ಭ್ರಷ್ಟಾಚಾರದೆಡೆಗೆ ಬಿಜೆಪಿ ದ್ವಂದ್ವ- ಕಾರಟ್ ಟೀಕೆ

7

ಭ್ರಷ್ಟಾಚಾರದೆಡೆಗೆ ಬಿಜೆಪಿ ದ್ವಂದ್ವ- ಕಾರಟ್ ಟೀಕೆ

Published:
Updated:

ಬೆಂಗಳೂರು: ರಾಷ್ಟ್ರ ಮಟ್ಟದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಬಿಜೆಪಿ, ಕರ್ನಾಟಕದಲ್ಲಿ ತನ್ನದೇ ಮುಖ್ಯಮಂತ್ರಿಯ ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುವ ಮೂಲಕ ದ್ವಂದ್ವ ನಿಲುವು ಪ್ರದರ್ಶಿಸುತ್ತಿದೆ ಎಂದು ಸಿಪಿಎಂ ಪಾಲಿಟ್ ಬ್ಯೂರೋ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಟೀಕಿಸಿದರು.ನಗರದ ಇಎಂಎಸ್ ಭವನದಲ್ಲಿ ಭಾನುವಾರ ನಡೆದ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿಯಲ್ಲಿ ಪಾಲ್ಗೊಂಡಿದ್ದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳು ಲಭ್ಯವಿವೆ. ಆದರೂ ಬಿಜೆಪಿ ಹೈಕಮಾಂಡ್ ಅವರನ್ನು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದರು.‘ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಗಟ್ಟಿ ದನಿಯಲ್ಲಿ ಮಾತನಾಡುತ್ತಿದೆ. ಆದರೆ ಅದೇ ರೀತಿಯ ಆರೋಪ ಎದುರಿಸುತ್ತಿರುವ ಕರ್ನಾಟಕದ ಮುಖ್ಯಮಂತ್ರಿಯನ್ನು ಸಮರ್ಥಿಸಿಕೊಳ್ಳುತ್ತಿದೆ. ಬೇರೆಯವರು ಭ್ರಷ್ಟಾಚಾರ ಮಾಡಿದರೆ ಮಾತ್ರ ತಪ್ಪು, ತಾವು ಮಾಡಿದರೆ ಸರಿ ಎಂಬ ಕೆಟ್ಟ ನಿಲುವನ್ನು ಬಿಜೆಪಿ ಪ್ರದರ್ಶಿಸುತ್ತಿದೆ’ ಎಂದು ದೂರಿದರು.‘ಭೂ ಮಂಜೂರಾತಿ, ಡಿನೋಟಿಫಿಕೇಶನ್ ಮತ್ತಿತರ ಸಂದರ್ಭಗಳಲ್ಲಿ ಯಡಿಯೂರಪ್ಪ ಅವರು ಕೈಗೊಂಡಿರುವ ನಿರ್ಧಾರಗಳು ಕಾನೂನು ಪ್ರಕಾರ ಸರಿ ಇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹೇಳುತ್ತಿದ್ದಾರೆ. ಭ್ರಷ್ಟಾಚಾರಕ್ಕೂ ಕಾನೂನಿನ ಮಾನ್ಯತೆ ನೀಡಲು ಅವರು ಹೊರಟಿದ್ದಾರೆ. ಇನ್ನು ಅವರ ಪಕ್ಷ ಭ್ರಷ್ಟಾಚಾರದ ವಿರುದ್ಧ ನಡೆಸುವ ಹೋರಾಟಕ್ಕೆ ಯಾವ ಬೆಲೆ ಇದೆ’ ಎಂದು ಪ್ರಶ್ನಿಸಿದರು.ಒತ್ತಡಕ್ಕೆ ಮಣಿದ ಆಯೋಗ: ಚರ್ಚ್‌ಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ ವಿಚಾರಣಾ ಆಯೋಗ ಸಲ್ಲಿಸಿರುವ ವರದಿ ಕುರಿತು ಪ್ರತಿಕ್ರಿಯಿಸಿದ ಕಾರಟ್, ‘ಆಯೋಗವು ಹಲವು ಒತ್ತಡಗಳಿಗೆ ಮಣಿದು ವರದಿ ನೀಡಿದೆ. ಇದು ವಿಶ್ವಾಸಾರ್ಹತೆ ಇಲ್ಲದ ವರದಿ’ ಎಂದು ಟೀಕಿಸಿದರು.‘ವರದಿ ರೂಪಿಸುವ ಮುನ್ನ ಆಯೋಗವು ಹಲವು ಒತ್ತಡಗಳಿಗೆ ಮಣಿದಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ದಾಳಿಗೆ ಒಳಗಾದವರನ್ನೇ ಅಪರಾಧಿಗಳ ಸ್ಥಾನದಲ್ಲಿ ನಿಲ್ಲಿಸಿರುವುದು ಇದಕ್ಕೆ ಪ್ರಬಲ ಸಾಕ್ಷ್ಯ ಒದಗಿಸುತ್ತದೆ. ಈ ವರದಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದರು.ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ಜೊತೆ ಅಧಿಕಾರ ಹಂಚಿಕೊಂಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ದೇಶದಲ್ಲಿ ಹಲವು ಜಾತ್ಯತೀತ ಪಕ್ಷಗಳು ಆಗಾಗ ಅಧಿಕಾರದ ಆಸೆಯಿಂದ ಇಂತಹ ಚಂಚಲತೆ ಪ್ರದರ್ಶಿಸುತ್ತವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry