ಭ್ರಷ್ಟಾಚಾರ ಮುಕ್ತ ರಾಜ್ಯ ಅಸಾಧ್ಯ

7

ಭ್ರಷ್ಟಾಚಾರ ಮುಕ್ತ ರಾಜ್ಯ ಅಸಾಧ್ಯ

Published:
Updated:

ರಾಮನಗರ: `ಭ್ರಷ್ಟರಿಂದ ಭ್ರಷ್ಟ ಮುಕ್ತ ರಾಜ್ಯ ನಿರ್ಮಾಣ ಅಸಾಧ್ಯ. ಬಿಜೆಪಿ ಭ್ರಷ್ಟಾಚಾರಿಗಳಿಂದ ಕೂಡಿರುವ ಪಕ್ಷ. ಈ ಪಕ್ಷದ ಮುಖಂಡ ಅಡ್ವಾಣಿ ಭ್ರಷ್ಟಾಚಾ ರದ ವಿರುದ್ಧ  ಕೈಗೊಂಡಿರುವ ರಥಯಾತ್ರೆ, ಬೇಲಿಯೇ ಎದ್ದು ಹೊಲ ಮೇಯ್ದಂತೆ~ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಕೆಂಪರಾಜು ಅಭಿಪ್ರಾಯಪಟ್ಟರು.ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಚುನಾಯಿತ ಪ್ರತಿನಿಧಿಗಳೊಡನೆ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸಭೆ ನಡೆಸಿದ ಅವರು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಹಲವಾರು ಸಚಿವರು ಭ್ರಷ್ಟಾಚಾರದ ವಿವಿಧ ಹಗರಣಗಳಲ್ಲಿ ಜೈಲು ಪಾಲಾಗುತ್ತಿದ್ದಾರೆ. ಹೀಗಿರುವಾಗ ಬಿಜೆಪಿ ಮುಖಂಡರು ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ರಥಯಾತ್ರೆ ನಡೆಸುವುದರಲ್ಲಿ ಯಾವ ಅರ್ಥವಿದೆ ಎಂದು ಅವರು ವ್ಯಂಗ್ಯವಾಡಿದರು.ರಾಜ್ಯದಲ್ಲಿ ಅಡ್ವಾಣಿ ರಥಯಾತ್ರೆಯನ್ನು ಯುವ ಕಾಂಗ್ರೆಸ್ ವಿರೋಧಿಸಿದ್ದು, ಈ ಸಂಬಂಧ ಇದೇ 30ರಂದು ಹೋರಾಟ ನಡೆಸಲು ನಿರ್ಧರಿ ಸಲಾಗಿದೆ. ರಾಮನಗರದ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಅಂದು ಜಾಥಾ ನಡೆಯಲಿದೆ ಎಂದು ಅವರು ವಿವರಿಸಿದರು.ಅಧಿಕಾರ ಸ್ವೀಕಾರ: ನವೆಂಬರ್ 2ರಂದು ಬೆಂಗಳೂರಿನಲ್ಲಿ ರಾಜ್ಯದ ಯುವ ಕಾಂಗ್ರೆಸ್ ಅಧ್ಯಕ್ಷರ ಜತೆಗೆ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರ ಹಾಗೂ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರು ಪ್ರಮಾಣವಚನ ಸ್ವೀಕರಿಸುವರು. ಭ್ರಷ್ಟ ಬಿಜೆಪಿ ಸರ್ಕಾರವನ್ನು ಬುಡ ಸಹಿತ ತೆಗೆದು ಹಾಕುವ ಪಣವನ್ನು ಆ ಸಂದರ್ಭದಲ್ಲಿ ತೊಡಲಾಗುವುದು ಎಂದು ಅವರು ಪ್ರತಿಕ್ರಿಯಿಸಿದರು.ಮಾಸ್ಟರ್ ಕೋಚ್ ನೇಮಕ: ರಾಜ್ಯದಾದ್ಯಂತ ವಿವಿಧ ಹಂತಗಳಿಂದ ಆಯ್ಕೆ ಆಗಿರುವ ಯುವ ಕಾಂಗ್ರೆಸ್‌ನ ಪ್ರತಿನಿಧಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಸಲಹೆ ನೀಡುವ ಸಲುವಾಗಿ `ಮಾಸ್ಟರ್ ಕೋಚ್~ಗಳನ್ನು ನೇಮಕ ಆಗಲಿದೆ. ಪ್ರತಿ ಲೋಕಸಭಾ ವ್ಯಾಪ್ತಿಯಲ್ಲಿ ಈ ಸಂಬಂಧ ನೇಮಕಾತಿ ಆಗಲಿದ್ದು, ಈ ಸಂಬಂಧ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನವೆಂಬರ್ 5 ಮತ್ತು 6ರಂದು ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರಿಗೆ ನ. 9 ಮತ್ತು 10ರಂದು ಮತ್ತೊಂದು ಬಗೆಯ ಪರೀಕ್ಷೆ ನಡೆಯಲಿದೆ ಎಂದು ಅವರು ಹೇಳಿದರು.