ಸಲ್ಲಿಸಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ಹಣ ಪಡೆದಿದೆ ಹಾಗೂ ಅಂಗವಿಕಲರಿಗೆ ತ್ರಿಚಕ್ರ ಸೈಕಲ್ ಮತ್ತು ಶ್ರವಣ ಸಾಧನ ವಿತರಣೆಯಲ್ಲಿ ಸುಳ್ಳು ದಾಖಲೆ ನೀಡಿದೆ ಎನ್ನುವ ಆರೋಪ* ಮೂರು: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಉಮರೇಡ್ ತಾಲ್ಲೂಕಿನಲ್ಲಿ ಅಣೆಕಟ್ಟೆ ನಿರ್ಮಾಣಕ್ಕೆ ರೈತರಿಂದ ವಶಪಡಿಸಿಕೊಳ್ಳಲಾದ ಕೃಷಿ ಭೂಮಿಯಲ್ಲಿ ನೂರು ಎಕರೆ ಭೂಮಿಯನ್ನು ಕಾಂಗ್ರೆಸ್ ಹಾಗೂ ಎನ್‌ಸಿಪಿ ಸರ್ಕಾರದ ನೆರವಿನಿಂದ ಕಬಳಿಸಿದ್ದಾರೆ ಎಂಬುದು.ಈ ಆರೋಪಗಳು ದೇಶದಾದ್ಯಂತ ಭಾರಿ ಸಂಚಲನ ಉಂಟು ಮಾಡದೇ ಹೋಗಿದ್ದರೂ ಎಲ್ಲ ಪಕ್ಷಗಳ ರಾಜಕಾರಣಿಗಳು ಬೆವರು ಒರೆಸಿಕೊಳ್ಳುವಂತೆ ಮಾಡಿರುವುದು ಸುಳ್ಳಲ್ಲ. ಆರೋಪ ಹೊತ್ತವರು ಮಾಧ್ಯಮಗಳ ಮುಂದೆ ಕುಳಿತು `ನಾವು ಕಳ್ಳರಲ್ಲ, ಬೇಕಾದರೆ ಯಾವುದೇ ತನಿಖೆ ನಡೆಯಲಿ~ ಎಂದು ಮೇಜು ಕುಟ್ಟುವ ಮಟ್ಟಿಗಾದರೂ ಅವರನ್ನು ಅಧೀರರನ್ನಾಗಿಸುತ್ತಿವೆ. ಇಷ್ಟರಿಂದಲೇ ಎಲ್ಲ ಸರಿ ಹೋಗಿಬಿಡುತ್ತದೆಯೇ?ನಿಜ. ಕೇಜ್ರಿವಾಲ ಮಾಡಿರುವ, ಮಾಡುತ್ತಿರುವ ಆರೋಪಗಳೆಲ್ಲಾ ಬರಿ ಆರೋಪಗಳಷ್ಟೇ. `ಆರೋಪ ಬಂದಾಕ್ಷಣ ಅವರೆಲ್ಲಾ ಅಪರಾಧಿ ಏನಲ್ಲವಲ್ಲ~ ಎಂಬ ದನಿ ಬಲವಾಗಿರುವ ಸಮಯದಲ್ಲಿ ಕೇಜ್ರಿವಾಲರನ್ನು ಕಡೆಗಣ್ಣಿನಿಂದ ನೋಡುವಂತೆಯೂ ಇಲ್ಲ.ಮೇಲ್ನೋಟಕ್ಕೆ ಶಾಂತವಾಗಿ, ನಿರ್ಭಿಡೆಯಿಂದ, ದೃಢವಿಶ್ವಾಸದಿಂದ, ತರ್ಕಬದ್ಧವಾಗಿ ಲೂಟಿಕೋರರ ವಿರುದ್ಧ ಮಾತನಾಡುತ್ತಿರುವ ಕೇಜ್ರಿವಾಲ ಹೊಸ ರಾಜಕೀಯ ಪಕ್ಷ ಕಟ್ಟುವ ಹುರುಪಿನಲ್ಲಿದ್ದಾರೆ.

 

ಭ್ರಷ್ಟಮುಕ್ತ ಸಮಾಜ ನಿರ್ಮಾಣದ ಕನಸನ್ನು ಸಾಕಾರಗೊಳಿಸುತ್ತೇನೆ ಎನ್ನುತ್ತಲೇ ಈ ದೇಶದ ಪ್ರಬಲ ಮಾಧ್ಯಮಗಳನ್ನು ನ್ಯಾಯಸ್ಥಾನದ ಪರ್ಯಾಯವಾಗಿ ಬಿಂಬಿಸುವ ಜಾಣತನ ಮೆರೆಯುತ್ತಿದ್ದಾರೆ.ಇದೇ ವೇಳೆ ಕೇಜ್ರಿವಾಲರ ಸಂಗಡಿಗರೇ ಆದ ಮಾಯಾಂಕ ಗಾಂಧಿ ಹಾಗೂ ಅಂಜಲಿ ದಮನಿಯ ಅವರು ಅಪಸ್ವರ ಎತ್ತಿದ್ದಾರೆ. ಇಂಡಿಯಾ ಎಗೆನೆಸ್ಟ್ ಕರಪ್ಷನ್ (ಐಎನ್‌ಎ) ಸಂಘಟನೆಯಲ್ಲಿ ಎಲ್ಲವೂ ಅಂದುಕೊಂಡಂತೆ ಇಲ್ಲ ಎಂದು ಹೇಳುತ್ತಿದ್ದಾರೆ. ಏತನ್ಮಧ್ಯೆ ಪ್ರಧಾನಿ ಡಾ.ಮನಮೋಹನ ಸಿಂಗ್ ಸ್ವತಃ ಮಾಹಿತಿ ಹಕ್ಕು ಕಾಯ್ದೆಗೆ ಅಂಕುಶ ಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದಾರೆ.

 

ಇದೇ ಹಾದಿಯಲ್ಲಿ ಸುಪ್ರೀಂ ಕೋರ್ಟ್ ಕೂಡಾ ರಾಗ ಎಳೆದಿದೆ. ಮಾಹಿತಿ ಹಕ್ಕು ಕೇಂದ್ರ ಆಯುಕ್ತರ ಆಯ್ಕೆ ಮಾಡುವಾಗ ಅವರು ನ್ಯಾಯಾಂಗದ ಹಿನ್ನೆಲೆ ಹೊಂದಿರಬೇಕು ಎಂದು ಪ್ರತಿಪಾದಿಸಿದೆ. ಇವನ್ನೆಲ್ಲಾ ಗಮನಿಸಿದಾಗ ನಮ್ಮ ಜನತಂತ್ರಕ್ಕೆ ಭ್ರಷ್ಟಾಚಾರ ವಿರೋಧಿ ಸಂಗ್ರಾಮವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇನೋ ಎಂಬ ಸಂಶಯ ಸಹಜವಾಗಿಯೇ ಮೂಡುತ್ತದೆ.ಸ್ವಾತಂತ್ರ್ಯ ಬಂದ ಮೊದಲಿನ ದಿನಗಳಲ್ಲಿ ಭ್ರಷ್ಟಾಚಾರದ ಮಾತು ಅಷ್ಟಕ್ಕಷ್ಟೇ ಇತ್ತು. ಕೆಂಗಲ್ ಹನುಮಂತಯ್ಯನವರ ಕಾಲದಲ್ಲಿ ಮೈಸೂರು ಗಾಂಧಿ ಎಂದೇ ಹೆಸರಾಗಿದ್ದ ಟಿ.ಎಸ್.ಸಿದ್ದಲಿಂಗಯ್ಯ (ಕೋಲಾರ ಜಿಲ್ಲೆಯವರು) ತಾಮ್ರದ ತಂತಿ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದ ತಕ್ಷಣ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.ನೆಹರೂ ಮಂತ್ರಿ ಮಂಡಲದಲ್ಲಿ ಟಿ.ಟಿ.ಕೃಷ್ಣಮಾಚಾರಿ ಎಲ್‌ಐಸಿ ಶೇರುಗಳ ಮಾರಾಟದಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇವು ಆವತ್ತಿನ ರಾಜಕಾರಣಿಗಳು ಭ್ರಷ್ಟಾಚಾರದ ಆರೋಪಕ್ಕೆ ಸ್ಪಂದಿಸುತ್ತಿದ್ದ ರೀತಿ. ಆದರೆ ಇಂದು?ಭ್ರಷ್ಟರು ಸರ್ಕಾರಗಳನ್ನು ತಮ್ಮ ಕೈಗಳ್ಲ್ಲಲೇ ಇಟ್ಟುಕೊಂಡಿದ್ದಾರೆ. ಅಥವಾ ಭ್ರಷ್ಟರ ಕೈಯ್ಯಲ್ಲಿ ಸರ್ಕಾರಗಳು ನರಳುತ್ತಿವೆ. ಇವತ್ತು ಕೇಜ್ರಿವಾಲ ಹೇಳುತ್ತಿರುವುದೂ ಇದನ್ನೇ. ರಾಷ್ಟ್ರಪತಿ ಸರಿಯಿಲ್ಲ, ಪ್ರಧಾನಿ ಸರಿಯಿಲ್ಲ, ನ್ಯಾಯಮೂರ್ತಿಗಳು ಸರಿಯಿಲ್ಲ... ಹಾಗಾದರೆ ಸರಿ ಇರುವವರು ಯಾರು?ಪ್ರಾಮಾಣಿಕರೇ ಇಲ್ಲವೇನೊ ಎಂಬಂತಹ ವಾತಾವರಣದಲ್ಲಿ 2011ರ ಏಪ್ರಿಲ್ ತಿಂಗಳಿನಲ್ಲಿ ಅಣ್ಣಾ ಹಜಾರೆ ಆರಂಭಿಸಿದ ಜನಲೋಕಪಾಲ ಮಸೂದೆಯ ಆಗ್ರಹ ನಿಜವಾಗಿಯೂ ದೇಶದಲ್ಲಿ ಹೊಸ ಆಶಾಕಿರಣವನ್ನೇ ಹುಟ್ಟಿಸಿತ್ತು. ಆದರೆ ಪಟ್ಟಭದ್ರರು ವ್ಯವಸ್ಥೆಯನ್ನು ಹೇಗೆ ತಮ್ಮ ಕಪಿಮುಷ್ಟಿಯಲ್ಲಿ ಹಿಡಿದು ಇಟ್ಟುಕೊಂಡಿದ್ದಾರೆ ಎಂದರೆ, ಅಣ್ಣಾ ಮತ್ತು ಕೇಜ್ರಿವಾಲರನ್ನೇ ಬೇರ್ಪಡಿಸಿದರು!ಬಜೆಟ್ ಎಷ್ಟು ಲಕ್ಷ ಕೋಟಿ ಇರುತ್ತದೆ, ಎಲ್ಲಿಗೆ ಎಷ್ಟು ಹಣ ಖರ್ಚಾಗುತ್ತದೆ? ಫಲಾನುಭವಿಗಳು ಯಾರು? ಯಾರಿಗೂ ತಿಳಿಯುವುದೇ ಇಲ್ಲ. ಅಕ್ಷರಸ್ಥರು ಎನ್ನಿಸಿಕೊಂಡವರು ಎ.ಸಿ.ರೂಮುಗಳಲ್ಲಿ ಕುಳಿತು ಅಲ್ಲಿಗೆ ಇಷ್ಟು ಹಣ ಖರ್ಚಾಗಿದೆ.ಇಲ್ಲಿ ಇಷ್ಟು ಹಣ ವಿನಿಯೋಗವಾಗಿದೆ ಎಂದೆಲ್ಲಾ ಪುಂಖಾನುಪುಂಖವಾಗಿ ಅಂಕಿಸಂಖ್ಯೆಗಳ ದಾಖಲೆ ಬಿಚ್ಚಿಡುತ್ತಾರೆ. ಹಾಗಾದರೆ ಬಡವರು ಯಾಕೆ ಇನ್ನೂ ಈ ಸಂಖ್ಯೆಯಲ್ಲಿ ಇದ್ದಾರೆ ಎಂಬ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸಲು ಯಾರೂ ತಯಾರಿಲ್ಲ. ಇದನ್ನು ಕೇಜ್ರಿವಾಲ ಕೂಡಾ ಹೇಳಲು ಸಾಧ್ಯವಿಲ್ಲವೇನೋ!ಸಭ್ಯರು ನಮ್ಮ ಚುನಾವಣೆ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಯನ್ನು ನಾನು ಅಳಿಸಿ ಹಾಕುತ್ತೇನೆ ಎನ್ನುತ್ತಿದ್ದಾರೆ ಕೇಜ್ರಿವಾಲ. ಕರ್ನಾಟಕದಲ್ಲಿ ರೈತರ ಚಳವಳಿ ಉತ್ತುಂಗದಲ್ಲಿದ್ದಾಗ ಆರಿಸಿ ಬಂದವರು ಕೇವಲ ಇಬ್ಬರೇ ಇಬ್ಬರು.ಇದು ನಮ್ಮ ನೆಲದ ಚಳವಳಿಗಳ ಗೆಲುವು. ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರೇ ಚುನಾವಣೆಗೆ ಸ್ಪರ್ಧಿಸಬೇಕೆಂದೇನಿಲ್ಲ. ಯಾರೂ ಬೇಕಾದರೂ ಸ್ಪರ್ಧಿಸಬಹುದು. ಇದನ್ನು ನ್ಯಾಯಾಲಯವೇ ಊರ್ಜಿತಗೊಳಿಸಿದೆ. ಇದರರ್ಥ ಯಾರು ಯಾವುದೇ ಕ್ಷೇತ್ರದಲ್ಲಿ ಇದ್ದರೂ ಸರಿಯೇ..! ಇದು ನಮ್ಮ ವ್ಯವಸ್ಥೆ.ಮಾಧ್ಯಮಗಳು ಸಭ್ಯ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಇವತ್ತು ಭ್ರಷ್ಟಾಚಾರ ಮಾಡಲಿಕ್ಕೆಂದೇ ಮಾಧ್ಯಮ ಕ್ಷೇತ್ರಕ್ಕೆ ಧುಮುಕುವವರು ನಮ್ಮ ನಡುವೆ ಉದ್ಭವಿಸುತ್ತಿದ್ದಾರೆ..! ಲೆಕ್ಕ ಹಾಕಲು ಆಗದಂತಹ ರಾಜಕೀಯ ಪಲ್ಲಟಗಳು ಗರಿಗೆದರಿದ ಹೊತ್ತಿನಲ್ಲಿ ಕೇಜ್ರಿವಾಲ ತಮ್ಮ ರಾಜಕೀಯ ಚಳವಳಿಗೆ `ಪಕ್ಷ~ದ ಅಂಗಿ ಚೆಡ್ಡಿ ತೊಡಿಸುವ ಸಾಹಸಕ್ಕೆ ಕೈಹಾಕಿದ್ದಾರೆ.ಕೇಜ್ರಿವಾಲ ಮಾಡುತ್ತಿರುವುದೆಲ್ಲಾ ಕೇವಲ ಗಿಮಿಕ್ ಎನ್ನುವ ಆಕ್ಷೇಪಗಳೂ ಇವೆ. ಮಾಧ್ಯಮಗಳ ಮುಂದೆ ದಾಖಲೆ ತೋರಿಸುವ ಅವರು ನ್ಯಾಯಾಲಯಕ್ಕೆ ಏಕೆ ಹೋಗುವುದಿಲ್ಲ ಎಂದು ಪ್ರಶ್ನಿಸುವವರೂ ಇದ್ದಾರೆ.ಈ ಅಪವಾದಗಳಿಗೆ ಇಂಬುಗೊಟ್ಟಂತೆ ನ್ಯಾಯಾಂಗ ವ್ಯವಸ್ಥೆಯೂ ಸತ್ವಹೀನವಾಗಿ ಕಾಣುತ್ತಿದೆ. ವಿಶ್ವದ ನ್ಯಾಯಾಂಗ ವ್ಯವಸ್ಥೆಯಲ್ಲೇ ಭಾರತದ ನ್ಯಾಯಾಂಗ ವ್ಯವಸ್ಥೆಗೆ ಅತ್ಯಂತ `ನಿಧಾನಗತಿ~ಯ ಖ್ಯಾತಿ ಇದೆ. ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಇಲ್ಲೂ ಈಗ ಭ್ರಷ್ಟರ ಹೆಸರುಗಳು ಕೇಳಿ ಬರುತ್ತಿವೆ.ಸಾವಿರ ಹಾಲಾಹಲಗಳ ನಡುವೆ ಬೀದಿಗಿಳಿದಿರುವ ಕೇಜ್ರಿವಾಲ ತಮ್ಮ ಪಕ್ಷಕ್ಕೆ ಕೇವಲ ಸಂಕೇತವೋ ಅಥವಾ ಸತ್ವ ಹೌದೋ ಅಲ್ಲವೋ ಎಂಬುದನ್ನು ಮುಂದಿನ ದಿನಗಳೇ ನಿರ್ಧರಿಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry