ಗುರುವಾರ , ನವೆಂಬರ್ 21, 2019
22 °C

`ಭ್ರಷ್ಟಾಚಾರ ಮುಕ್ತ ಚುನಾವಣೆಗೆ ಬಿಜೆಪಿ ನಿರ್ಧಾರ'

Published:
Updated:

ಶಿವಮೊಗ್ಗ: ಭ್ರಷ್ಟಾಚಾರ ಮುಕ್ತ ಚುನಾವಣೆ ನಡೆಸಲು ಬಿಜೆಪಿ ನಿರ್ಧರಿಸಿದ್ದು, ಕಾರ್ಯಕರ್ತರು ಮುಕ್ತ ಚುನಾವಣೆ ನಡೆಸಲು ಶ್ರಮಿಸುವರು ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಚುನಾವಣಾ ನಿರ್ವಹಣಾ ಸಮಿತಿ' ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಈಚೆಗೆ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಭ್ರಷ್ಟಾಚಾರ ಮುಕ್ತವಾಗಿ ಚುನಾವಣೆ ನಡೆಸುವಂತೆ ಸೂಚಿಸಿ, ಬಿಜೆಪಿ ಅಭ್ಯರ್ಥಿಗಳಿಂದ ಮುಚ್ಚಳಿಕೆ ಬರೆಸಿಕೊಂಡು ಮಾದರಿ ಆಗಿದ್ದಾರೆ. ಅದೇ ರೀತಿ ಜಿಲ್ಲೆಯ ವಿಧಾಸಭಾ ಚುನಾವಣೆಯನ್ನು ಭ್ರಷ್ಟಚಾರ ಮುಕ್ತವಾಗಿ ನಡೆಸಲು ತೀರ್ಮಾನಿಸಿದೆ ಎಂದು ತಿಳಿಸಿದರು. ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು, ಕೊನೆಯ ಕಾರ್ಯಕರ್ತರವರೆಗೂ ಸಂಪರ್ಕ ಸಾಧಿಸಲು ಚುನಾವಣಾ ನಿರ್ವಹಣಾ ಸಮಿತಿ ರಚಿಸಲಾಗಿದೆ. ಚುನಾವಣೆ ಎದುರಿಸಲು ಸಮಿತಿಯ ಸದಸ್ಯರಿಗೆ ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.ಈಗ ಪರಿಸ್ಥಿತಿ ಬದಲಾಗಿದ್ದು, ಬಿಜೆಪಿಯಿಂದ ಕೆಜೆಪಿ, ಬಿಎಸ್‌ಆರ್ ಎಂಬ ಎರಡು ತುಂಡುಗಳು ಹೊರಹೋಗಿವೆ. ಆದರೆ, ಕಾರ್ಯಕರ್ತರ ಗುಂಪು ಬಿಜೆಪಿಯಲ್ಲೇ ಇದೆ ಎಂದರು.ಯಡಿಯೂರಪ್ಪ ಈಗ ಹತಾಶರಾದಂತೆ ಕಂಡು ಬರುತ್ತಿದ್ದಾರೆ. ಅವರು ಬೆಳಿಗ್ಗೆ ಒಂದು ಹೇಳಿಕೆ ನೀಡಿದರೆ, ಸಂಜೆ ಮತ್ತೊಂದು ರೀತಿ ಮಾತನಾಡುತ್ತಿದ್ದು, ಯಾವ ಸ್ಥಾನಕ್ಕಾಗಿ ಬಿಜೆಪಿ ಬಿಟ್ಟು ಹೋದರೋ ಆ ಸ್ಥಾನ ಅವರಿಗೆ ಸಿಗುವುದಿಲ್ಲ ಎಂದು ಹೇಳಿದರು. ಹಿಂದೆಂದಿಗಿಂತ ಕಾರ್ಯಕರ್ತರು ದಕ್ಷತೆಯಿಂದ, ಚಾಣಾಕ್ಷತೆಯಿಂದ ಕಾರ್ಯ ನಿರ್ವಹಿಸಬೇಕಿದೆ. ಯಡಿಯೂರಪ್ಪ ನಮಗೆ ಇನ್ನಷ್ಟು ಸವಾಲುಗಳನ್ನು ಹಾಕಲಿ, ನಾವು ವಿಚಲಿತರಾಗುವುದಿಲ್ಲ. ಮತ್ತಷ್ಟು ಪ್ರಬಲರಾಗುತ್ತೇವೆ ಎಂದರು.ರಾಘವೇಂದ್ರ ಬಿಜೆಪಿಗೆ ಬರಲಿ: ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಅತ್ತ ಕೆಜೆಪಿಗೂ ಹೋಗಲಾರದೇ, ಇತ್ತ ಬಿಜೆಪಿಯಲ್ಲಿ ಇರಲಾರದೇ ಒದ್ದಾಡುತ್ತಿದ್ದಾರೆ. ಬಿಜೆಪಿ ಕಾರ್ಯಕ್ರಮಗಳಲ್ಲಿ ಹಾಜರಾಗದೇ,  ಕೆಜೆಪಿ ಸಮಾರಂಭಗಳಿಗೆ ನೇರವಾಗಿ ಭಾಗವಹಿಸಲು ಸಾಧ್ಯವಾಗದೇ ಮುಸುಕು ಮುಚ್ಚಿಕೊಂಡು ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಲೇವಡಿ ಮಾಡಿ ಅವರು, ರಾಘವೇಂದ್ರ ಬೇಕಾದರೆ ಬಿಜೆಪಿಯಲ್ಲೇ ಇರಲಿ ಎಂದು ವ್ಯಂಗ್ಯವಾಡಿದರು.ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ, ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿಯ 15 ವಿಭಾಗಗಳಿಗೆ ಪದಾಧಿಕಾರಿಗಳನ್ನು ಘೋಷಿಸಿದರು. ಕಾರ್ಯಕ್ರಮದಲ್ಲಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪದ್ಮನಾಭ ಭಟ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಸ್. ದತ್ತಾತ್ರಿ, `ಸೂಡಾ' ಮಾಜಿ ಅಧ್ಯಕ್ಷ ಕೆ. ಜ್ಞಾನೇಶ್ವರ್, ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ಎಚ್.ಸಿ. ಬಸವರಾಜಪ್ಪ, ಮುಖಂಡರಾದ ಶರಾವತಿ ಸಿ. ರಾವ್, ರಂಗೋಜಿ ರಾವ್, ಮಹದೇವಪ್ಪ, ಕಾರ್ಯದರ್ಶಿ ವಾಲೆ ಶಿವಕುಮಾರ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)