ಯುವ ಕಾಂಗ್ರೆಸ್‌ನ ಪದಾಧಿಕಾರಿಗಳಿಗೆ ತರಬೇತಿ ನೀಡುವ ಮಾಸ್ಟರ್ ಕೋಚ್‌ಗಳು ಕಾಂಗ್ರೆಸ್‌ನ ಇತಿಹಾಸ, ದೇಶದ ಸಂವಿಧಾನ ಮತ್ತು ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರಬೇಕಿದೆ. ಮಾಸ್ಟರ್ ಕೋಚ್‌ಗಳಾಗಿ ನೇಮಕಗೊಳ್ಳುವವರು ಐದು ವರ್ಷಗಳ ಕಾಲ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ಇರುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ಸ್ಥಾನಮಾನವನ್ನು ಪಕ್ಷ ಕೊಟ್ಟು ಗುರುತಿಸಲಿದೆ ಎಂದು ಅವರು ವಿವರಿಸಿದರು.ಪಕ್ಷ ಸಂಘಟನೆಗೆ ಒತ್ತು: ಜೆಡಿಎಸ್ ಪ್ರಾಬಲ್ಯವಿರುವ ಹಾಗೂ ಮತ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಬಿಜೆಪಿಯನ್ನು ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯಿಂದ ಕಿತ್ತು ಹಾಕಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.ಗ್ರಾಮ ಮಟ್ಟದಲ್ಲಿ ಯುವ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ, ಗ್ರಾಮೀಣ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಪಡಲಾಗುತ್ತದೆ. ಕೇಂದ್ರ ಸರ್ಕಾರದ ಯೋಜನೆಗಳು, ಕೇಂದ್ರದಿಂದ ದೊರೆಯುತ್ತಿರುವ ಆರ್ಥಿಕ ಮತ್ತು ಇತರ ನೆರವುಗಳ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸಿ ಹೇಳಿ, ಅವರನ್ನು ಯೋಜನೆಗಳ ಫಲಾನುಭವಿಗಳನ್ನಾಗಿ ಮಾಡಲಾಗುವುದು. ಯೋಜನೆಗಳಿಂದ ವಂಚಿತರಾಗಿರುವವರನ್ನು ಈ ಯೋಜನಾ ವ್ಯಾಪ್ತಿಗೆ ತರಲು ಶ್ರಮಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಹಂತ ಹಂತವಾಗಿ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಮತ ಬ್ಯಾಂಕ್ ಅನ್ನು ಹೆಚ್ಚಿಸಿಕೊಂಡು ಬಲಿಷ್ಠ ಕೋಟೆ ನಿರ್ಮಿಸುವುದು ನಮ್ಮ ಉದ್ದೇಶವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಸ್ತುವಾರಿ ಎ.ಪಿ.ಬಸವರಾಜು, ಉಪಾಧ್ಯಕ್ಷ ಜಿ.ಎನ್.ನಟರಾಜ್, ಪ್ರಧಾನ ಕಾರ್ಯದರ್ಶಿಗಳಾದ ನಟರಾಜ್ ಗೌಡ, ಬಾನು ಪ್ರಕಾಶ್, ಸಾದತ್ ಮೆಹದಿ, ರಾಜರಾಜೇಶ್ವರಿ ನಗರದ ಅಧ್ಯಕ್ಷ ಕೃಷ್ಣ, ಕನಕಪುರ ಅಧ್ಯಕ್ಷ ನಾಗರಾಜ್, ಚನ್ನಪಟ್ಟಣದ ಅಧ್ಯಕ್ಷ ಸತೀಶ್, ಬೆಂಗಳೂರು ದಕ್ಷಿಣದ ಅಧ್ಯಕ್ಷ ರವಿ ರಂಗರಾಜ್, ಶಿವಣ್ಣ, ರಾಜು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry