ಭ್ರಷ್ಟಾಚಾರದ ವಿರುದ್ಧ ಎಬಿವಿಪಿ ಪ್ರತಿಭಟನೆ

7

ಭ್ರಷ್ಟಾಚಾರದ ವಿರುದ್ಧ ಎಬಿವಿಪಿ ಪ್ರತಿಭಟನೆ

Published:
Updated:

ತಿಪಟೂರು: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದ ವಿದ್ಯಾರ್ಥಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ಕೇಂದ್ರದ ಯುಪಿಎ ಸರ್ಕಾರ ಹಿಂದೆಂದೂ ಕಾಣದ ಭಾರಿ ಅವ್ಯವಹಾರ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿ ದೇಶಕ್ಕೆ ಕಂಠಕ ಪ್ರಾಯವಾಗಿದೆ. 1.76 ಲಕ್ಷ ಕೋಟಿ ರೂಪಾಯಿ 2 ಜಿ ಹಗರಣ, ಕಾಮನ್‌ವೆಲ್ತ್ ಕ್ರೀಡಾಕೂಟದ 1890 ಸಾವಿರ ಕೋಟಿ ಹಗರಣ ಸರ್ಕಾರದ ಆಡಳಿತ ವೈಫಲ್ಯ ಮತ್ತು ಕೊಳ್ಳೆ ಹೊಡೆಯುವ ಮನಸ್ಥಿತಿಗೆ ಸಾಕ್ಷಿಯಾಗಿದೆ.ದೇಶದ ಅಭಿವೃದ್ಧಿಗೆ ಧಕ್ಕೆ ಉಂಟು ಮಾಡಿದ ಈ ಹಗರಣಗಳಲ್ಲಿ ಭಾಗಿಯಾದ ಸಚಿವರು, ಪ್ರಮುಖರ ಹೆಸರು ಬಹಿರಂಗವಾಗಿದ್ದರೂ; ಕಠಿಣ ಕ್ರಮ ಕೈಗೊಳ್ಳದೆ ಸರ್ಕಾರ ಮರೆ ಮಾಚುವ ತಂತ್ರ ಅನುಸರಿಸುತ್ತಿದೆ. ಜನಸಾಮಾನ್ಯರ ಹಿತ ರಕ್ಷಿಸಬೇಕಾದ ಸರ್ಕಾರ ಅದನ್ನು ಮರೆತು ಹಣ ದೋಚಲು ಅವಕಾಶ ಮಾಡಿಕೊಂಡಿದೆ ಎಂದು ಎಪಿವಿಪಿ ಮುಖಂಡರು ಪ್ರತಿಭಟನೆಯಲ್ಲಿ ಆರೋಪಿಸಿದರು. ತಪ್ಪಿತಸ್ಥರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ನೂರಾರು ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ಮಾಡಿ ಕೆಲ ಕಾಲ ರಸ್ತೆತಡೆ ನಡೆಸಿದರು. ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಂಗಮೇಶ್, ಎಚ್.ಆರ್.ಮಂಜುನಾಥ್, ಸ್ನೇಹಾ, ಮಲ್ಲೇಶ್, ಅಶೋಕ್, ಚೆಲುವ, ವಿವೇಕ, ಅಭಿನಂದನ, ವಿಕಾಸ, ಪ್ರದೀಪ, ಚೇತನ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ನಂತರ ಉಪ ವಿಭಾಗಾಧಿಕಾರಿ ವೈ.ಎಸ್. ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಕಪ್ಪು ಹಣ ವಾಪಸ್ ತನ್ನಿ

ತುರುವೇಕೆರೆ:  2-ಜಿ ಸ್ಪೆಕ್ಟ್ರಂ, ಆದರ್ಶ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟದ ಹಗರಣಗಳಲ್ಲಿ ಭಾಗಿಯಾದವರಿಗೆ ಶೀಘ್ರ ಶಿಕ್ಷೆಯಾಗಬೇಕು ಮತ್ತು ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತರಬೇಕು ಎಂದು ಎಬಿವಿಪಿ ನಗರ ಪ್ರಮುಖ್ ಪೃಥ್ವೀಕುಮಾರ್ ಆಗ್ರಹಿಸಿದರು.ಪಟ್ಟಣದಲ್ಲಿ ಕೇಂದ್ರ ಸರ್ಕಾರದ ಹಗರಣಗಳ ವಿರುದ್ಧ ಸೋಮವಾರ ಎಬಿವಿಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.ನೆರೆ ಜಿಲ್ಲೆಯ ಸಂಸದರೊಬ್ಬರು ಕೋಟ್ಯಂತರ ರೂಪಾಯಿ ಕಪ್ಪು ಹಣವನ್ನು ವಿದೇಶಿ ಬ್ಯಾಂಕುಗಳಲ್ಲಿ ತೊಡಗಿಸಿದ್ದು ಶೀಘ್ರದಲ್ಲಿ ಆ ವಿವರ ಬಹಿರಂಗಪಡಿಸಲಾಗುವುದು ಎಂದರು.ಸಹ ಪ್ರಮುಖ್ ಮಂಜುನಾಥ್, ಟಿ.ಎಸ್.ನಾಗೇಶ್, ಮುಖಂಡರಾದ ಧರಣಿ, ಭರತ್, ರವಿಚಂದ್ರ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ಶಿರಸ್ತೇದಾರ್ ದೊಡ್ಡಮಾರಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.ವಿದ್ಯಾರ್ಥಿಗಳ ಪ್ರತಿಭಟನೆ


ಗುಬ್ಬಿ: ಭ್ರಷ್ಟಾಚಾರದ ವಿರುದ್ಧ ಎಬಿವಿಪಿ ರಾಜ್ಯ ವ್ಯಾಪಿ ಕರೆ ನೀಡಿದ್ದ ಪ್ರತಿಭಟನೆ ಹಿನ್ನೆಲೆಯಲ್ಲಿ ಸೋಮವಾರ ತಾಲ್ಲೂಕು ಎಬಿವಿಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ಹಾಗೂ ಕೆಲ ಕಾಲ ರಸ್ತೆ ತಡೆ ನಡೆಸಿದರು.ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಇಲ್ಲವಾಗಿದೆ. 2ಜಿ ಸ್ಪೆಕ್ಟ್ರಂ ಹಗರಣ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಹಗಲು ದರೋಡೆಯಲ್ಲಿ ನಿತರರಾದ ಕಾಂಗ್ರೆಸ್ ತನ್ನ ಆಡಳಿತ ಮತ್ತು ಅಧಿಕಾರದ ಪ್ರಭಾವ ಬಳಸಿಕೊಂಡು ಕಾನೂನುಗಳನ್ನು ಗಾಳಿಗೆ ತೂರಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಬಸ್ ನಿಲ್ದಾಣದ ಬಳಿ 10 ನಿಮಿಷಗಳ ಕಾಲ ರಸ್ತೆ ತಡೆ ನಡೆಸಿ ನಂತರ ಭ್ರಷ್ಟಚಾರದ ಪ್ರತಿಕೃತಿ ದಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry