ಮಂಗಳವಾರ, ಮೇ 11, 2021
26 °C

ಭ್ರಷ್ಟಾಚಾರ ನಿಯಂತ್ರಣಕ್ಕೆ ಹೊಸ ನೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅಧಿಕಾರಿಗಳ ವಲಯದಲ್ಲಿ ನಡೆಯುವ ಭ್ರಷ್ಟಾಚಾರವನ್ನು ಮಟ್ಟಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲವು ನೀತಿ ನಿಯಮಗಳನ್ನು ಪ್ರಕಟಿಸಿದ್ದು, ಭ್ರಷ್ಟ ಅಧಿಕಾರಿಗಳು ನಿವೃತ್ತಿ ಹೊಂದಿದರೂ ಸಹ ಅವರ ವಿರುದ್ಧ ಪ್ರಕರಣವನ್ನು ಮುಂದುವರೆಸಿ, ಕನಿಷ್ಠ ಶಿಕ್ಷೆಯಂತೆ ಪಿಂಚಣಿಯಲ್ಲಿ ಶೇ 10ರಷ್ಟು ಕಡಿತ ಮಾಡುವ ಚಿಂತನೆ ನಡೆಸಿದೆ.ಪ್ರಸ್ತುತ ಭ್ರಷ್ಟ ಅಧಿಕಾರಿಗಳು ಎಂದು ಕಂಡು ಬಂದರೆ ಅಂತಹವರನ್ನು ಕಡ್ಡಾಯ ನಿವೃತ್ತಿಗೆ ಒಳಪಡಿಸಲಾಗುತ್ತಿದೆ. ಆದರೆ ಪಿಂಚಿಣಿಯ ಎಲ್ಲಾ ಸೌಲಭ್ಯವನ್ನೂ ನೀಡಲಾಗುತ್ತಿದೆ. ಆದರೆ ಇನ್ನು ಮುಂದೆ ಇಂತಹ ಭ್ರಷ್ಟ ಅಧಿಕಾರಿಗಳನ್ನು ಗರಿಷ್ಠ ಶೇ 20ರಷ್ಟು ಪಿಂಚಣಿ ಕಡಿತಕ್ಕೆ ಒಳಪಡಿಸಲಾಗುತ್ತದೆ.ಭ್ರಷ್ಟಾಚಾರ ನಿಗ್ರಹಕ್ಕೆ ಸಂಬಂಧಿಸಿದಂತೆ ನೀತಿ ರೂಪಿಸಲು ಹಣಕಾಸು ಸಚಿವ ಪ್ರಣವ್ ಮುಖರ್ಜಿ ನೇತೃತ್ವದಲ್ಲಿ ರಚಿಸಿದ್ದ ಸಚಿವರ ತಂಡದ ಮೊದಲ ವರದಿ ಆಧರಿಸಿ ಹೊಸ ಕಾನೂನನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.ಭ್ರಷ್ಟಾಚಾರ ನಿಯಂತ್ರಿಸಲು ಭ್ರಷ್ಟ ಅಧಿಕಾರಿಗಳ ವಿರುದ್ಧ ತ್ವರಿತಗತಿ ನ್ಯಾಯಾಲಯದಲ್ಲಿ ನಡೆಯುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿ ಅಧಿಕಾರಿಗಳ ಕೆಲವು ಸವಲತ್ತುಗಳನ್ನು ಕಡಿತಗೊಳಿಸಲಾಗುತ್ತದೆ.ಸಚಿವರ ಸಮಿತಿ ಶಿಫಾರಸಿನಂತೆ ಅಧಿಕಾರಿಗಳ ಭ್ರಷ್ಟಾಚಾರ ನಿಯಂತ್ರಿಸಲು ಹಲವಾರು ಮಾನದಂಡಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಪ್ರತಿಭಟನೆ ನಂತರ ಸರ್ಕಾರ ಅಧಿಕಾರಿಗಳ ಮಟ್ಟದ ಭ್ರಷ್ಟಾಚಾರ ನಿಯಂತ್ರಿಸಲು ಶೀಘ್ರವಾಗಿಯೇ ಕಾನೂನು ರೂಪಿಸಲು ಮುಂದಾಗಿದೆ.ಪ್ರಸ್ತುತ ನಿವೃತ್ತಿ ಅಂಚಿನಲ್ಲಿನ ಅಧಿಕಾರಿ ಭ್ರಷ್ಟಾಚಾರದಲ್ಲಿ ಸಿಲುಕಿದರೆ, ಸುಲಭವಾಗಿ ತಪ್ಪಿಸಿಕೊಳ್ಳಲು ಅವಕಾಶ ಇತ್ತು. ಈಗ ಸರ್ಕಾರ ರೂಪಿಸುತ್ತಿರುವ ಮಾನದಂಡಗಳ ಪ್ರಕಾರ ಅಂತಹ ಅಧಿಕಾರಿಗಳು ಸಣ್ಣ ದಂಡದೊಂದಿಗೆ ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ಸಣ್ಣ ಪ್ರಮಾಣದ ಭ್ರಷ್ಟಾಚಾರ ಎಸಗಿ ನಿವೃತ್ತರಾದ ಅಧಿಕಾರಿಗಳ ಪಿಂಚಣೆಯ ಶೇ 10ರಷ್ಟನ್ನು ಐದು ವರ್ಷಗಳ ವರೆಗೆ ಕಡಿತ ಮಾಡಲಾಗುವುದು. ದೊಡ್ಡ ಪ್ರಮಾಣದ ಭ್ರಷ್ಟಾಚಾರ ಪ್ರಕರಣದಲ್ಲಿ ಅಂತಹ ಅಧಿಕಾರಿಗಳ ಪಿಂಚಣಿಯನ್ನು ಜೀವನ ಪರ್ಯಂತ ಕಡಿತಗೊಳಿಸಲು ಸಚಿವರ ಸಮಿತಿ ಶಿಫಾರಸು ಮಾಡಿದೆ.ಅಲ್ಲದೆ ಭ್ರಷ್ಟ ಅಧಿಕಾರಿಗಳ ವಿರುದ್ಧ ನಡೆಯುವ ಇಲಾಖೆ ತನಿಖೆಯನ್ನು ತೀವ್ರಗೊಳಿಸಲು ಸಹ ಸಚಿವರ ಸಮಿತಿ ಶಿಫಾರಸು ಮಾಡಿದೆ. ಪ್ರಮುಖ ಪ್ರಕರಣಗಳಲ್ಲಿ ಇಲಾಖೆ ತನಿಖೆಯ ಜವಾಬ್ದಾರಿ ವಹಿಸಲು ಅಧಿಕಾರಿಗಳನ್ನು ನೇಮಿಸುವಂತೆ ಜಾಗೃತ ಆಯೋಗದ ನೆರವು ಕೇಳಬಹುದಾಗಿದ್ದು, ಜಾಗೃತ ಆಯೋಗ ನಿವೃತ್ತ ಅಧಿಕಾರಿಗಳನ್ನು ತನಿಖೆಗೆ ನಿಯೋಜನೆ ಮಾಡಬಹುದು.ಅಂತಹ ಅಧಿಕಾರಿಗಳ ವಿರುದ್ಧದ ಇಲಾಖೆ ತನಿಖೆ ವಿಳಂಬ ಆಗುವುದನ್ನು ತಪ್ಪಿಸುವ ಸಲುವಾಗಿ ಕೇವಲ ಮೂರು ತಿಂಗಳಿನಲ್ಲಿ ಇಂತಹ ತನಿಖೆಯನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ಅಂತಹ ವರದಿಯನ್ನು ಆಧರಿಸಿ ಸಂಬಂಧಿಸಿದ ಪ್ರಾಧಿಕಾರ ಮೂರು ತಿಂಗಳ ಒಳಗೆ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.