ಶುಕ್ರವಾರ, ಏಪ್ರಿಲ್ 23, 2021
21 °C

ಭ್ರಷ್ಟಾಚಾರ ತಡೆಗೆ ಕಠಿಣ ಕಾನೂನು ಜಾರಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭ್ರಷ್ಟಾಚಾರ ತಡೆಗೆ ಕಠಿಣ ಕಾನೂನು ಜಾರಿ ಅಗತ್ಯ

ಮಣಿಪಾಲ (ಉಡುಪಿ): ನಮ್ಮ ರಾಷ್ಟ್ರದಲ್ಲಿ ವ್ಯಾಪಕವಾಗಿ ಹರಡಿಕೊಂಡಿರುವ ಭ್ರಷ್ಟಾಚಾರ ತಡೆಗೆ ಕಠಿಣವಾದ ಕಾನೂನು ಜಾರಿಗೆ ತರಬೇಕು ಹಾಗೂ ಜನ ಲೋಕಪಾಲ್ ಮಸೂದೆ ಜಾರಿಯಾಗಬೇಕು ಎಂದು ಯೋಗಗುರು ಬಾಬಾ ರಾಮದೇವ್ ಇಲ್ಲಿ ಆಗ್ರಹಿಸಿದರು.ಮಣಿಪಾಲ ಕೆಎಂಸಿ ಗ್ರೀನ್ಸ್ ಮೈದಾನದಲ್ಲಿ ಶನಿವಾರ ಸಂಜೆ ವೈದ್ಯಕೀಯ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಸಾರ್ವಜನಿಕರಿಗಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಯೋಗದ ಪ್ರಯೋಜನ ಹಾಗೂ ಭ್ರಷ್ಟಾಚಾರದ ವಿಚಾರವಾಗಿ ಮಾತನಾಡಿದರು.ದಿನಕ್ಕೆ ಐದು ಸಾವಿರ ಕೋಟಿ ರೂಪಾಯಿ ನಮ್ಮ ದೇಶದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಭ್ರಷ್ಟಾಚಾರಿಗಳು ಸಂಪತ್ತನ್ನು ಲೂಟಿ ಮಾಡಿ ವಿದೇಶಿ ಬ್ಯಾಂಕ್‌ಗಳಲ್ಲಿ ಇಡುತ್ತಿದ್ದಾರೆ. ಅವರಿಗೆ ರಾಜಕೀಯ ಅಧಿಕಾರಿವಿದೆ. ಅವರೇ ಕಾನೂನು ರಚನೆ ಮಾಡುವವರೂ ಆಗಿದ್ದಾರೆ. ಹೀಗಾಗಿ ಇವುಗಳನ್ನೆಲ್ಲ ಮಟ್ಟಹಾಕುವಂಥ ಬಲಿಷ್ಠ ಕಾನೂನು ಜಾರಿಗೆ ಬರಬೇಕು ಎಂದು ಅವರು ಹೇಳಿದರು.ಜನ ಲೋಕಪಾಲ ಮಸೂದೆ ಲೋಕಾಯುಕ್ತದಂತೆ ದುರ್ಬಲವಾಗಬಾರದು. ಕೇವಲ ವರದಿ ನೀಡುವುದಕ್ಕಿಂತ ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವಂತಾಗಬೇಕು. ಭ್ರಷ್ಟಾಚಾರ ಮಾಡುವ ವ್ಯಕ್ತಿಯಿಂದ ಸಂಪತ್ತನ್ನು ವಸೂಲಿ ಮಾಡಿ ಆತನನ್ನು ನೇಣಿಗೆ ಹಾಕಬೇಕು ಎಂದು ಅವರು ಹೇಳಿದರು. ವಿದೇಶದಲ್ಲಿರುವ ಕಪ್ಪು ಹಣ ಭಾರತಕ್ಕೆ ಮರಳಿ ತರಬೇಕು. ಇಲ್ಲವೇ ವಿದೇಶದಲ್ಲಿನ ಹಣವನ್ನು ಸಂಪೂರ್ಣವಾಗಿ ರಾಷ್ಟ್ರೀಯ ಸಂಪತ್ತು ಎಂದು ಘೋಷಣೆ ಮಾಡಿ ಸರ್ಕಾರ ಆದೇಶಹೊರಡಿಸಬೇಕು. ಹಾಗೆ ಮಾಡಿದರೆ ಮಾತ್ರವೇ ಭಾರತ ವಿಶ್ವದಲ್ಲಿಯೇ ಆರ್ಥಿಕವಾಗಿ ಬಲಿಷ್ಠರಾಷ್ಟ್ರವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.ಯೋಗ ಹಾಗೂ ಅದರೊಂದಿಗೆ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವತ್ತ ರಾಷ್ಟ್ರವ್ಯಾಪಿ ಪರ್ಯಟನೆ ಮಾಡುತ್ತಿದ್ದು ಈಗಾಗಲೇ 70 ಸಾವಿರ ಕಿಮೀ ಸುತ್ತಿಯಾಗಿದೆ. ಇನ್ನು 30 ಸಾವಿರ ಕಿಮೀ ಪರ್ಯಟನೆ ಮಾಡಿ ಜೂನ್ 2ರಂದು ನವದೆಹಲಿ ಬೃಹತ್ ರ್ಯಾಲಿ ನಡೆಸಿ ಪ್ರಧಾನಿಗೆ ಪತ್ರವೊಂದನ್ನು ಸಲ್ಲಿಸಲಿದ್ದೇವೆ ಎಂದರು.ಯೋಗವೊಂದೇ ಎಲ್ಲದಕ್ಕೂ ಪರಿಹಾರ: ವಿಶ್ವಕ್ಕೆ ಯೋಗವನ್ನು ನೀಡಿದ ದೇಶ ನಮ್ಮದು. ಯೋಗದಿಂದ ಮಾತ್ರವೇ ಎಲ್ಲದಕ್ಕೂ ಪರಿಹಾರವಿದೆ. ಇದನ್ನು ಯಾವುದೇ ಸಂಶೋಧನಾ ಗ್ರಂಥವನ್ನು ಓದಿಕೊಂಡು ತಾವು ಹೇಳುತ್ತಿಲ್ಲ, ಬದಲಿಗೆ ಅದನ್ನು ಕಾರ್ಯಗತ ಮಾಡಿಕೊಂಡು ಅನುಷ್ಠಾನ ಮಾಡುತ್ತ ಯೋಗವನ್ನು ಪ್ರಚಾರ ಮಾಡುತ್ತಿರುವುದಾಗಿ ರಾಮದೇವ್ ಹೇಳಿದರು.‘ನಾನು ಯೋಗ, ಪ್ರಾಣಾಯಾಮವನ್ನು ವೈಜ್ಞಾನಿಕವಾಗಿ ಪ್ರಚಾರ ಮಾಡುತ್ತಿದ್ದೇನೆ. ಯೋಗದಿಂದ ಒತ್ತಡ, ಕಾಯಿಲೆ ಎಲ್ಲವನ್ನೂ ಗುಣಮಾಡಬಹುದು. ಆ ಬಗ್ಗೆ ಇಲ್ಲಿ ಸೇರಿರುವ ಯಾವುದೇ ವೈದ್ಯರಾಗಲಿ, ಪ್ರೊಫೆಸರ್‌ಗಳಾಗಲಿ ಯಾವುದೇ ಸಂದೇಹಗಳಿದ್ದರೆ ಪ್ರಶ್ನಿಸಬಹುದು’ ಎಂದು ಸವಾಲು ಹಾಕಿದರು. ಆದರೆ ಯಾರೊಬ್ಬರೂ ಅವರಿಗೆ ಸವಾಲು ಹಾಕುವ ಪ್ರಶ್ನೆಗಳನ್ನು ಕೇಳಲಿಲ್ಲ.‘ಆಧುನಿಕ ವೈದ್ಯಪದ್ಧತಿ ಯಾವುದೇ ರೋಗವನ್ನು ನಿರ್ವಹಣೆ ಮಾಡುತ್ತದೆ. ಆದರೆ ಯೋಗ ಅದನ್ನು ಗುಣಮಾಡುತ್ತದೆ’ ಎಂದು ಹೇಳಿದ ಅವರು ‘ನಿರಂತರವಾಗಿ ಯೋಗ, ಪ್ರಾಣಾಯಾಮ ಮಾಡುವ ವ್ಯಕ್ತಿ ಮೃತ್ಯುಂಜಯನಾಗುತ್ತಾನೆ’ ಎಂದು ಹೇಳಿದರು. ಸಂವಾದದುದ್ದಕ್ಕೂ ಪ್ರಾಣಾಯಾಮದ ವಿವಿಧ ಹಂತಗಳನ್ನು ವಿವರಿಸುತ್ತ ಸಾಗಿದ ರಾಮದೇವ್ ‘ವೈದ್ಯರು ಅಮೆರಿಕ ಹೇಳಿದ ಮಾತನ್ನು ನಂಬುತ್ತಾರೆ. ಆದರೆ ಭಾರತದ ಪ್ರಾಚೀನ ಯೋಗಶಾಸ್ತ್ರ ಹೇಳುವುದನ್ನು ನಿರ್ಲಕ್ಷ್ಯ ಮಾಡುತ್ತಾರೆ’ ಎಂದು ತುಸು ಲೇವಡಿ ಮಾಡಿದರು.

ಮಣಿಪಾಲ ವಿವಿ ಕುಲಪತಿ ಡಾ.ರಾಮನಾರಾಯಣ್, ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.