ಶನಿವಾರ, ಮಾರ್ಚ್ 6, 2021
32 °C
ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಗಂಭೀರ ಆರೋಪ

ಭ್ರಷ್ಟಾಚಾರ: ರೆಡ್ಡಿಗಳನ್ನೂ ಮೀರಿಸಿದ ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭ್ರಷ್ಟಾಚಾರ: ರೆಡ್ಡಿಗಳನ್ನೂ ಮೀರಿಸಿದ ಸಿದ್ದರಾಮಯ್ಯ

ಬೆಂಗಳೂರು: ‘ಭ್ರಷ್ಟಾಚಾರದಲ್ಲಿ ಬಳ್ಳಾರಿಯ ರೆಡ್ಡಿ ಸಹೋದರರನ್ನು ಮೀರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದರು.ಪಕ್ಷದ ಕಚೇರಿಯಲ್ಲಿ ಗುರುವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿ ಭಾಷೆ ಬಳಕೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಕೀಳುಮಟ್ಟದ ಭಾಷೆಯಲ್ಲಿ  ಹಗುರವಾಗಿ ಮಾತನಾಡಿರುವುದು ಸರಿಯಲ್ಲ’ ಎಂದರು.‘ಇಲ್ಲಿಂದ (ಜನತಾ ಪರಿವಾರ) ಹೋಗಿರುವ 50–60 ಮಂದಿ ಕಾಂಗ್ರೆಸ್‌ನಲ್ಲಿ ಇದ್ದಾರೆ. ಆದರೆ, ಸಿದ್ದರಾಮಯ್ಯ ಹೊರತುಪಡಿಸಿ, ಕಾಂಗ್ರೆಸ್‌ನಲ್ಲಿ ಯಾರೊಬ್ಬರೂ ನನ್ನ ಬಗ್ಗೆ ಟೀಕೆ ಮಾಡುತ್ತಿಲ್ಲ. ಅವರಿಗೆಲ್ಲ ವಾಸ್ತವ ಗೊತ್ತಿದೆ’ ಎಂದರು.‘ಒಂದು ಸ್ಥಾನ ಗಳಿಸಲೂ ಜೆಡಿಎಸ್‌ಗೆ ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ನಮಗೆ ಸ್ವಾಭಿಮಾನ ಇಲ್ಲವೇ? ಕೈಕಟ್ಟಿಕೊಂಡು ಸುಮ್ಮನೆ ಕೂರುತ್ತೇವೆಯೇ’ ಎಂದು ಖಾರವಾಗಿ ಪ್ರಶ್ನಿಸಿದರು.‘ಎನ್‌ಡಿಎ ಮತ್ತು ಯುಪಿಎಯಿಂದ ರಾಜ್ಯಕ್ಕೆ ಆಗಿರುವ ಅನ್ಯಾಯಗಳನ್ನು ಜನರ ಮುಂದೆ ಇಟ್ಟು ಮತ ಯಾಚಿಸುತ್ತೇವೆ. ಇದೇ 29ರಿಂದ ಏಪ್ರಿಲ್‌ 15ರವರೆಗೂ ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ’ ಎಂದರು.‘ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ದ್ರೋಹ ಮಾಡಿವೆ. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು ಗಟ್ಟಿಯಾಗಿರುವುದರಿಂದ ಆ ರಾಜ್ಯ ಅಭಿವೃದ್ಧಿ ಆಗಿದೆ. ಹಗಲು – ರಾತ್ರಿ ಹೋರಾಟ ಮಾಡಿ ಇಲ್ಲೂ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ನಿಮ್ಮೊಂದಿಗೆ ನಾನು ಇರುತ್ತೇನೆ’ ಎಂದು ಕಾರ್ಯಕರ್ತರಿಗೆ ಸಲಹೆ ಮಾಡಿದರು.ಯುಪಿಎ, ಎನ್‌ಡಿಎ ಅಧಿಕಾರಕ್ಕೆ ಬರಲು ಸಾಧ್ಯ­ವಿಲ್ಲ. ಹೆಚ್ಚು ಸ್ಥಾನಗಳಿಸುವ ಪ್ರಾದೇಶಿಕ ಪಕ್ಷಗಳು, ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿ­ಕೊಂಡು ಸರ್ಕಾರ ರಚಿಸಲು ಮುಂದಾಗುತ್ತವೆ. ಯಾವ ಪ್ರಾದೇಶಿಕ ಪಕ್ಷ ಪ್ರಬಲವಾಗಿರುತ್ತದೆ ಎಂಬುದರ ಮೇಲೆ ಇದು ಅವಲಂಬನೆ ಆಗಿದೆ ಎಂದರು.17 ರಾಜ್ಯಗಳಲ್ಲಿ ತ್ರಿಶೂಲ ತರಬೇತಿ ನೀಡುತ್ತಿ­ರುವುದು ದೇಶದ ಗಡಿ ರಕ್ಷಣೆ ಮಾಡುವುದಕ್ಕೋ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ರಕ್ಷಣೆಗೋ ಎಂದು ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದರು.ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಅಬ್ದುಲ್‌ ಅಜೀಂ, ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ ನಂದಿನಿ ಆಳ್ವ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ರೂತ್ ಮನೋರಮಾ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಪ್ರಭಾಕರ ರೆಡ್ಡಿ ಮಾತನಾಡಿದರು.ಶಾಸಕರಾದ ಜಮೀರ್ ಅಹಮದ್‌,  ಕೆ.ಗೋಪಾಲಯ್ಯ, ಅಖಂಡ ಶ್ರೀನಿವಾಸಮೂರ್ತಿ, ಸೈಯದ್‌ ಮುದೀರ್‌ ಆಗಾ, ಪಕ್ಷದ ಮಹಾನಗರ ಘಟಕದ ಅಧ್ಯಕ್ಷ ಆರ್‌.ರತನ್‌ಸಿಂಗ್‌  ಮತ್ತಿತರರು ಉಪಸ್ಥಿತರಿದ್ದರು.ಪ್ರಣಾಳಿಕೆ

ಶನಿವಾರ ಅಥವಾ ಭಾನುವಾರ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡ­ಲಾಗುವುದು. ರೈತರ ವಿಷಯಗಳು ಸೇರಿದಂತೆ ರಾಜ್ಯ ಮತ್ತು ರಾಷ್ಟ್ರೀಯ ವಿಚಾರಗಳು ಅದರಲ್ಲಿ ಇರುತ್ತವೆ.

ಎಚ್‌.ಡಿ.ದೇವೇಗೌಡ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.