ಬುಧವಾರ, ನವೆಂಬರ್ 13, 2019
28 °C

ಭ್ರಷ್ಟಾಚಾರದ ವಿರುದ್ಧ ಕಣಕ್ಕಿಳಿದ ಮಾಜಿ ಸೈನಿಕ

Published:
Updated:

ಚಾಮರಾಜನಗರ: `ನನ್ನೂರು ಕೊಳ್ಳೇಗಾಲ ತಾಲ್ಲೂಕಿನ ಕೂಡಲೂರು. ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಂಚಿನಲ್ಲಿದೆ. ಈ ತಿಂಗಳ ಅಂತ್ಯಕ್ಕೆ ನಾನು ಭಾರತೀಯ ಸೇನೆಯಿಂದ ನಿವೃತ್ತನಾಗಿ ಒಂದು ವರ್ಷ ತುಂಬಲಿದೆ. ನಮ್ಮೂರು ಮೂಲ ಸೌಕರ್ಯದಿಂದ ವಂಚಿತವಾಗಿದೆ. ಊರಿಗೆ ಮರಳಿದಾಗ ಸಾಕಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಈ ಚಿಣ್ಣರಿಗೆ ಉಚಿತ ಶಿಕ್ಷಣ ನೀಡುವ ಹಂಬಲದೊಂದಿಗೆ ಸ್ವಂತವಾಗಿ ಶಾಲೆ ತೆರೆಯಲು ಮುಂದಾದೆ. ಆಗ ಸ್ಥಳೀಯ ಸರ್ಕಾರದ ಮಟ್ಟದಲ್ಲೇ ಸಾಕಷ್ಟು ತೊಂದರೆ ಅನುಭವಿಸಿದೆ'.`ಆದರೆ, ನನ್ನೂರಿನ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಹಂಬಲ ಮತ್ತಷ್ಟು ಹೆಚ್ಚಿತು. ಜಿಲ್ಲಾಮಟ್ಟದವರೆಗೂ ಅನುಮತಿಗಾಗಿ ಹೋರಾಡಿದೆ. ನನ್ನ ಎಲ್ಲ ಪ್ರಯತ್ನಗಳಿಗೆ ಭ್ರಷ್ಟಾಚಾರ ಸವಾಲಾಗಿ ಅಣಕಿಸುತ್ತಿತ್ತು. ನಾನು ಮಾಡುವ ಸಮಾಜ ಸೇವೆಗೆ ಅಡ್ಡಿಯಾಗುವ ಭ್ರಷ್ಟಾಚಾರದ ನಿರ್ಮೂಲನೆಗೆ ಅಧಿಕಾರದ ಅಗತ್ಯವಿದೆ ಎಂದು ಅನಿಸಿತು...'-ಹೀಗೆಂದು ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಜೆಡಿಯುನಿಂದ ಕಣಕ್ಕೆ ಇಳಿದಿರುವ ಮಾಜಿ ಸೈನಿಕ ಎಸ್. ಗಂಗಾಧರ ಹೇಳುತ್ತಿದ್ದಾಗ ಈ ಕ್ಷೇತ್ರದಲ್ಲಿ ಕಾಡಂಚಿನಲ್ಲಿರುವ ಹಳ್ಳಿಗಳ ಸಮಸ್ಯೆ ಬಿಚ್ಚಿಕೊಂಡವು.ಬಡರೈತ ಕುಟುಂಬದಲ್ಲಿ ಜನಿಸಿದ ಗಂಗಾಧರ ಅವರಿಗೆ ಈಗ 36 ವರ್ಷ. 17 ವರ್ಷ ಕಾಲ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಹಿರಿಮೆ ಹೊಂದಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಕೂಡಲೂರು ಗ್ರಾಮದಲ್ಲಿಯೇ ಪೂರೈಸಿದ ಅವರು, ರಾಮಾಪುರದಲ್ಲಿ ಪದವಿಪೂರ್ವ ಶಿಕ್ಷಣ ಪಡೆದರು.ಗಂಗಾಧರ ಅವರು ತಂದೆ-ತಾಯಿಗೆ ಒಬ್ಬನೇ ಮಗ. ಪಿಯುಸಿ ಓದುವ ವೇಳೆಯಲ್ಲಿಯೇ ಭಾರತೀಯ ಸೇನೆಗೆ ಆಯ್ಕೆಯಾದರು. ಸೇನೆಯ ತಾಂತ್ರಿಕ ವಿಭಾಗದಲ್ಲಿ(ಸಂಚಾರ) ಸೂಪರ್ ವೈಸರ್ ಆಗಿ ದೇಶ ಸೇವೆ ಆರಂಭಿಸಿದರು. ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಪಡೆದರು. ನಂತರ, ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಕೂಡ ಪಡೆದಿದ್ದಾರೆ.ಕಾರ್ಗಿಲ್ ಯುದ್ಧ, ಭಾರತ-ಚೈನಾ ಗಡಿಯಂಚಿನಲ್ಲಿರುವ ತವಾಂಗ್, ಉತ್ತರ ಪ್ರದೇಶದ ಮಥುರ, ಹರಿಯಾಣದ ಅಂಬಾಲದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. `ಆಪರೇಷನ್ ಪರಾಕ್ರಮ'ದಲ್ಲೂ ಅವರು ಕರ್ತವ್ಯ ನಿರ್ವಹಿಸಿದ್ದಾರೆ.`ಅಧಿಕಾರಶಾಹಿ ಹಾಗೂ ಜನಪ್ರತಿನಿಧಿಗಳ ಭಂಡತನದ ವಿರುದ್ಧ ಹೋರಾಡಿ ಕೊನೆಗೂ ಗ್ರಾಮದಲ್ಲಿ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಿದ್ದೇನೆ. ರಾಜಕೀಯ ಕ್ಷೇತ್ರ ಇಷ್ಟವಿಲ್ಲ. ಆದರೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮನೆ ಹಂಚಿಕೆಯಲ್ಲೂ ಭ್ರಷ್ಟಾಚಾರ ಇಣುಕಿದೆ. ಇದಕ್ಕೆ ಕಡಿವಾಣ ಹಾಕಲು ಸಾಮಾನ್ಯ ಜನರಿಂದ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರ ಅನಿವಾರ್ಯ ಅನಿಸಿದೆ. ಪೋಷಕರು ಹಾಗೂ ಸ್ನೇಹಿತರ ಬೆಂಬಲದಿಂದ ರಾಜಕೀಯಕ್ಕೆ ಧುಮುಕಿದ್ದೇನೆ. ಪ್ರಾಮಾಣಿಕವಾಗಿ ಜನಸೇವೆ ಮಾಡುವ ಗುರಿ ಹೊಂದಿದ್ದೇನೆ' ಎಂದು `ಪ್ರಜಾವಾಣಿ'ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)