ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅಗತ್ಯ

7

ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅಗತ್ಯ

Published:
Updated:
ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅಗತ್ಯ

ದಾವಣಗೆರೆ: ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟಕ್ಕೆ ನಗರದ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿಗಳು ಬೆಂಬಲ ಸೂಚಿಸಿ ದೀಪ ಬೆಳಗಿದರು.ಕಾಲೇಜು ಆವರಣದಲ್ಲಿ ಬುಧವಾರ ದೇಶಪಾಂಡೆ ಫೌಂಡೇಷನ್‌ನ ಲೀಡ್ ಸಂಸ್ಥೆಯ ಸಹಯೋಗದಲ್ಲಿ ಮೆರವಣಿಗೆ ಹೊರಟ ವಿದ್ಯಾರ್ಥಿಗಳು ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗಿದರು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಮಾತನಾಡಿ, ಭ್ರಷ್ಟಾಚಾರಕ್ಕೆ ಸುದೀರ್ಘ ಇತಿಹಾಸವಿದೆ. ಮನೆಯಿಂದಲೇ ಆರಂಭವಾಗುತ್ತದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯುವಜನರು ಆಸಕ್ತಿ ವಹಿಸಬೇಕು. ಇಂಥ ಅಭಿಯಾನದಿಂದ ಸಾರ್ವಜನಿಕರಿಗೆ ಸ್ಪಷ್ಟ ಸಂದೇಶ ಸಿಗುವಂತಾಗಬೇಕು. ಮೊದಲು ಈ ಪಿಡುಗಿಗೆ ಪರಿಹಾರ ನಮ್ಮಿಂದಲೇ ಆರಂಭವಾಗಬೇಕು. ಪ್ರತಿಯೊಬ್ಬರೂ ಭ್ರಷ್ಟಾಚಾರ ತೊಲಗಿಸಲು ಸಂಕಲ್ಪ ಹೊಂದಬೇಕು ಎಂದು ನುಡಿದರು.ಬಿಐಇಟಿ ಅಧ್ಯಕ್ಷ ಎ.ಸಿ. ಜಯಣ್ಣ ಮಾತನಾಡಿ, ವಿದ್ಯಾರ್ಥಿಗಳಿಂದಲೇ ಭ್ರಷ್ಟಾಚಾರ ತಡೆ ಸಾಧ್ಯ. ಸಂಪೂರ್ಣವಾಗಿ ನಿಲ್ಲಿಸಲಾಗದಿದ್ದರೂ ನಿಯಂತ್ರಿಸಬಹುದು. ಒಂದುವೇಳೆ ಭ್ರಷ್ಟಾಚಾರ ತೊಲಗಿದರೆ ದೇಶವನ್ನು ಬಡತನ ಮುಕ್ತವನ್ನಾಗಿ ಮಾಡಬಹುದು ಎಂದು ಅಭಿಪ್ರಾಯಪಟ್ಟರು.ಕಾಲೇಜು ಆವರಣದಿಂದ ಮೆರವಣಿಗೆ ಮೂಲಕ ಸಾಗಿದ ವಿದ್ಯಾರ್ಥಿಗಳು ಗುಂಡಿ ವೃತ್ತದಲ್ಲಿ ದೀಪ ಬೆಳಗಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಿದರು.ಪ್ರಾಂಶುಪಾಲ ಡಾ.ಬಿ.ಟಿ. ಅಚ್ಯುತ, ಕಾಲೇಜಿನ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ, ಡಾ.ಎಸ್. ಮಂಜಪ್ಪ, ಲೀಡ್ ಸಂಸ್ಥೆಯ ವ್ಯವಸ್ಥಾಪಕ ಅಜಯ್ ಕುಮಾರ್ ಶುಕ್ಲಾ, ವಿದ್ಯಾರ್ಥಿ ಮುಖಂಡರಾದ ಚಂದನ್, ಕಲ್ಲೇಶ್, ಮಹಾರುದ್ರೇಶ್ ಇತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry