ಭ್ರಷ್ಟಾಚಾರ ಆರೋಪದಿಂದ ವೀರಭದ್ರ ಸಿಂಗ್ ಖುಲಾಸೆ

7

ಭ್ರಷ್ಟಾಚಾರ ಆರೋಪದಿಂದ ವೀರಭದ್ರ ಸಿಂಗ್ ಖುಲಾಸೆ

Published:
Updated:

ಶಿಮ್ಲಾ (ಪಿಟಿಐ): ಹಿಮಾಚಲ ಪ್ರದೇಶದ ನಿಯೋಜಿತ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರನ್ನು ಇಲ್ಲಿನ ನ್ಯಾಯಾಲಯ ಭ್ರಷ್ಟಾಚಾರ ಆರೋಪದಿಂದ ಸೋಮವಾರ ಖುಲಾಸೆಗೊಳಿಸಿದೆ.ರಾಜ್ಯದ ಮುಖ್ಯಮಂತ್ರಿಯಾಗಿ ಸತತ ಆರನೇ ಬಾರಿಗೆ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಲಿರುವ ಸಿಂಗ್ ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.`ವೀರಭದ್ರ ಸಿಂಗ್ ವಿರುದ್ಧದ ಭ್ರಷ್ಟಾಚಾರ ಮತ್ತು ಒಳಸಂಚಿಗೆ ಸಂಬಂಧಿಸಿದ ಆರೋಪದ ವಿರುದ್ಧ ಸರಿಯಾದ ಸಾಕ್ಷ್ಯ ಇರದ ಕಾರಣ ಅವರನ್ನು ಖುಲಾಸೆಗೊಳಿಸಲಾಗಿದೆ' ಎಂದು ವಿಶೇಷ ನ್ಯಾಯಾಧೀಶ ಬಿ.ಎಲ್. ಸೋನಿ ತಿಳಿಸಿದ್ದಾರೆ.ನೂತನ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಚರ್ಚಿಸಲು 78 ವರ್ಷದ ಸಿಂಗ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ನ್ಯಾಯಾಲಯಕ್ಕೆ ಬಂದಿದ್ದರು. ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಕಿಕ್ಕಿರಿದು ಜನ ಸೇರಿದ್ದರು.ರಾಜ್ಯದಲ್ಲಿ ಬಂಡವಾಳ ಹೂಡಲು ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಐಎಎಸ್ ಅಧಿಕಾರಿ ಮೊಹಿಂದರ್ ಲಾಲ್ ಮತ್ತು ಕೆಲವು ಉದ್ಯಮಿಗಳೊಂದಿಗೆ ವೀರಭದ್ರ ಸಿಂಗ್ ಮತ್ತು ಅವರ ಪತ್ನಿ ನಡೆಸಿದ ಸಂಭಾಷಣೆಯ ಸಿ.ಡಿ ಆಧಾರವಾಗಿಟ್ಟುಕೊಂಡು ಸಿಂಗ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಲಾಗಿತ್ತು.23 ವರ್ಷ ಹಿಂದಿನ ಈ ಪ್ರಕರಣದ ವಿಚಾರಣೆ ಸೆಪ್ಟೆಂಬರ್‌ನಲ್ಲಿ ಆರಂಭಿಸಲಾಗಿತ್ತು. ಸಿಂಗ್ ವಿರುದ್ಧ ನ್ಯಾಯಾಲಯವು ಜೂನ್ 25ರಂದು ಭ್ರಷ್ಟಾಚಾರ ಮತ್ತು ಒಳಸಂಚಿಗೆ ಸಂಬಂಧಿಸಿದಂತೆ ದೋಷಾರೋಪ ಮಾಡಿತ್ತು. ಇದರಿಂದಾಗಿ ಕೇಂದ್ರ ಉಕ್ಕು ಖಾತೆ ಸಚಿವ ಸ್ಥಾನಕ್ಕೆ ವೀರಭದ್ರ ಸಿಂಗ್ ರಾಜೀನಾಮೆ ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry