ಭ್ರಷ್ಟಾಚಾರ ತಡೆಗೆ ಎಚ್ಚರ ವಹಿಸಿ

7

ಭ್ರಷ್ಟಾಚಾರ ತಡೆಗೆ ಎಚ್ಚರ ವಹಿಸಿ

Published:
Updated:

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಭ್ರಷ್ಟಾಚಾರ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳುವಂತೆ ಕೋರಿ ಪತ್ರ ಬರೆದಿರುವ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಎಡಿಜಿಪಿ), ಈ ಮೂಲಕ ಬಿಬಿಎಂಪಿ ಆಡಳಿತಕ್ಕೆ ಬಿಸಿ ಮುಟ್ಟಿಸಿದ್ದಾರೆ.ಹಿಂದಿನ ಎರಡು ವರ್ಷಗಳ ಅವಧಿಯಲ್ಲಿ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣಗಳಲ್ಲಿ ಬಿಬಿಎಂಪಿ ನೌಕರರು ಮತ್ತು ಜನಪ್ರತಿನಿಧಿಗಳ ಪಾಲು ಹೆಚ್ಚಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತದ ಎಡಿಜಿಪಿ ಎಚ್.ಎನ್.ಸತ್ಯನಾರಾಯಣ ರಾವ್ ಈ ಪತ್ರ ರವಾನಿಸಿದ್ದಾರೆ. ಕಾನೂನಿನ ಅಡಿಯಲ್ಲಿ ಅಧಿಕಾರಯುತವಾಗಿ ಇಂತಹ ನಿರ್ದೇಶನ ನೀಡಲು ಅವಕಾಶ ಇಲ್ಲದಿದ್ದರೂ, ಭ್ರಷ್ಟಾಚಾರ ನಿಯಂತ್ರಣಕ್ಕೆ ಪೂರಕವಾಗಿ ಈ ಕ್ರಮ ಕೈಗೊಂಡಿದ್ದಾರೆ. ಹತ್ತು ದಿನಗಳ ಹಿಂದಷ್ಟೇ ಈ ಪತ್ರ ಪಾಲಿಕೆಗೆ ರವಾನೆಯಾಗಿದೆ.ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದು ಮತ್ತು ಲಂಚ ಪಡೆದ ಆರೋಪಗಳಿಗೆ ಸಂಬಂಧಿಸಿದಂತೆ 2010ರಲ್ಲಿ ಲೋಕಾಯುಕ್ತ ಪೊಲೀಸರು 70 ಪ್ರಕರಣ ದಾಖಲಿಸಿದ್ದರು. ಈ ಪೈಕಿ ಏಳು ಪಾಲಿಕೆಯ ವ್ಯಾಪ್ತಿಯಲ್ಲಿವೆ. 2011ರಲ್ಲಿ ಒಟ್ಟು 74 ಪ್ರಕರಣಗಳನ್ನು ದಾಖಲಿಸಿದ್ದು, 18 ಬಿಬಿಎಂಪಿಗೆ ಸಂಬಂಧಿಸಿವೆ. ಪಾಲಿಕೆ ಸದಸ್ಯರಾದ ಕಟ್ಟಾ ಜಗದೀಶ್ ಮತ್ತು ಗೋವಿಂದರಾಜು ಅವರ ಬಂಧನದ ಪ್ರಕರಣಗಳೂ ಇದರಲ್ಲಿ ಸೇರಿವೆ.ಪಾಲಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಆರೋಪ ಹೆಚ್ಚುತ್ತಿರುವ ಕಾರಣದಿಂದ ಲೋಕಾಯುಕ್ತ ಪೊಲೀಸರು ಪತ್ರ ಬರೆದು ಎಚ್ಚರಿಸಿದ್ದಾರೆ. ಪಾಲಿಕೆಯ ಹಿರಿಯ ಮತ್ತು ಕೆಳಹಂತದ ಅಧಿಕಾರಿಗಳ ಮಟ್ಟದಲ್ಲಿ ಈ ಕುರಿತು ತಿಳಿವಳಿಕೆ ನೀಡುವಂತೆ ಸೂಚಿಸಿದ್ದಾರೆ. ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿ ಹಾಗೂ ಬಿಗಿಯಾದ ಮೇಲುಸ್ತುವಾರಿ ತರಬೇಕು ಎಂದು ಸಲಹೆ ಮಾಡಿದ್ದಾರೆ.ಎರಡೂ ವರ್ಷಗಳಲ್ಲಿ ಅತಿಹೆಚ್ಚು ಲಂಚ ಪ್ರಕರಣಗಳು ದಾಖಲಾದ ಇಲಾಖೆಗಳಲ್ಲಿ ಬಿಬಿಎಂಪಿ ಸೇರಿದೆ. ಎರಡೂ ವರ್ಷಗಳಲ್ಲಿ ಸಿಕ್ಕಿಬಿದ್ದ 18 ಮಂದಿಯ ಪೈಕಿ 13 ಜನರು ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂಬ ಕಾರಣದ ಅಡಿಯಲ್ಲಿ ಬಹುತೇಕ ಆರೋಪಿಗಳು ಆಶ್ರಯ ಪಡೆದಿದ್ದಾರೆ.ಲೋಕಾಯುಕ್ತ ಪೊಲೀಸರ ಪತ್ರ ಕುರಿತು ಪಾಲಿಕೆಯು ಆಯುಕ್ತರನ್ನು ಸಂಪರ್ಕಿಸಿದಾಗ, `ಪತ್ರ ಬಿಬಿಎಂಪಿ ಆಡಳಿತ ವಿಭಾಗದಲ್ಲಿ ಇರಬಹುದು. ಇನ್ನೂ ನನಗೆ ತಲುಪಿಲ್ಲ. ಪತ್ರ ಕೈಸೇರಿದ ಬಳಿಕ ಪರಿಶೀಲನೆ ನಡೆಸಲಾಗುವುದು~ ಎಂದರು.ಪತ್ರ ತಲುಪಿದೆ?: ಆದರೆ ಪಾಲಿಕೆಯ ಮೂಲಗಳ ಪ್ರಕಾರ ಫೆಬ್ರುವರಿ 15ರಂದೇ ಬಿಬಿಎಂಪಿ ಆಯುಕ್ತ ಎಂ.ಕೆ.ಶಂಕರಲಿಂಗೇ ಗೌಡ  ಅವರಿಗೆ ಲೋಕಾಯುಕ್ತ ಎಡಿಜಿಪಿ ಪತ್ರ ತಲುಪಿದೆ. ಪತ್ರದಲ್ಲಿನ ಶಿಫಾರಸಿನಂತೆ, ಪಾಲಿಕೆಯ ಅಧಿಕಾರಿಗಳ ವಿರುದ್ಧ ದಾಖಲಾಗುವ ದೂರುಗಳ ಪರಿಶೀಲನೆಗೆ ವಿಶೇಷ ಘಟಕವೊಂದನ್ನು ಅಸ್ತಿತ್ವಕ್ಕೆ ತರುವ ಚಿಂತನೆ ನಡೆದಿದೆ. ಹಿರಿಯ ಅಧಿಕಾರಿಯೊಬ್ಬರಿಗೆ ಘಟಕದ ನೇತೃತ್ವ ನೀಡಿ, ಅಗತ್ಯ ಸಂದರ್ಭಗಳಲ್ಲಿ ತನಿಖೆ ನಡೆಸುವ ಅಧಿಕಾರವನ್ನೂ ನೀಡುವ ಪ್ರಸ್ತಾವವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry