ಭ್ರಷ್ಟಾಚಾರ ತೊಲಗಿಸಲು ಕಲಾಂ ಸಲಹೆ

7

ಭ್ರಷ್ಟಾಚಾರ ತೊಲಗಿಸಲು ಕಲಾಂ ಸಲಹೆ

Published:
Updated:

ಬೆಳಗಾವಿ: ‘ಭ್ರಷ್ಟಾಚಾರ ಮನೆ, ಮನೆಗಳಿಗೆ ವ್ಯಾಪಿಸಿಕೊಳ್ಳುತ್ತಿದ್ದು, ನಾಡಿನ ಶೇ 40ರಷ್ಟು ಮನೆಗಳು ಭ್ರಷ್ಟಾಚಾರದ ಕೂಪಗಳಾಗಿವೆ. ಭ್ರಷ್ಟಾಚಾರ ಬಿಡುವಂತೆ ಪ್ರತಿಯೊಬ್ಬ ಮಗು ಪಾಲಕರಲ್ಲಿ ಪಟ್ಟು ಹಿಡಿಯುವ ಮೂಲಕ ಅದನ್ನು ಹೊಡೆದೋಡಿಸಬೇಕು. ಭವ್ಯ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಪಣ ತೊಡೋಣ’ ಎಂದು ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ಸೋಮವಾರ ಇಲ್ಲಿ ಮನವಿ ಮಾಡಿದರು.ನಗರದ ರಾಮಕೃಷ್ಣ ಮಿಷನ್‌ಆಶ್ರಮದಲ್ಲಿ ಏರ್ಪಡಿಸಿದ್ದ ಯುವ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ‘ಈಚಿನ ವರ್ಷಗಳಲ್ಲಿ ನಮ್ಮ ದೇಶ ಪ್ರಗತಿಯ ಪಥದಲ್ಲಿದೆ. ಆದರೆ ಭ್ರಷ್ಟಾಚಾರ ಅದಕ್ಕೆ ಕಳಂಕವಾಗಿದೆ. ಭ್ರಷ್ಟಾಚಾರವನ್ನು ಬದಿಗೊತ್ತಿದರೆ ನಾವು ಇಡೀ ಜಗತ್ತಿಗೇ ಮಾದರಿಯಾಗುತ್ತೇವೆ’ ಎಂದರು.‘ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ನಮ್ಮಬಗ್ಗೆಯೇ ನಮಗೆ ಅಳುಕಿತ್ತು. ಅದರಲ್ಲೂ ಯುವ ಜನರಿಗೆ ಆತ್ಮವಿಶ್ವಾಸ ಇರಲಿಲ್ಲ. ಜಗತ್ತಿನ ಇತರೇ ರಾಷ್ಟ್ರಗಳನ್ನು ಗಮನಿಸಿದರೆ ಕೀಳರಿಮೆ ಅವರನ್ನು ಕಾಡುತ್ತಿತ್ತು. ಪ್ರಸ್ತುತ ಪರಿಸ್ಥಿತಿ ಬದಲಾಗಿದೆ. ಪ್ರತಿಯೊಬ್ಬರಲ್ಲೂ ಆತ್ಮವಿಶ್ವಾಸ ಮೂಡಿದೆ. ಮಾಡಿ ತೋರಿಸುತ್ತೇನೆ ಎಂಬ ಮನೋಭಾವ ನಮ್ಮ ಯುವ ಜನರಲ್ಲಿ ಬೆಳೆಯುತ್ತಿದೆ. 2020ರ ಹೊತ್ತಿಗೆ ಜಗತ್ತಿನಲ್ಲೇ ನಮ್ಮ ದೇಶ ಸಬಲ ಆರ್ಥಿಕ ಶಕ್ತಿಯಾಗಲಿದೆ’ ಎಂದು ಅಬ್ದುಲ್ ಕಲಾಂ ವಿಶ್ವಾಸ ವ್ಯಕ್ತಪಡಿಸಿದರು.ಯುವ ಜನತೆ ದೇಶಕ್ಕಾಗಿ ಏನು ಮಾಡಬಹುದು? ಎಂಬುದನ್ನು ವಿವರಿಸಿದ ಅವರು, ‘ಗ್ರಾಮೀಣ ಜನರಿಗೆ, ನಿರಕ್ಷರಿಗೆ ಮಾರ್ಗದರ್ಶನ ಮಾಡಿ, ವರ್ಷಕ್ಕೆ ಕನಿಷ್ಠ ಐದು ಗಿಡಗಳನ್ನು ನೆಟ್ಟು, ಪೋಷಿಸುವ ನಿರ್ಧಾರ ತೆಗೆದುಕೊಳ್ಳಬೇಕು. ಹಿರಿಯರನ್ನು ಗೌರವಿಸುವ ಹಾಗೂ ಪ್ರತಿನಿತ್ಯ ಅವರೊಂದಿಗೆ ಅರ್ಧ ಗಂಟೆಯಾದರೂ ಕಳೆಯುವ ಮನಸ್ಸು ಮಾಡಿದರೆ ನಮ್ಮ ಬದುಕು ಸಾರ್ಥಕವಾಗುತ್ತದೆ’ ಎಂದು ಅವರು ತಿಳಿಸಿದರು.ವೇದಿಕೆಯಲ್ಲಿ ಚೆನ್ನೈ ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ಗೌತಮಾನಂದಜೀ ಮಹಾರಾಜ, ಖ್ಯಾತ ತರಬೇತುದಾರ ವಿಜಯ ಮೆನನ್, ಬೆಳಗಾವಿ ಮಠದ ಕಾರ್ಯದರ್ಶಿ ರಾಘವೇಶಾನಂದ ಮಹಾರಾಜ ಹಾಜರಿದ್ದರು.

   

  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry