ಸೋಮವಾರ, ಏಪ್ರಿಲ್ 19, 2021
28 °C

ಭ್ರಷ್ಟಾಚಾರದ ವಿರುದ್ಧ ಹೋರಾಟ ಅನಿವಾರ್ಯ: ಜಿವಿಎಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಭ್ರಷ್ಟಾಚಾರ, ಅನ್ಯಾಯ ಮತ್ತು ಅಕ್ರಮ ತೀವ್ರವಾಗಿ ವ್ಯಾಪಿಸಿದ್ದು, ಇದಕ್ಕೆ ಪ್ರತಿರೋಧ ಒಡ್ಡಲು ಹೋರಾಟ ಅನಿವಾರ್ಯವಾಗಿದೆ. ಭ್ರಷ್ಟಾಚಾರ ವಿರುದ್ಧ ತಕ್ಕ ಉತ್ತರ ನೀಡದಿದ್ದರೆ, ಬಡವರು ಮತ್ತು ಜನಸಾಮಾನ್ಯರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಆತಂಕ ವ್ಯಕ್ತಪಡಿಸಿದರು.ನಗರದ ಜಿಲ್ಲಾ ಗ್ರಂಥಾಲಯದ ಎದುರು ಬುಧವಾರ ಆಯೋಜಿಸಲಾಗಿದ್ದ ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಈಚಿನ ದಿನಗಳಲ್ಲಿ ಭ್ರಷ್ಟಾಚಾರ ಸಾಮಾನ್ಯ ವಿಷಯವಾಗಿದ್ದು, ಯಾರೂ ಸಹ ಪ್ರತಿಭಟನೆ ಮಾಡುತ್ತಿಲ್ಲ. ಪ್ರತಿರೋಧ ಕೂಡ ಒಡ್ಡುತ್ತಿಲ್ಲ’ ಎಂದರು. ‘ಕೇಂದ್ರ ಸರ್ಕಾರದಲ್ಲಿ ಭ್ರಷ್ಟಾಚಾರ, ಅನ್ಯಾಯ ಮತ್ತು ಅಕ್ರಮ ಹೆಚ್ಚಲು ಪ್ರಧಾನಿ  ಕಾರಣಕರ್ತರಾದರೆ, ರಾಜ್ಯ ಸರ್ಕಾರದಲ್ಲಿ ಭೂಹಗರಣ ಮತ್ತು ಇತರ ಅಕ್ರಮಗಳಿಗೆ ಮುಖ್ಯಮಂತ್ರಿ ಕಾರಣ. ಮನಮೋಹನ್ ಸಿಂಗ್ ಅವರು ಸಂಪುಟದ ಸಚಿವರ ಮೇಲೆ ನಿಯಂತ್ರಣ ಸಾಧಿಸುವಲ್ಲಿ ವಿಫಲರಾದರೆ, ಯಡಿಯೂರಪ್ಪ ಸಚಿವರೊಡನೆ ಸ್ವತಃ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ. ಇಬ್ಬರೂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲು ಸಿದ್ಧರಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.‘ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ 64 ಕೋಟಿ ರೂಪಾಯಿ ಭ್ರಷ್ಟಾಚಾರ ಪ್ರಕರಣ ದೊಡ್ಡದಾಗಿ ಬಿಂಬಿಸಲಾಗಿತ್ತು. ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಗಿತ್ತು.ಈಚಿನ ದಿನಗಳಲ್ಲಿ ಲಕ್ಷ, ಕೋಟಿ ರೂಪಾಯಿ ಅವ್ಯವಹಾರ ನಡೆಯುತ್ತಿದ್ದರೂ ಮತ್ತು ಭ್ರಷ್ಟಾಚಾರದ ಕುರಿತು ಪುರಾವೆಗಳು ಸಿಗುತ್ತಿದ್ದರೂ ಅವುಗಳ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ಭಾರತ ತಂಡ ಕ್ರಿಕೆಟ್‌ನಲ್ಲಿ ವಿಶ್ವಕಪ್ ಗೆದ್ದರೆ, ಹಗಲು-ರಾತ್ರಿಯೆನ್ನದೇ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ. ಆದರೆ ಲಕ್ಷಾಂತರ ಕೋಟಿ ರೂಪಾಯಿಗಳಲ್ಲಿ ಅನ್ಯಾಯ, ಅಕ್ರಮಗಳು ನಡೆದರೂ ಯಾರೂ ಸಹ ಸಾಂಕೇತಿಕ ಪ್ರತಿಭಟನೆ ಮಾಡುವುದಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.‘ಬಿಜೆಪಿ ಮತ್ತು ಜೆಡಿಎಸ್‌ನವರು ಪರಸ್ಪರ ಹಗರಣ ಬಯಲು ಮಾಡುವಲ್ಲಿ, ಪ್ರಚಾರ ಗಿಟ್ಟಿಸುವಲ್ಲಿ ನಿರತರಾಗಿದ್ದಾರೆ ಹೊರತು ಜನಸಾಮಾನ್ಯರು, ಬಡವರ ಬಗ್ಗೆ ಅವರಿಗೆ ಕಾಳಜಿಯಿಲ್ಲ. ಹಗರಣಗಳ ವಿರುದ್ಧ ಹೋರಾಡುವ ಇಚ್ಛೆಯಿದ್ದರೆ, ಅವರು ಜನರನ್ನು ಸಂಘಟಿಸಬೇಕು, ಹೋರಾಟ ರೂಪಿಸಬೇಕು. ಇದ್ಯಾವುದನ್ನೂ ಮಾಡದೇ ಕೇವಲ ಪ್ರಚಾರ ಗಳಿಸುವ ಉದ್ದೇಶವಿದ್ದರೆ, ಯಾವ ಹೋರಾಟ  ಯಶಸ್ವಿ ಆಗುವುದಿಲ್ಲ’ ಎಂದು ಶ್ರೀರಾಮರೆಡ್ಡಿ ತಿಳಿಸಿದರು.ಜಿ.ಪಂ. ಉಪಾಧ್ಯಕ್ಷೆ ಬಿ.ಸಾವಿತ್ರಮ್ಮ ಮಾತನಾಡಿದರು. ಸಿಐಟಿಯು ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಗಂಗಪ್ಪ, ಕಾರ್ಯದರ್ಶಿ ಲಕ್ಷ್ಮಿದೇವಮ್ಮ, ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಗಂಗರೆಡ್ಡಿ, ಕಾರ್ಯದರ್ಶಿ ಗೋಪಿನಾಥ್, ಸಿಐಟಿಯು ಗ್ರಾ.ಪಂ.ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಜರೀನಾಬಿ, ಕಾರ್ಯದರ್ಶಿ ಮಧುಲತಾ ಉಪಸ್ಥಿತರಿದ್ದರು.19ಕ್ಕೆ ಮುತ್ತಿಗೆ

ಜಾಥಾದ ಅಂಗವಾಗಿ ಸಿಪಿಎಂ ಮತ್ತು ಸಾಮೂಹಿಕ ಸಂಘಟನೆಗಳು ಇದೇ ತಿಂಗಳ 19ರಂದು ತಾಲ್ಲೂಕು ಕಚೇರಿಗಳಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ.   ಕಚೇರಿಗಳಿಗೆ ಬೀಗ ಜಡಿಯುವ ಮೂಲಕ ಪ್ರತಿಭಟನೆ ನಡೆಸಲಿದ್ದಾರೆ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.