ಗುರುವಾರ , ನವೆಂಬರ್ 14, 2019
19 °C
ಫೋಕಸ್ - ನಮ್ಮೂರು ನಮ್ಮ ಕೆರೆ ಭಾಗ-2; ಕೆರೆ ಉಳಿಸಿ

ಭ್ರಷ್ಟಾಚಾರದ ನೆರಳು

Published:
Updated:

ತುಮಕೂರು: `ಬೇಲಿಯೇ ಎದ್ದು ಹೊಲ ಮೇಯ್ದ' ಕಥೆಯಂತಾಗಿದೆ ಜಿಲ್ಲೆಯ ಕೆರೆಗಳ ಅಭಿವೃದ್ಧಿ ವಿಷಯ. ಜಿಲ್ಲೆಯ 54 ಕೆರೆಗಳನ್ನು ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರದ ಆರ್‌ಆರ್‌ಆರ್ ಯೋಜನೆ ಅನುಷ್ಠಾನದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ.ಕೆರೆಗಳ ಒತ್ತುವರಿ ತೆರವುಗೊಳಿಸುವುದು, ತೂಬು ರಿಪೇರಿ, ಕೆರೆಗಳ ಹೂಳು ತೆಗೆದು ಪುನುರುಜ್ಜೀವನಗೊಳಿಸಿ ಯಥಾ ಸ್ಥಿತಿ ಕಾಪಾಡಿಕೊಳ್ಳುವ ಮಹತ್ವದ ಜವಾಬ್ದಾರಿಯನ್ನು ಯೋಜನೆ ಒಳಗೊಂಡಿತ್ತು. ಈ ಯೋಜನೆಗೆ ಜಿಲ್ಲಾಧಿಕಾರಿ ಮುಖ್ಯಸ್ಥರಾಗಿದ್ದರು. ಶಾಸಕರ ಕಣ್ಗಾವಲಿನಲ್ಲಿ ಯೋಜನೆ ಕಾಮಗಾರಿ ನಡೆಯಬೇಕಿತ್ತು. ಇಷ್ಟಿದ್ದು ಜಿಲ್ಲೆಯಲ್ಲಿ ಯೋಜನೆ ಜಾರಿಯಲ್ಲಿ ಅವ್ಯವಹಾರ ಹೊಗೆಯಾಡಿದೆ.ಕೆರೆಗಳ ಅಭಿವೃದ್ಧಿಗೆ ಯಾವ ಮಾನದಂಡಗಳನ್ನು ಅನುಸರಿಸದ ಸಣ್ಣ ನೀರಾವರಿ ಇಲಾಖೆಯು ಹಣ ಪೋಲು ಮಾಡಿದೆ ಎಂಬ ಆರೋಪ ಕೇಳಿಬರುತ್ತಿವೆ.ಹೂಳು ತೆಗೆಯಲು ಕೆಲ ಮಾನದಂಡಗಳಿವೆ. ಹೂಳು ತೆಗೆಯುವ ಮುನ್ನ ಕೆರೆಯಲ್ಲಿ ಹೂಳಿನ ಸಾಮರ್ಥ್ಯ ಅಳೆಯಬೇಕು. ಕೆರೆಯ ಯಾವ ಭಾಗದಲ್ಲಿ ಹೂಳು ತುಂಬಿದೆ ಎಂಬುದನ್ನು ಪತ್ತೆ ಹಚ್ಚಬೇಕು. ನಂತರ ಜೆಸಿಬಿ ಬಳಸದೆ ಹೂಳು ತೆಗೆಯಬೇಕು. ಆದರೆ ಈ ವೈಜ್ಞಾನಿಕ ನಿಯಮಗಳನ್ನು ಗಾಳಿಗೆ ತೂರಿದ ಇಲಾಖೆ ಗುತ್ತಿಗೆದಾರರ ಹಿತಾಸಕ್ತಿ ಕಾಪಾಡಿದೆ ಎಂದು ನಿವೃತ್ತ ಎಂಜಿನಿಯರ್ ರಾಮಚಂದ್ರಪ್ಪ ಆರೋಪಿಸುತ್ತಾರೆ.`ಕೇಂದ್ರ ಸರ್ಕಾರ ನೀಡಿದ ರೂ.40 ಕೋಟಿ ಹಣ ನೀರು ಪಾಲು ಮಾಡಿದರು. ಸಾಕಷ್ಟು ಕೆರೆಗಳ ಕಾಮಗಾರಿ ಬಿಲ್‌ಗೆ ಕೇವಲ ಒಂದೇ ದಿನದಲ್ಲಿ ಆಗಿನ ಜಿಲ್ಲಾಧಿಕಾರಿ ಸಹಿ ಹಾಕಿದ್ದಾರೆ. ಯೋಜನೆಯ ಅಷ್ಟು ಹಣ ತಿನ್ನುವವರ ಪಾಲಾಯಿತು. ಕೆರೆಗಳನ್ನು ಹೂಳು ಎತ್ತದೇ ಹಣ ಲಪಟಾಯಿಸಲಾಗಿದೆ' ಎಂದು ಸಂಸದ ಜಿ.ಎಸ್.ಬಸವರಾಜ್ `ಪ್ರಜಾವಾಣಿ' ಜೊತೆ ಮಾತನಾಡುತ್ತಾ ನೋವು ತೋಡಿಕೊಂಡರು.ತುರುವೇಕೆರೆ ಕೆರೆಯ ಹೂಳು ತೆಗೆಯಲು ಕಾವೇರಿ ನೀರಾವರಿ ನಿಗಮಕ್ಕೆ ಮಾನವ ಹಕ್ಕುಗಳ ಆಯೋಗ ಆದೇಶ ನೀಡಿತ್ತು. ಆದರೆ ಹೂಳು ಹಾಕಲು ಎರಡು ಎಕರೆ ಜಾಗ ಕೊಡುವಂತೆ ತಹಶೀಲ್ದಾರ್ ಅವರನ್ನು ನಿಗಮ ಕೋರಿದೆ. ಹೂಳು ನಿಂತು ನೀರು ಶೇಖರಣೆ ಕಡಿಮೆಯಾಗಿದೆ. ಇದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿ ಎನ್ನುತ್ತಾರೆ ಮಾನವ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೇಗೌಡ.

ಬಹುತೇಕ ಕೆರೆಗಳು ಒತ್ತುವರಿಯಾಗಿವೆ. ಆದರೆ ಒತ್ತುವರಿ ತೆರವಿಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ತುರುವೇಕೆರೆ ಕೆರೆ ಒತ್ತುವರಿ ತೆರವು ಮಾಡುವಂತೆ ಅನೇಕ ದೂರು ನೀಡಿದ್ದರೂ ಏನೇನು ಪ್ರಯೋಜನವಾಗಿಲ್ಲ ಎಂದರು.ಸರ್ಕಾರದ ಆದೇಶ ಕೇವಲ ಕಾಗದಲ್ಲಿ ಮಾತ್ರ ಉಳಿದಿದೆ. ಆದರೆ ಒತ್ತುವರಿ, ಒತ್ತುವರಿಯಾಗಿಯೇ ಉಳಿದಿದೆ. ಸಾಕಷ್ಟು ಕೆರೆಗಳಲ್ಲಿ ಒತ್ತುವರಿ ತೆರವುಗೊಳಿಸದೆ ಎಷ್ಟು ಜಾಗ ಇದೆಯೋ ಅಷ್ಟಕ್ಕೆ ಸಣ್ಣ ನೀರಾವರಿ ಇಲಾಖೆ ಬೇಲಿ ಹಾಕುವ ಮೂಲಕ ಒತ್ತುವರಿಯನ್ನು ಸಕ್ರಮ ಮಾಡಿದೆ. ಇಲಾಖೆಯ ಇಂತಹ ಕೆಟ್ಟ ಕೆಲಸದಿಂದಾಗಿ ಕೆರೆಯ ನೀರು ನಿಲ್ಲುವ ಪ್ರಮಾಣ ಕಡಿಮೆಯಾಗಿದೆ. ಕಂದಾಯ ಇಲಾಖೆ ಸರ್ವೆ ಸಮಯದಲ್ಲಿ ಒತ್ತುವರಿ ತೆರವುಗೊಳಿಸದೆ, ಸಮರ್ಪಕವಾಗಿ ಸರ್ವೆ ಮಾಡದೆ ಕೆರೆಗಳನ್ನು ನುಂಗಿ ನೀರು ಕುಡಿದವರ ಬೆನ್ನುತಟ್ಟಿ ಬಂದಿದೆ.ಕೆಲವು ಕಡೆಗಳಲ್ಲಿ ತೆಗೆದ ಹೂಳು ಕೆರೆಯ ಸುತ್ತಲು ಹಾಕಲಾಗಿದೆ. ಇದರಿಂದ ಮತ್ತೇ ಮಳೆಗಾಲದಲ್ಲಿ ಕೆರೆಗೆ ಹೂಳು ಸೇರಲಿದೆ ಎಂಬ ಆತಂಕ ಎದುರಾಗಿದೆ.ಕೆರೆಯನ್ನು ಮತ್ತೇ ಒತ್ತುವರಿ ಮಾಡಬಾರದೆಂದು ಕೆರೆಯ ಸುತ್ತ ಕಾಲುವೆ (ಟ್ರಂಚ್) ಮಾಡಲಾಗಿದೆ. ಆದರೆ ಈ ಕಾಲುವೆಯನ್ನು ಸರಿಯಾಗಿ ತೋಡಿಲ್ಲ. ಮನಸಿಗೆ ಇಷ್ಟಬಂದಂತೆ ತೆಗೆಯಲಾಗಿದೆ. ಕೆರೆಯ ಸುತ್ತಲೂ ಟ್ರಂಚ್ ತೆಗೆಯುವ ಮೂಲಕ ಮಳೆ ನೀರು ಸಹ ಕೆರೆಗೆ ಸೇರದಂತೆ ಮಾಡಿದ ಸಣ್ಣ ನೀರಾವರಿ ಇಲಾಖೆಯು ಕೆರೆ ಉಳಿಸುವ ಬದಲಿಗೆ ಕೆರೆಗಳನ್ನು ಬಲಿ ತೆಗೆದುಕೊಂಡಿದೆ ಎನ್ನುತ್ತಾರೆ ಕೆಲವು ಗ್ರಾಮಸ್ಥರು.ಈಗಾಗಲೇ ರೈತರು ಹೂಳು ತೆಗೆದಿದ್ದ ಕಡೆಗಳಲ್ಲಿ ಒಂದಷ್ಟು ಹೂಳು ತೆಗೆದಂತೆ ಮಾಡಿ ಭಾರಿ ವಂಚನೆ ಎಸಗಲಾಗಿದೆ ಎಂಬ ಆರೋಪ ಕುರಿತು ಲೋಕಾಯುಕ್ತ ತನಿಖೆಯಾಗಬೇಕೆಂಬ ಒತ್ತಾಯ ಕೂಡ ಜಿಲ್ಲೆಯಲ್ಲಿ ಕೇಳಿಬಂದಿದೆ.

ಪ್ರತಿಕ್ರಿಯಿಸಿ (+)