ಭ್ರಷ್ಟಾಚಾರಕ್ಕೆ ಪಾಲಿಕೆ ಪ್ರೋತ್ಸಾಹ: ಆರೋಪ

7

ಭ್ರಷ್ಟಾಚಾರಕ್ಕೆ ಪಾಲಿಕೆ ಪ್ರೋತ್ಸಾಹ: ಆರೋಪ

Published:
Updated:

ಬೆಂಗಳೂರು: ‘ಬಿಬಿಎಂಪಿಗೆ ಒಂದು ಕೋಟಿ ರೂಪಾಯಿ ವಂಚಿಸಿ ಅಮಾನತುಗೊಂಡಿದ್ದ ದ್ವಿತೀಯ ದರ್ಜೆ ನೌಕರನಿಗೆ ಮತ್ತೆ ಸೇವೆ ಸಲ್ಲಿಸಲು ಅವಕಾಶ ನೀಡಿರುವುದು ಖಂಡನೀಯ. ಇದರಿಂದ ಭ್ರಷ್ಟಾಚಾರಕ್ಕೆ ಪಾಲಿಕೆ ಆಡಳಿತವೇ ಪ್ರೋತ್ಸಾಹ ನೀಡಿದಂತಾಗಿದೆ. ಕೂಡಲೇ ಆ ನೌಕರನನ್ನು ಸೇವೆಯಿಂದ ವಜಾಗೊಳಿಸಬೇಕು’ ಎಂದು ಪಾಲಿಕೆ ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ ಆಗ್ರಹಿಸಿದರು.‘ಪೂರ್ವ ವಲಯದ ಹಣಕಾಸು ವಿಭಾಗದಲ್ಲಿ ಸಹಾಯಕ ನಿಯಂತ್ರಕರಾಗಿದ್ದ ಎಂ.ಸುರೇಶ್ ಅವರಿಗೆ ಆರೋಗ್ಯ ವಿಭಾಗದ ಸಿಬ್ಬಂದಿ ವೇತನ ಬಿಲ್‌ಗಳನ್ನು ಅನುಮೋದಿಸಿ ಚೆಕ್ ನೀಡುವ ಜವಾಬ್ದಾರಿ ನೀಡಲಾಗಿತ್ತು. ಸಿಬ್ಬಂದಿಯ ವೇತನ ಬಿಲ್‌ಗಳಲ್ಲಿ ವಿವಿಧ ಬಾಬ್ತುಗಳ ಹಣ ಕಡಿತಗೊಳಿಸಿದ ಬಳಿಕ ಆ ಮೊತ್ತವನ್ನು ಪುಸ್ತಕದಲ್ಲಿ ನಮೂದಿಸುವಾಗ ವಾಸ್ತವವಾಗಿ ಕಡಿತ ಮಾಡಲಾದ ಮೊತ್ತಕ್ಕಿಂತ ಹೆಚ್ಚು ಹಣವನ್ನು ದಾಖಲಿಸುತ್ತಿದ್ದರು’ ಎಂದು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.‘ಈ ಹೆಚ್ಚುವರಿ ಹಣವನ್ನು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗೆ ಹಾಗೂ ತಮ್ಮ ಆಪ್ತರ ಖಾತೆಗಳಿಗೆ ಚೆಕ್ ನೀಡಿ ಜಮಾ ಮಾಡುತ್ತಿದ್ದರು. ಈ ರೀತಿ ಅಕ್ರಮ ನಡೆಸಿ 2004ರಿಂದ 2007ರ ಅವಧಿಯಲ್ಲಿ ಒಟ್ಟು ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ತಮ್ಮ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ. ಈ ಅಂಶವನ್ನು ಅಂದಿನ ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದ ಬಳಿಕ ಸುರೇಶ್ ಅವರನ್ನು ಸೇವೆಯಿಂದ ಅಮಾನತುಪಡಿಸಲಾಗಿತ್ತು’ ಎಂದರು.ಬಳಿಕ ಪೂರ್ವ ವಲಯದ ಜಂಟಿ ಆಯುಕ್ತರಿಗೆ ತಪ್ಪೊಪ್ಪಿಗೆ ಪತ್ರ ನೀಡಿದ ಸುರೇಶ್ ಪಾಲಿಕೆಗೆ ವಂಚಿಸಿದ್ದ ಹಣವನ್ನು ಹಿಂದಿರುಗಿಸುವುದಾಗಿ ಲಿಖಿತ ಹೇಳಿಕೆ ನೀಡಿದ್ದರು. ಆದರೆ 5.34 ಲಕ್ಷ ರೂಪಾಯಿಯನ್ನಷ್ಟೇ ಹಿಂದಿರುಗಿಸಿದ ಅವರು ಸದ್ಯ ಮಲ್ಲೇಶ್ವರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಪಾಲಿಕೆಗೆ ಒಂದು ಕೋಟಿ ರೂಪಾಯಿ ವಂಚಿಸಿದ್ದವರಿಗೆ ಮತ್ತೆ ಸೇವೆಯಲ್ಲಿ ಮುಂದುವರಿಸಲು ಅವಕಾಶ ನೀಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.‘ಕೂಡಲೇ ಬಾಕಿ ಮೊತ್ತವನ್ನು ಸುರೇಶ್ ಅವರಿಂದ ವಸೂಲಿ ಮಾಡಬೇಕು. ಕರ್ತವ್ಯ ಲೋಪ ಮಾಡಿಕೊಂಡು ಅಕ್ರಮ ನಡೆಸಿದ ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ಆಗ ಮಾತ್ರ ಇತರೆ ನೌಕರರಿಗೂ ಎಚ್ಚರಿಕೆ ನೀಡಿದಂತಾಗುತ್ತದೆ’ ಎಂದರು.‘ಆಡಳಿತಾಧಿಕಾರಿಗಳ ಅವಧಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಈ ಕುರಿತು ಲೋಕಾಯುಕ್ತರಿಂದ ತನಿಖೆ ನಡೆಸಬೇಕು. ಇಲ್ಲವೇ ಸರ್ವ ಪಕ್ಷಗಳ ಸದನ ಸಮಿತಿ ರಚಿಸಿ ವಿಚಾರಣೆಗೆ ಆದೇಶಿಸಬೇಕು’ ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry